ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರ ಬೆಳೆಯಾಗಿ ಬಾಳೆ: ಅಡಿಕೆಯೂ ಹುಲುಸು

ಉತ್ತಮ ಆದಾಯದ ನಿರೀಕ್ಷೆಯಲ್ಲಿ ವಿಶ್ವೇಶ್ವರಯ್ಯ
ಜೆ.ತಿಮ್ಮಪ್ಪ
Published 14 ಫೆಬ್ರುವರಿ 2024, 7:04 IST
Last Updated 14 ಫೆಬ್ರುವರಿ 2024, 7:04 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ರೈತರು ಬದುಕಿನ ಬಂಡಿಯನ್ನು ಸಾಗಿಸಲು ಅಂತರಬೆಳೆ ಬೆಳೆಯುವ ಮೂಲಕ ಆದಾಯ ಗಳಿಸಲು ಅನೇಕ ಪ್ರಯೋಗ ಮಾಡುವುದು ಸಾಮಾನ್ಯ. ಕೃಷಿಯನ್ನೇ ಅವಲಂಬಿಸಿರುವ ಸಮೀಪದ ಗ್ರಾಮವೊಂದರ ವೃದ್ಧ ರೈತರೊಬ್ಬರು ಅಂತರಬೆಳೆಯನ್ನೇ ನೆಚ್ಚಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಅವರೇ ಸಮೀಪದ ಹಿರಿಯೂರು ಗ್ರಾಮದ 61 ವರ್ಷ ವಯಸ್ಸಿನ ರೈತ ವಿಶ್ವೇಶ್ವರಯ್ಯ. ತಮ್ಮ 1.08 ಎಕರೆ ಜಮೀನಿನಲ್ಲಿ 2 ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಸಿದ್ದು, ಸಾಕಷ್ಟು ನೀರಿದೆ. ಒಂದೂವರೆ ವರ್ಷದ ಹಿಂದೆ ಅಡಿಕೆ ಸಸಿ ನಾಟಿ ಮಾಡಿದ್ದಾರೆ. ನಂತರ ಅಂತರ ಬೆಳೆಯಾಗಿ ಬಾಳೆ ಬೆಳೆದಿದ್ದಾರೆ.

ಬಾಳೆಗೆ ಸಬ್ಸಿಡಿ: ಬಾಳೆ ಬೆಳೆಯಲು ಹೊಳಲ್ಕೆರೆಯ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಸೌಲಭ್ಯ ಮತ್ತು ಸಲಹೆ ಪಡೆದಿದ್ದಾಗಿ ತಿಳಿಸುವ ಇವರು, ₹ 18,000 ವೆಚ್ಚದಲ್ಲಿ ಬೆಂಗಳೂರಿನಿಂದ ಏಲಕ್ಕಿ ತಳಿಯ 700 ಟಿಸ್ಯೂ (ಕಸಿ) ಬಾಳೆ ಸಸಿಗಳನ್ನು ತಂದು ನಾಟಿ ಮಾಡಿದ್ದೇವೆ ಎನ್ನುತ್ತಾರೆ.

ವಿಶ್ವೇಶ್ವರಯ್ಯ ಅವರು ಬಾಳೆ ಬೆಳೆಯಲು ಸಿದ್ಧತೆ ನಡೆಸಿದಾಗ, ತೋಟಗಾರಿಕೆಯ ಸಹಾಯಕ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಸಸಿಗಳ ಬೆಳವಣಿಗೆ ಅವಲೋಕಿಸಿ, ಮೇಲುಗೊಬ್ಬರ ಮತ್ತು ಔಷಧಿ ಸಿಂಪರಣೆ ಕುರಿತು ಸಲಹೆ ನೀಡಿದ್ದಾರೆ.

ಸಸಿ ನಾಟಿ ಮಾಡಲು ಗುಂಡಿ ತೆಗೆಸಿ ಪ್ರತಿ ಗುಣಿಗೆ ಸಾವಯವ ಗೊಬ್ಬರವನ್ನು ಹಾಗೂ ಹೊರ ಮಣ್ಣನ್ನು ಹಾಕಿ ನಂತರ ಸಸಿಗಳನ್ನು ನಾಟಿ ಮಾಡಲಾಗಿದೆ. ನಂತರ ಮೇಲು ಗೊಬ್ಬರ ಹಾಕಿ, ಪ್ರತಿಯೊಂದು ಗಿಡಗಳಿಗೂ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಸಸಿ ತುಸು ಬೆಳೆದ ಮೇಲೆ ಜೀವಾಮೃತ ನೀಡಲಾಗಿದೆ.

ತಿಂಗಳಿಗೊಮ್ಮ ಗಿಡಗಳಿಗೆ ಬೇವಿನ ಹಿಂಡಿಯನ್ನು ಗೊಬ್ಬರ ರೂಪದಲ್ಲಿ ನೀಡಲಾಗಿದೆ. ಸುಳಿ ರೋಗ ತಡೆ ಹಾಗೂ ಗೊನೆಗಳಲ್ಲಿ ಕಾಯಿ ಹೊಮ್ಮಲು ಔಷಧಿ ಸಿಂಪರಣೆ ಮಾಡಲಾಗಿದೆ. ಗುಣಿ, ಗೊಬ್ಬರ, ಹೊರ ಮಣ್ಣು, ನಾಟಿ ಕೂಲಿ, ಔಷಧಿ ಸಿಂಪಡಣೆ, ಕಳೆ ಸೇರಿದಂತೆ ಪೋಷಣೆಗಾಗಿ ಈವರೆಗೆ ₹ 60,000 ವ್ಯಯಿಸಲಾಗಿದೆ ಎಂದು ವಿಶ್ವೇಶ್ವರಯ್ಯ ತಿಳಿಸುತ್ತಾರೆ.

ಆದಾಯದ ನಿರೀಕ್ಷೆ: ಈಗ 600 ಗೊನೆಗಳು ಕಟಾವಿಗೆ ಬಂದಿವೆ. ಪ್ರತಿಯೊಂದು ಗೊನೆ ಸುಮಾರು 9ರಿಂದ 10 ಕೆ.ಜಿ ತೂಗುತ್ತಿವೆ. ಮೊದಲ ಹಂತದಲ್ಲಿ 5ರಿಂದ 5.5 ಟನ್‌ ಬಾಳೆ ಸಿಗುವ ನಿರೀಕ್ಷೆ ಇದೆ. ಕೆ.ಜಿ.ಗೆ ₹ 26ರಿಂದ ₹ 28 ದರ ಸಿಗಲಿದೆ. ಬೆಲೆ ಇನ್ನಷ್ಟು ಹೆಚ್ಚಿದಲ್ಲಿ ₹ 1.50 ಲಕ್ಷ ಆದಾಯ ಬರಬಹುದು. ಮಾರ್ಚ್‌ ಕೊನೆಗೆ ಮಿಕ್ಕ ಗೊನೆಗಳು ಖಟಾವಿಗೆ ಬರಲಿದ್ದು, 1.25 ಟನ್‌ ಇಳುವರಿ ನಿರೀಕ್ಷೆ ಇದೆ. ಒಟ್ಟು ₹ 1.75 ಲಕ್ಷ ಆದಾಯದ ನಿರೀಕ್ಷೆ ಇದೆ. ಖರ್ಚು ಕಳೆದು ₹ 90,000 ಆದಾಯ ಸಿಗಬಹುದಾಗಿದೆ. ಜತೆಗೆ ಅಡಿಕೆ ಸಸಿಗಳಿಗೆ ಉತ್ತಮ ಗೊಬ್ಬರದ ಅಂಶ, ನೀರು ಹಾಗೂ ಔಷಧಿಗಳ ಸಿಂಪರಣೆಯಿಂದಾಗಿ ಸಸಿಗಳು ಹುಲುಸಾಗಿ ಬಂದಿವೆ. ಕೃಷಿ ಕಾಯಕ್ಕೆ ಪತ್ನಿ ಸಿದ್ಧಮ್ಮ ಹಾಗೂ ಪುತ್ರ ಮಧುಸೂಧನ್‌ ನೆರವು ನೀಡಿದ್ದಾರೆ ಎಂದೂ ಅವರು ಸ್ಮರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT