ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ನಾರಾಯಣಸ್ವಾಮಿಗೆ ಅನಾಯಾಸವಾಗಿ ಒಲಿದು ಬಂದ ಸಚಿವ ಸ್ಥಾನ

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಪಾಳೆಯದಲ್ಲಿ ಸಂಭ್ರಮ
Last Updated 8 ಜುಲೈ 2021, 3:02 IST
ಅಕ್ಷರ ಗಾತ್ರ

ಚಿತ್ರದುರ್ಗ: ಅನಿರೀಕ್ಷಿತವಾಗಿ ಕ್ಷೇತ್ರ ಬದಲಿಸಿ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಒಡ್ಡಿ ಅಭೂತಪೂರ್ವ ಗೆಲುವಿನೊಂದಿಗೆ ಬಿಜೆಪಿಗೆ ಬಲ ತುಂಬಿದ ಎ.ನಾರಾಯಣಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ಅನಾಯಸವಾಗಿ ಒಲಿದು ಬಂದಿದೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಪಾಳೆಯದಲ್ಲಿ ಇದು ಸಂಭ್ರಮ ಮೂಡಿಸಿದೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯದಲ್ಲಿ ಸಂತಸ ಕಾಣುತ್ತಿದೆ. ಕ್ಷೇತ್ರವ್ಯಾಪ್ತಿಯಲ್ಲಿ ಬಿಜೆಪಿಯ ಬೇರುಗಳು ಇನ್ನಷ್ಟು ಗಟ್ಟಿಯಾಗಲು ಇದು ಸಹಕಾರಿ ಆಗುವ ಸಾಧ್ಯತೆ ಇದೆ.

ಎ.ನಾರಾಯಣಸ್ವಾಮಿ ಅವರು ಮೂಲತಃ ಆನೇಕಲ್‌ ನಿವಾಸಿ. ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಲೋಕಸಭಾ ಕ್ಷೇತ್ರಕ್ಕೆ ಅವರು ಕಾಲಿಟ್ಟಿದ್ದು ಅನಿರೀಕ್ಷಿತ. ಪಕ್ಷ ಸಂಘಟನೆ, ಜಾತಿ ಸಮೀಕರಣದ ಭಾಗವಾಗಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು. ಇದಕ್ಕೂ ಮೊದಲು ವಿಧಾನಸಭಾ ಚುನಾವಣೆಯಲ್ಲಿ ಎರಡು ಬಾರಿ ಕಂಡಿದ್ದ ಸೋಲು ಅವರನ್ನು ಚಿತ್ರದುರ್ಗಕ್ಕೆ ಕರೆತಂದಿತು.

ಸಂಘಪರಿವಾರದ ನಾಯಕರೊಂದಿಗೆ ನಿಕಟ ಒಡನಾಟ ಹೊಂದಿರುವ ಸಂಸದರು ಕ್ಷೇತ್ರದಲ್ಲಿ ಭಿನ್ನವಾಗಿಯೇ ಗುರುತಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ನೆಲೆಸಿದ್ದರೂ ಲೋಕಸಭಾ ಕ್ಷೇತ್ರದಲ್ಲಿ ಪಾದರಸದಂತೆ ಸಂಚರಿಸಿ ಪರಿಚಿತರಾಗಿದ್ದಾರೆ. ಕ್ಷೇತ್ರದ ಪ್ರತಿ ಮೂಲೆಯನ್ನು ಸುತ್ತಿ ಜನರ ಸಂಕಷ್ಟಗಳಿಗೆ ಕಿವಿಯಾಗಿದ್ದಾರೆ. ಅಭಿವೃದ್ಧಿ ಕಾಮಗಾರಿ, ಜನಪರ ಕಾರ್ಯಗಳಿಗೆ ತೊಡಕುಂಟಾದಾಗ ಸ್ವಪಕ್ಷದ ಶಾಸಕರನ್ನೂ ಪ್ರಶ್ನಿಸಿದ್ಧಾರೆ. ಭದ್ರಾ ಮೇಲ್ದಂಡೆ, ನೇರ ರೈಲು ಮಾರ್ಗದ ಬಗ್ಗೆ ಹೊಂದಿದ್ದ ಕಾಳಜಿ ಆಗಾಗ ವ್ಯಕ್ತವಾಗುತ್ತಲೇ ಇರುತ್ತದೆ.

‘ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ’ ಎಂಬುದನ್ನು ಸಂಸದರಾಗಿ ಆಯ್ಕೆಯಾದಾಗ ನಾರಾಯಣಸ್ವಾಮಿ ಸ್ಪಷ್ಟವಾಗಿ ಹೇಳಿದ್ದರು. ಮೊದಲ ಬಾರಿ ಸಂಸದರಾದ ಅವರಿಗೆ ಸಚಿವ ಸ್ಥಾನ ಒಲಿಯಬಹುದೇ ಎಂಬ ಅನುಮಾನವಿತ್ತು. ಕೇಂದ್ರ ಸಚಿವ ಸಂಪುಟದ ಪುನರ್‌ ರಚನೆಯ ಪ್ರಯತ್ನಗಳು ನಡೆಯುತ್ತಿದ್ದಾಗಲೂ ಸಂಸದರು ಕ್ಷೇತ್ರದಲ್ಲಿದ್ದರು. ಕೋವಿಡ್‌ ಮೂರನೇ ಅಲೆಯ ಸಿದ್ಧತೆ, ಕಂದಾಯ ಗ್ರಾಮಗಳ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸುವಲ್ಲಿ ನಿರತರಾಗಿದ್ದರು.

ಪರಿಶಿಷ್ಟ ಜಾತಿಯ ಕೋಟಾದಲ್ಲಿ ಕರ್ನಾಟಕದ ಒಬ್ಬ ಸಂಸದರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಮೊದಲೇ ಗೊತ್ತಾಗಿತ್ತು. ಕಲಬುರ್ಗಿ ಸಂಸದ ಡಾ.ಉಮೇಶ್‌ ಜಾದವ್‌ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಶಕ್ತಿ ಅವರ ಬೆನ್ನಿಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಬಿಜೆಪಿ ಬೇರೆಯದೇ ಲೆಕ್ಕಾಚಾರ ಮಾಡಿದಂತೆ ಕಾಣುತ್ತಿದೆ.

ಮುಂಬರುವ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡೇ ಸಚಿವ ಸಂಪುಟದಲ್ಲಿ ಹಲವು ಸಮುದಾಯದ ನಾಯಕರಿಗೆ ಆದ್ಯತೆ ನೀಡಲಾಗಿದೆ. ನೇರ, ನಿಷ್ಠೂರ ಮನೋಭಾವದಿಂದ ಪರಿಚಿತರಾಗಿರುವ ನಾರಾಯಣಸ್ವಾಮಿ ಅವರು ಮಾದಿಗ ಸಮುದಾಯದ ಪ್ರಬಲ ನಾಯಕ ಕೂಡ ಹೌದು. ಸಮಾಜಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಒಳಮೀಸಲಾತಿಯ ವಿಚಾರವನ್ನು ಮುನ್ನೆಲೆಗೆ ತಂದು ಚರ್ಚೆ ಹುಟ್ಟುಹಾಕಿದರು. ಒಳಮೀಸಲಾತಿಯ ಪ್ರಬಲವಾಗಿ ಸಮರ್ಥನೆ ಮಾಡುವ ಅವರು ಸಚಿವರಾಗಿದ್ದು ಬಿಜೆಪಿಗೆ ಇನ್ನಷ್ಟು ಬಲ ಸಿಗುವ ನಿರೀಕ್ಷೆ ಇದೆ.

1952ರಿಂದಲೂ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಅಸ್ತಿತ್ವದಲ್ಲಿದೆ. ಕ್ಷೇತ್ರ ಈವರೆಗೆ 17 ಚುನಾವಣೆಗಳನ್ನು ಎದುರಿಸಿದೆ. ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ದಾವಣಗೆರೆಯೂ ಸೇರಿತ್ತು. 1971ರಲ್ಲಿ ನಡೆದ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ಕೊಂಡಜ್ಜಿ ಬಸಪ್ಪ ಅವರು ಇಂದಿರಾಗಾಂಧಿ ಅವರ ಸಚಿವ ಸಂಪುಟ ಸೇರಿದ್ದರು. ಆ ಬಳಿಕ ಕ್ಷೇತ್ರ ಪ್ರತಿನಿಧಿಸುವ ಸಂಸದರಿಗೆ ಸಚಿವ ಸಂಪುಟದಲ್ಲಿ ಎರಡನೇ ಬಾರಿಗೆ ಅವಕಾಶ ಸಿಕ್ಕಿದೆ.

ಬಿಜೆಪಿಗೆ ಧನ್ಯವಾದ ಸಲ್ಲಿಸಿದ ಸ್ವಾಮೀಜಿ

ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಿದ ಬಿಜೆಪಿ ಹೈಕಮಾಂಡ್‌ಗೆ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಧನ್ಯವಾದ ಸಲ್ಲಿಸಿದ್ದಾರೆ.

ಬುಧವಾರ ಮಧ್ಯಾಹ್ನ ಸಚಿವ ಸ್ಥಾನದ ಅಧಿಕೃತ ಘೋಷಣೆ ಹೊರಬೀಳುತ್ತಿದ್ದಂತೆ ಸ್ವಾಮೀಜಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಮಾದಿಗ ಸಮುದಾಯದ ಜನಪ್ರತಿನಿಧಿಗೆ ಅವಕಾಶ ಕಲ್ಪಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ವಿಸ್ತರಣೆಯ ಸಂದರ್ಭದಲ್ಲಿ ಸಮುದಾಯವನ್ನು ಗುರುತಿಸಿ ಸಂತಸ ಮೂಡಿಸಿದೆ. ನಾರಾಯಣಸ್ವಾಮಿ ಅವರಿಗೆ ಅವಕಾಶ ಕಲ್ಪಿಸಿದ್ದು ಹರ್ಷವುಂಟು ಮಾಡಿದೆ. ಸಮುದಾಯದ ಏಳಿಗೆಗೆ ಇದು ಸಹಕಾರಿಯಾಗಲಿದೆ’ ಎಂದು ಸ್ವಾಮೀಜಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT