ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಗೆ ಕ್ಯಾಂಟೀನ್ ಸ್ಥಳಾಂತರ

ನಗರಸಭೆ ಸಾಮಾನ್ಯ ಸಭೆಯಲ್ಲಿ ಹಲವು ಸದಸ್ಯರ ಸಮ್ಮತಿ
Last Updated 25 ಸೆಪ್ಟೆಂಬರ್ 2021, 3:23 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿಯ ಯೂನಿಯನ್ ಉದ್ಯಾನ ಸಮೀಪದ ಇಂದಿರಾ ಕ್ಯಾಂಟೀನ್ ಅನ್ನು ಜಿಲ್ಲಾ ಆಸ್ಪತ್ರೆ ಮುಂಭಾಗ ಸ್ಥಳಾಂತರಿಸಲು ಈ ಹಿಂದೆ ಹಲವರು ಒತ್ತಾಯಿಸಿದ್ದರು. ಈ ಪ್ರಸ್ತಾವಕ್ಕೆ ನಗರಸಭೆಯ ಹಲವು ಸದಸ್ಯರು ಸಮ್ಮತಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮತ್ತೆ ಮುನ್ನಲೆಗೆ ಬಂದ ಈ ವಿಷಯಕ್ಕೆ ಬಿಜೆಪಿ ಸದಸ್ಯರು ಬೆಂಬಲಿಸಿ, ಸಹಮತ ವ್ಯಕ್ತಪಡಿಸಿದರು. ಆದರೆ, ಇದಕ್ಕೆ ಕಾಂಗ್ರೆಸ್ ಸದಸ್ಯ ಮಂಜುನಾಥ್ ಗೊಪ್ಪೆ ಆಕ್ಷೇಪ ವ್ಯಕ್ತಪಡಿಸಿದರು.

‘ನಾನೂ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಇದೇ ಸೂಕ್ತ ಸ್ಥಳವೆಂದು ಕ್ಯಾಂಟೀನ್ ನಿರ್ಮಿಸಲಾಯಿತು. ಈಗ ಏಕಾಏಕಿ ಸ್ಥಳಾಂತರಿಸಲು ನಿರ್ಧರಿಸಿರುವುದು ಸರಿಯಲ್ಲ. ಇದರಿಂದ ಈ ಭಾಗದ ನೂರಾರು ಕಾರ್ಮಿಕರಿಗೆ ತೊಂದರೆ ಉಂಟಾಗಲಿದೆ’ ಎಂದು ಗೊಪ್ಪೆ ತಿಳಿಸಿದರು.

‘ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ನೋಡಲು ಬರುವ ಸಂಬಂಧಿಕರ ಸಂಖ್ಯೆ ಹೆಚ್ಚಿದೆ ಎಂಬ ಉದ್ದೇಶದಿಂದ ಅಲ್ಲಿಗೆ ಸ್ಥಳಾಂತರಿಸುವುದೇ ಆದರೆ, ಪ್ರವಾಸಿ ಮಂದಿರ ಸಮೀಪ ಇರುವ ಕ್ಯಾಂಟೀನ್ ಸ್ಥಳಾಂತರಿಸಿ ಅನುಕೂಲ ಮಾಡಿಕೊಡಿ. ಅದನ್ನು ಬಿಟ್ಟು ಈಗ ಕೈಗೊಂಡಿರುವ ನಿರ್ಧಾರ ಸೂಕ್ತವಲ್ಲ’ ಎಂದು ಪ್ರಶ್ನಿಸಿದರು.

‘ಸ್ಥಳಾಂತರದ ವಿಚಾರದಲ್ಲಿ ಯಾವುದೇ ದುರುದ್ದೇಶವಿಲ್ಲ. ಕ್ಯಾಂಟೀನ್‌ಗೆ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಬರುತ್ತಿಲ್ಲ. ರಾತ್ರಿ ಊಟ ಮಾಡುವವರ ಸಂಖ್ಯೆಯೂ ಕಡಿಮೆ ಆಗಿದೆ. ಹೀಗಾಗಿ ಹೆಚ್ಚು ಜನರಿಗೆ ಉಪಯೋಗವಾಗಲಿ ಎಂಬ ಸದುದ್ದೇಶದಿಂದ ಸ್ಥಳಾಂತರಿಸಲಾಗುತ್ತಿದೆ’ ಎಂದು ಪೌರಾಯುಕ್ತ ಹನುಮಂತರಾಜು ಪ್ರತಿಕ್ರಿಯಿಸಿದರು.

ಹೊಸ ರೂಪದೊಂದಿಗೆ ಕಂಗೊಳಿಸುತ್ತಿರುವ ಯೂನಿಯನ್ ಉದ್ಯಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ಅವಕಾಶ ಕಲ್ಪಿಸಲು ₹ 10 ದರ ನಿಗದಿಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಎಡಬದಿಯ ರಸ್ತೆಯಲ್ಲಿ ರಾತ್ರಿ ವೇಳೆ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಈ ಮಾರ್ಗ ಬಂದ್ ಮಾಡುವ ವಿಚಾರಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಶ್ವೇತಾ ವೀರೇಶ್‌ ಅವರು ಈಚೆಗೆ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನು ಜಿಲ್ಲಾಧಿಕಾರಿ ಅಂಗೀಕರಿಸಿದ್ದಾರೆ ಎಂಬ ಮಾಹಿತಿಯನ್ನು ಹನುಮಂತರಾಜು ಸಭೆಗೆ ತಿಳಿಸಿದರು.

‘ಬಲವಂತದಿಂದ ರಾಜೀನಾಮೆ ನೀಡಿಲ್ಲ. ಪಕ್ಷದ ಬೇರೆ ಸದಸ್ಯರಿಗೂ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಈ ಹಿಂದೆ ಕೈಗೊಂಡ ನಿರ್ಧಾರದಂತೆ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಬಿಜೆಪಿ ಸದಸ್ಯೆ ಶ್ವೇತಾ ಅವರು ತಿಳಿಸಿದರು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT