ಸಂಭ್ರಮದ ಹನುಮಜಯಂತಿ, ಬ್ರಹ್ಮರಥೋತ್ಸವ

ಶ್ರೀರಾಂಪುರ: ಹೋಬಳಿಯ ಸೋಮಸಂದ್ರ ಗ್ರಾಮದಲ್ಲಿ ಹನುಮ ಜಯಂತಿ ನಿಮಿತ್ತ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಸಂಭ್ರಮದಿಂದ ನೆರವೇರಿತು.
ಭಾನುವಾರ ಸಂಜೆ ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸವದ ಅಂಗವಾಗಿ ಕರೆತರಲಾಗಿದ್ದ ಕೈನಡು ಕರಿಯಮ್ಮ ದೇವಿಯ ಕೂಡುಬೇಟಿ ನಡೆಸಿ ನಂತರ ವಿವಿಧ ಹೋಮ, ಹವನ, ಪೂಜೆಗಳು ನಡೆದವು.
ಸೋಮವಾರ ಬೆಳಿಗ್ಗೆ ಆಂಜನೇಯಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕದ ರಾಮತಾರಕ ಹೋಮ, ಪೂರ್ಣಾಹುತಿಯ ನಂತರ 11.30ಕ್ಕೆ ಸ್ವಾಮಿಯವರ ಬ್ರಹ್ಮರಥೋತ್ಸವ ನೆರವೇರಿತು. ನಾಸಿಕ್ ಢೋಲ್, ವೀರಗಾಸೆ ಕುಣಿತ ಬ್ರಹ್ಮರಥೋತ್ಸವಕ್ಕೆ ಮೆರುಗು ನೀಡಿದ್ದವು. ಸಂಜೆ ಆಂಜನೇಯಸ್ವಾಮಿ, ಕೈನಡು ಕರಿಯಮ್ಮ ದೇವಿಗೆ ಹೂವಿನ ಅಲಂಕಾರ, ಬಾಳೆಗೊನೆ ಸೇವೆ, ಪಾನಕ ಪಲ್ಲಾರ ಸೇವೆ ನಂತರ ಲಕ್ಷದೀಪೋತ್ಸವ ನಡೆಸಲಾಯಿತು. ರಾತ್ರಿ ರಸಮಂಜರಿ ಕಾರ್ಯಕ್ರಮದ ನಂತರ ಆಕರ್ಷಕ ಮದ್ದು ಗುಂಡಿನ ಪ್ರದರ್ಶನ ನಡೆಸಲಾಯಿತು.
ಈ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬಂದಿದ್ದರು.
ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಕೋಟೆ ಆಂಜನೇಯಸ್ವಾಮಿಯ ಅದ್ದೂರಿ ಬ್ರಹ್ಮರಥೋತ್ಸವ: ಇಲ್ಲಿಯ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ಹನುಮಜಯಂತಿ ಅಂಗವಾಗಿ ಕೋದಂಡರಾಮದೇವರು ಹಾಗೂ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮದಿಂದ ನೆರವೇರಿತು.
ಸೋಮವಾರ ಬೆಳಿಗ್ಗೆ ದೇವಾಲಯದಲ್ಲಿನ ಬೃಹತ್ ಆಂಜನೇಯ ಮೂರ್ತಿಗೆ 108 ಲೀಟರ್ ಹಾಲಿನ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ರಾಮತಾರಕ ಹೋಮ, ಪೂರ್ಣಾಹುತಿಯ ನಂತರ 12ಕ್ಕೆ ಸ್ವಾಮಿಯವರ ಬ್ರಹ್ಮರಥೋತ್ಸವವನ್ನು ಭಕ್ತರು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ಕೋದಂಡರಾಮ ದೇವರು ಸೂಚಿಕಲ್ ಕೆಂಚಾಂಬಿಕ ದೇವಿ, ಗ್ರಾಮದೇವತೆ ಕೊಲ್ಲಾಪುರದಮ್ಮ ದೇವಿ, ಕಾವಲು ಭೂತೇಶ್ವರಸ್ವಾಮಿ ದೇವರ ಮೂರ್ತಿಗಳನ್ನು
ಕರೆತರಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.