ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕೆರೆಗಳಿಗೆ ವಾಣಿವಿಲಾಸ ಜಲಾಶಯದ ನೀರು ಹರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿಯು ಬುಧವಾರ 50ನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ಎತ್ತಿನ ಬಂಡಿಗಳೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಧರಣಿ ಆರಂಭಿಸಿ 50 ದಿನಗಳಾದರೂ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಸ್ಥಳಕ್ಕೆ ಬಂದು ರೈತರ ಬೇಡಿಕೆ ಆಲಿಸದಿರುವುದು ಖಂಡನೀಯ. ಹೋಬಳಿಯ ಮೂರ್ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮಳೆಗಾಲದಲ್ಲೂ ಕುಡಿಯುವುದಕ್ಕೆ ನೀರು ಇಲ್ಲ. ಟ್ಯಾಂಕರ್ ಮೂಲಕ ಕೊಡುತ್ತಿರುವ ನೀರು ಜನ–ಜಾನುವಾರುಗಳಿಗೆ ಸಾಕಾಗುತ್ತಿಲ್ಲ. ಬೇಸಿಗೆ ಸಮಯದಲ್ಲಿ ಕುರಿ–ಮೇಕೆಗಳೊಂದಿಗೆ ಮೈಸೂರು, ಹಾಸನ, ಮಂಡ್ಯ, ಶಿವಮೊಗ್ಗ ಜಿಲ್ಲೆಗಳ ಕಡೆ ವಲಸೆ ಹೋಗಿದ್ದು, ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ನೀರಿಲ್ಲದೆ ನಿತ್ಯ ನರಕಯಾತನೆ ಅನುಭವಿಸುತ್ತಿರುವ ರೈತರ ಪಾಡು ಏನಾಗಿದೆ ಎಂಬುದು ಅಧಿಕಾರಸ್ಥರಿಗೆ ತಿಳಿಯುತ್ತಿಲ್ಲ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದ ಜನರು ಗಾಯತ್ರಿ ಜಲಾಶಯವನ್ನು ನಂಬಿಕೊಂಡು ಲಕ್ಷಾಂತರ ರೂಪಾಯಿ ವ್ಯಯಿಸಿ ಅಡಿಕೆ, ತೆಂಗಿನ ತೋಟಗಳನ್ನು ಬೆಳೆಸಿದ್ದರು. ಈಗ ಅವೆಲ್ಲ ನೀರಿಲ್ಲದೆ ಒಣಗುತ್ತಿವೆ. ಸರ್ಕಾರ ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಮತ ಕೇಳಲು ಬರುವ ಜನಪ್ರತಿನಿಧಿಗಳು ಯಾವ ಗ್ರಾಮಕ್ಕೆ ಬಂದರೂ ರೈತರು ಘೇರಾವ್ ಮಾಡಲಿದ್ದಾರೆ. 16 ಕೆರೆಗಳಿಗೆ ನೀರು ಹರಿಸುವ ಆದೇಶ ಹೊರಡಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದರು.