ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಲ್ಲಿರುವ ಹೈಟೆಕ್‌ ಬಸ್‌ ನಿಲ್ದಾಣ ಕೃತಿಯಲ್ಲಿಲ್ಲ!

ನಿತ್ಯ ಸಾವಿರಾರು ಬಸ್‌ ಸಂಚಾರ l ಬಸ್‌ ನಿಲುಗಡೆಗೆ ಪರದಾಟ l ಶಪಿಸುವ ಪ್ರಯಾಣಿಕರು
Last Updated 7 ನವೆಂಬರ್ 2022, 5:42 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಶೀಘ್ರವೇ ಬಸ್‌ ನಿಲ್ದಾಣ ಸೌಲಭ್ಯ ನೀಡಲಾಗುತ್ತದೆ’, ‘ಪ್ರಯಾಣಿಕ ಸ್ನೇಹಿ ವ್ಯವಸ್ಥೆಗೆ ಚಿಂತನೆ’, ‘ಹೈಟೆಕ್‌ ಬಸ್‌ ನಿಲ್ದಾಣಕ್ಕೆ ಯೋಜನೆ’, ‘ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕಾರಂಜಿ ನಿರ್ಮಾಣ’... ಹೀಗೆ ವರ್ಣರಂಜಿತ ಮಾತುಗಳಲ್ಲೇ ಜನಪ್ರತಿನಿಧಿಗಳು ಚಿತ್ರದುರ್ಗದ ಬಸ್‌ ನಿಲ್ದಾಣವನ್ನು ಅಭಿವೃದ್ಧಿ ಮಾಡಿದ್ದಾರೆ.

ರಾಜ್ಯದಲ್ಲೇ ಅತ್ಯಂತ ಹಿಂದುಳಿದಿರುವ ಜಿಲ್ಲೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಚಿತ್ರದುರ್ಗವು ಅಭಿವೃದ್ಧಿಯ ವಿಷಯದಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ನರಳುತ್ತಿದೆ. ಈ ಕುರಿತ ಆರ್ತನಾದ ಮಾತ್ರ ಅರಣ್ಯರೋಧನವಾಗಿದೆ.

ಮಧ್ಯ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಚಿತ್ರದುರ್ಗಕ್ಕೆ ನಿತ್ಯ ಸಾವಿರಕ್ಕೂ ಅಧಿಕ ಬಸ್‌ಗಳು ಬಂದು ಹೋಗುತ್ತವೆ. ಅಂದಾಜು 20,000ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣಕ್ಕೆ ಭೇಟಿ ನೀಡುತ್ತಾರೆ. ಆದರೆ, ಕನಿಷ್ಠ ಸೌಲಭ್ಯವಿಲ್ಲದ ಕಾರಣ ಜನರು ವ್ಯವಸ್ಥೆಯನ್ನು ಶಪಿಸುವುದು ಮುಂದುವರಿದಿದೆ.

ನಿರಂತರ ಹೋರಾಟದ ಪರಿಣಾಮ 2018ರ ಫೆ.9ರಂದು ಸಾರಿಗೆ ಸಂಸ್ಥೆಯ ದಾವಣಗೆರೆ ವಿಭಾಗದಿಂದ ವಿಭಜನೆಗೊಂಡು ಚಿತ್ರದುರ್ಗ ವಿಭಾಗ ಕಾರ್ಯರಂಭ ಮಾಡಿತು. ವಿಭಾಗ ವ್ಯಾಪ್ತಿಯಲ್ಲಿ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಹಾಗೂ ಪಾವಗಡ ಘಟಕಗಳಿವೆ. ಒಟ್ಟು 309 ಬಸ್‌ಗಳಿದ್ದು, ನಿತ್ಯ 1 ಲಕ್ಷ ಕಿ.ಮೀ. ಕಾರ್ಯಾಚರಣೆ ಮಾಡುತ್ತಿವೆ. ಅಂದಾಜು 75,000 ಪ್ರಯಾಣಿಕರಿಗೆ ಸೇವೆ ನೀಡಲಾಗುತ್ತಿದೆ. ನಿತ್ಯ ಅಂದಾಜು ₹ 35.35 ಲಕ್ಷ ಆದಾಯ ಗಳಿಸುತ್ತಿದೆ.

ಚಿತ್ರದುರ್ಗ, ಭರಮಸಾಗರ, ಸಿರಿಗೆರೆ, ಹಿರಿಯೂರು, ಚಳ್ಳಕೆರೆ, ಹೊಸದುರ್ಗ ಹಾಗೂ ಹೊಳಲ್ಕೆರೆಯಲ್ಲಿ ಬಸ್‌ ನಿಲ್ದಾಣಗಳಿವೆ. ಆದರೆ, ಎಲ್ಲೆಡೆ ಸೌಲಭ್ಯ ಮರೀಚಿಕೆಯಾಗಿದೆ. ನಗರದ ಹೃದಯ ಭಾಗದಲ್ಲಿರುವ ಬಸ್‌ ನಿಲ್ದಾಣ ಅತ್ಯಂತ ಕಿರಿದಾಗಿದೆ. ವಿಶ್ರಾಂತಿ ಕೊಠಡಿ, ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಾಲಯ ಸೌಲಭ್ಯದ ಕೊರತೆ ಇದೆ. ಬಸ್‌ಗಳು ಒಳ ಬಂದು ಹೊರ ಹೋಗುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಇದರ ನಡುವೆ ನಿಲ್ದಾಣದೊಳಗೆ ಆಟೊ, ಬೈಕ್‌ಗಳು ಎಗ್ಗಿಲ್ಲದೆ ನುಗ್ಗುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ.‌

ಬೆಂಗಳೂರು, ತುಮಕೂರು, ವಿಜಯನಗರ, ಬಳ್ಳಾರಿ, ಕೊಪ್ಪಳ, ಹುಬ್ಬಳ್ಳಿ, ಬೆಳಗಾವಿ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ವಿವಿಧ ಭಾಗಗಳಿಗೆ ಬಸ್‌ ಸೌಲಭ್ಯ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ, ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಪ್ಲಾಟ್‌ಫಾರ್ಮ್‌ಗಳು ಇರುವುದರಿಂದ ಬಸ್‌ ಚಾಲಕರು, ನಿರ್ವಾಹಕರು ಎಲ್ಲಿ ಬಸ್‌ ನಿಲುಗಡೆ ಮಾಡಬೇಕೆಂದು ಯೋಚಿಸಿದರೆ, ಪ್ರಯಾಣಿಕರು ಬಸ್‌ಗಳು ಎಲ್ಲಿ ಬರುತ್ತವೆ ಎಂದು ಪರದಾಡುವ ಸ್ಥಿತಿ ಎದುರಾಗಿದೆ.

ಗ್ರಾಮೀಣ ಭಾಗದಿಂದ ಶಾಲೆ– ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಪಾಡು ಹೇಳತೀರಾಗಿದೆ. ಅಂದಾಜು 18,520 ವಿದ್ಯಾರ್ಥಿ ಪಾಸ್‌ಗಳನ್ನು ವಿಭಾಗೀಯ ಕಚೇರಿಯಿಂದ ವಿತರಿಸಲಾಗಿದೆ. ‘ಬಸ್‌ಗಾಗಿ ಬಿಸಿಲು, ಮಳೆಯಲ್ಲಿ ಕಾಯುವ ಸ್ಥಿತಿ ಮಾಮೂಲಿಯಾಗಿದೆ’ ಎನ್ನುತ್ತಾರೆ ಹಾಯ್ಕಲ್ ಗ್ರಾಮದ ವಿದ್ಯಾರ್ಥಿ ಪವನ್‌.

ದೂರದ ಬೆಂಗಳೂರು, ಹುಬ್ಬಳ್ಳಿ, ಹೊಸಪೇಟೆ ಸೇರಿ ವಿವಿಧೆಡೆಯಿಂದ ಬರುವ ಪ್ರಯಾಣಿಕರು ಶೌಚಾಲಯಕ್ಕೆ ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಈ ಎಲ್ಲದಕ್ಕೂ ತೆರೆ ಎಳೆಯಲು ಎಲ್‌ಐಸಿ ಮುಂಭಾಗದ ಕೆಎಸ್‌ಆರ್‌ಟಿಸಿಗೆ ಸೇರಿದ ಜಾಗದಲ್ಲಿ
ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸುವ ಯೋಜನೆ ಮಾತ್ರ ಇನ್ನೂ ಕಾಗದದ ಮೇಲೆಯೇ ಉಳಿದಿದೆ.

ಚಿತ್ರದುರ್ಗ ತಾಲ್ಲೂಕಿಗೆ ಮತ್ತೊಂದು ಘಟಕದ ಅವಶ್ಯಕತೆಯಿದೆ. ಜತೆಗೆ ವೋಲ್ವೊ ಬಸ್‌ಗಳ ಸಂಚಾರಕ್ಕೆ ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾಗಿದೆ. ಆದರೆ, ಈ ವಿಭಾಗದಲ್ಲಿ ಈವರೆಗೂ ಒಂದೇ ಒಂದು ವೋಲ್ವೊ ಬಸ್‌ಗಳಿಲ್ಲ.

ಗ್ರಾಮೀಣ ಸಂಪರ್ಕಕ್ಕೆ ನಾನಾ ತೊಡಕು

ಜಿಲ್ಲೆಯಲ್ಲಿ 1,568 ಹಳ್ಳಿಗಳಿದ್ದು, ಅದರಲ್ಲಿ ರಾಷ್ಟ್ರೀಕೃತ ವಲಯ ವ್ಯಾಪ್ತಿಯಲ್ಲಿ ಬರುವ 74 ಹಳ್ಳಿಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ರಾಷ್ಟ್ರೀಕೃತವಲ್ಲದ ವಲಯದಲ್ಲಿ 1,494 ಹಳ್ಳಿಗಳಿವೆ. ಈ ವಲಯದಲ್ಲಿ 894 ಹಳ್ಳಿಗಳಿಗೆ ಮಾತ್ರ ಖಾಸಗಿ, ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸುತ್ತವೆ. ಉಳಿದ 600 ಹಳ್ಳಿಗಳಲ್ಲಿ ಖಾಸಗಿ ಬಸ್‌ಗಳು ಸಂಚಾರ ನಡೆಸುತ್ತಿವೆ.

ಈ ಮಾರ್ಗದಲ್ಲಿ ಸಾರಿಗೆ ಸಂಸ್ಥೆ ಬಸ್‌ ಸಂಚಾರಕ್ಕೆ ಆರ್‌ಟಿಒ ಅನುಮತಿ ಸಿಗುತ್ತಿಲ್ಲ. ಇದಕ್ಕೆ ಖಾಸಗಿ ಬಸ್‌ ಮಾಲೀಕರ ಲಾಬಿ, ಜನಪ್ರತಿನಿಧಿಗಳ ಒತ್ತಡವೇ ಮುಖ್ಯ ಕಾರಣ ಎನ್ನುತ್ತಾರೆ ವಿಭಾಗದ ಅಧಿಕಾರಿಗಳು.

ಎಲ್ಲವೂ ಪ್ರಗತಿ, ಪ್ರಸ್ತಾವನೆಯಲ್ಲಿ

ವಿಭಾಗದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬಹುತೇಕ ಕಾಮಗಾರಿಗಳು ಪ್ರಗತಿ, ಟೆಂಡರ್‌ ಮಂಜೂರಾತಿ, ಪ್ರಸ್ತಾವನೆ ಹಂತದಲ್ಲಿವೆ.

ಚಿತ್ರದುರ್ಗ ಬಸ್‌ ಘಟಕದ ಆವರಣಕ್ಕೆ ಕಾಂಕ್ರೀಟ್‌ ಹಾಕುವುದು ಮಾತ್ರ ಪೂರ್ಣಗೊಂಡಿದ್ದು, ಉಳಿದ 4 ಕಾಮಗಾರಿಗಳು ಪ್ರಗತಿಯಲ್ಲಿವೆ. ಹೊಳಲ್ಕೆರೆ ಬಸ್‌ ಘಟಕದ ಉಪ ಕೆಲಸ ಇನ್ನೂ ಪ್ರಾರಂಭಿಸಬೇಕಿದೆ.

ಹಿರಿಯೂರು, ಮೊಳಕಾಲ್ಮುರು ಬಸ್‌ ಘಟಕ ಹಾಗೂ ಬಸ್‌ ನಿಲ್ದಾಣದ ಟೆಂಡರ್ ಮಂಜೂರಾತಿ ಹಂತದಲ್ಲಿದೆ. ಭರಮಸಾಗರ ಬಸ್‌ ನಿಲ್ದಾಣದ ಆವರಣಕ್ಕೆ ಕಾಂಕ್ರೀಟ್‌ ಹಾಗೂ ಚಿತ್ರದುರ್ಗ ಬಸ್‌ ನಿಲ್ದಾಣದ ಹಳೆಯ ಶೌಚಾಲಯ ದುರಸ್ತಿ ಟೆಂಡರ್‌
ಹಂತದಲ್ಲಿವೆ. ನಾಯಕನಹಟ್ಟಿ ಬಸ್‌ ನಿಲ್ದಾಣ, ಚಿತ್ರದುರ್ಗದಲ್ಲಿ ನೂತನ ಮಾದರಿ ಬಸ್‌ ನಿಲ್ದಾಣ ಸೇರಿ 8 ಕಾಮಗಾರಿಗಳು ಪ್ರಸ್ತಾವನೆ ಹಂತದಲ್ಲಿವೆ.

ಸಾರಿಗೆ ಸಮಸ್ಯೆಗೆ ಕಿವಿಗೊಡದ ಜನಪ್ರತಿನಿಧಿಗಳು

ವಿ. ಧನಂಜಯ

ನಾಯಕನಹಟ್ಟಿ: ಧಾರ್ಮಿಕ ಯಕ್ಷೇತ್ರಗಳಲ್ಲಿ ಒಂದಾದ ನಾಯಕನಹಟ್ಟಿಯು ಸಾರಿಗೆ ಸಚಿವರ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಆದರೂ ಈ ಊರಿಗೆ ಬಸ್‌ ನಿಲ್ದಾಣ ಇಲ್ಲದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಸಮಸ್ಯೆ ಕಣ್ಮುಂದೆ ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ ಕ್ಷೇತ್ರದ ಜನಪ್ರತಿನಿಧಿಗಳು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ಪಟ್ಟಣದಲ್ಲಿ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಹಾಗೂ ಕುದಾಪುರದ ಬಳಿ ನಿರ್ಮಾಣವಾಗಿರುವ ವಿಜ್ಞಾನ ಸಂಸ್ಥೆಗಳಿವೆ. ಇದರಿಂದಾಗಿ ಕಳೆದ 5 ವರ್ಷದಲ್ಲಿ ಪಟ್ಟಣ ವೇಗವಾಗಿ ಬೆಳೆಯತ್ತಿದೆ.

ಪಟ್ಟಣದ ನಡುವೆ ರಾಜ್ಯ ಹೆದ್ದಾರಿ- 45 ಹಾದು ಹೋಗಿದ್ದು, ಜೇವರ್ಗಿ- ಶ್ರೀರಂಗಪಟ್ಟಣ 150 ‘ಎ’, ವಿಜಯಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ– 150 ಅನ್ನು ಸಂಪರ್ಕಿಸುತ್ತದೆ. ಬಳ್ಳಾರಿ, ಆಂಧ್ರಪ್ರದೇಶದ ರಾಯದುರ್ಗ, ಕಲ್ಯಾಣದುರ್ಗ, ಅನಂತಪುರ, ಚಳ್ಳಕೆರೆ, ಹಿರಿಯೂರು, ಬೆಂಗಳೂರು, ಜಗಳೂರು, ದಾವಣಗೆರೆ, ಹೊಸಪೇಟೆ, ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಜತೆಗೆ ಪಟ್ಟಣವು ಪ್ರಮುಖ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿಯಾಗಿದೆ.

ಶಿಥಿಲಗೊಂಡ ಬಸ್‌ ನಿಲ್ದಾಣ:

ಪಟ್ಟಣದ ಚಿಕ್ಕಕೆರೆ ಪಕ್ಕದಲ್ಲಿ 20 ವರ್ಷಗಳ ಹಿಂದೆ ಭೂಸೇನಾ ನಿಗಮ ನಿರ್ಮಿಸಿದ್ದ ಖಾಸಗಿ ಬಸ್‌ ನಿಲ್ದಾಣ ಮೂಲಸೌಕರ್ಯದ ಕೊರತೆ ಎದುರಿಸುತ್ತಿದೆ. ನಿಲ್ದಾಣದಲ್ಲಿ ಕಸದ ರಾಶಿ ಮಾಮೂಲಿಯಾಗಿದೆ. ನಿರ್ವಹಣೆ ಕೊರತೆಯಿಂದ ಬೀಡಾಡಿ ದನ, ಬೀದಿನಾಯಿ, ಹಂದಿಗಳ ತಾಣವಾಗಿದೆ. ಜತೆಗೆ ಶಿಥಿಲಾವಸ್ಥೆ ತಲುಪಿರುವುದರಿಂದ ಜನರು ಬಸ್‍ನಿಲ್ದಾಣ ಬಿಟ್ಟು ರಸ್ತೆಯ ಬದಿಯಲ್ಲೇ ನಿಂತು ಬಸ್‌ಗಳಿಗೆ ಕಾಯುವ ಪರಿಸ್ಥಿತಿ ತಲೆದೋರಿದೆ.

ಸಚಿವರ ಕ್ಷೇತ್ರದಲ್ಲೇ ನಿಲ್ದಾಣವಿಲ್ಲ:

ನಾಯಕನಹಟ್ಟಿ ಪಟ್ಟಣ 48 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ಖಾಸಗಿ ಮತ್ತು ಸರ್ಕಾರಿ ಬಸ್‍ಗಳು ನಿತ್ಯ 80ಕ್ಕೂ ಹೆಚ್ಚು ಟ್ರಿಪ್‌ ಸಂಚರಿಸುತ್ತವೆ. ಆದರೂ, ಪಟ್ಟಣದಲ್ಲಿ ಖಾಸಗಿ, ಸರ್ಕಾರಿ ಬಸ್‍ ನಿಲ್ದಾಣ ಇಲ್ಲ. ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ಮತ್ತು ಸಂಸದ, ಕೇಂದ್ರ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ ಪಟ್ಟಣದಲ್ಲಿ ಬಸ್‌ ನಿಲ್ದಾಣ ಸ್ಥಾಪನೆ, ಅಭಿವೃದ್ಧಿ ಹಾಗೂ ಜನರ ಸಮಸ್ಯೆ ಬಗೆಹರಿಸಲು ಮುಂದಾಗದಿರುವುದು ನಾಗರಿಕರಲ್ಲಿ ಬೇಸರ ಮೂಡಿಸಿದೆ.

ಸುಸಜ್ಜಿತ ನಿಲ್ದಾಣ ‘ಕನಸಿನ ಹಾದಿ’

ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ಸಾರಿಗೆ ಸಚಿವರ ಸ್ವಕ್ಷೇತ್ರ ಮೊಳಕಾಲ್ಮುರು ಪಟ್ಟಣದಲ್ಲಿ ಬಸ್‌ ನಿಲ್ದಾಣ ನಿರ್ಮಾಣ ‘ಕನಸಿನ ಹಾದಿ’ಯಾಗಿದೆ. ಎಲ್ಲವೂ ಕಥೆಯ ರೂಪದಲ್ಲಿದ್ದು, ನಿಲ್ದಾಣ ನಿರ್ಮಾಣ ಮರೀಚಿಕೆಯಾಗಿದೆ.

ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ನಿಲ್ದಾಣದ ವ್ಯವಸ್ಥೆ ಇಲ್ಲದೇ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ನಿಲ್ದಾಣದಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ನಿಲ್ಲುತ್ತಿವೆ. ಈ ಸ್ಥಳ ಕಿಷ್ಕಿಂಧೆಯಂತಾಗಿದ್ದು, ಆವರಣದಲ್ಲಿ ಬೇಕಾಬಿಟ್ಟಿಯಾಗಿ ಬಸ್‌ಗಳು, ತಳ್ಳುವ ಗಾಡಿಗಳು, ದ್ವಿಚಕ್ರ ವಾಹನ, ಸರಕು ವಾಹನಗಳನ್ನು ನಿಲ್ಲಿಸಲಾಗುತ್ತಿದೆ.

ನಿಗದಿತ ಸ್ಥಳದಲ್ಲಿ ಬಸ್ಸುಗಳು ನಿಂತ ಉದಾಹರಣೆ ಇಲ್ಲ. ಇದರಿಂದ ಪ್ರಯಾಣಿಕರಿಗೆ ಮಾರ್ಗದ ಬಸ್ಸುಗಳನ್ನು ಹಿಡಿಯುವುದು ಕಷ್ಟವಾಗುತ್ತಿದೆ. ಕೆಲ ಸಲ ಬಸ್ಸುಗಳಿಗೆ ನಿಲ್ದಾಣದಲ್ಲಿ ನಿಲ್ಲಲು ಸಹ ಜಾಗವಿಲ್ಲದಂತಾಗುತ್ತದೆ.

12 ವರ್ಷಗಳ ಹಿಂದೆ ಈ ನಿಲ್ದಾಣವನ್ನು ತುಸು ನವೀಕರಿಸಿದ್ದು ಬಿಟ್ಟರೆ ಯಾವ ಅಭಿವೃದ್ಧಿಯೂ ಆಗಿಲ್ಲ. ಬಿ. ಶ್ರೀರಾಮಲು ಸಾರಿಗೆ ಸಚಿವರಾದ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಡಿಪೊ ನಿರ್ಮಾಣ ಆಗಬಹುದು ಎಂಬುದು ಜನರ ನಿರೀಕ್ಷೆಯಾಗಿತ್ತು. ಹಳೆ ತಾಲ್ಲೂಕು ಕಚೇರಿಯನ್ನು ನೆಲಸಮ ಮಾಡಿ ಬಸ್‌ ನಿಲ್ದಾಣ ನಿರ್ಮಿಸುವ ಪ್ರಸ್ತಾವ ಪ್ರಗತಿಯಲ್ಲಿದೆ ಎನ್ನಲಾಗಿದೆ. ಈಗಿನ ಸರ್ಕಾರದ ಅವಧಿ ಕೆಲ ತಿಂಗಳು ಇದ್ದು, ಕಾಮಗಾರಿಗೆ ಚುರುಕು ನೀಡಿದಲ್ಲಿ ಮಾತ್ರ ನಿಲ್ದಾಣ ಕಾರ್ಯರೂಪಕ್ಕೆ ಬರಲಿದೆ ಎಂಬುದು ಜನರ ಆಶಯ.

‘ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಿಸಿದರೆ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಹೆದ್ದಾರಿಯಲ್ಲಿ ಸಂಚರಿಸುವ ಸಾರಿಗೆ ಬಸ್ಸುಗಳನ್ನು ಕಡ್ಡಾಯವಾಗಿ ನಿಲ್ದಾಣಕ್ಕೆ ಬಂದು ಹೋಗುವಂತೆ ಮಾಡಿದಾಗ ಮಾತ್ರ ಹೆಚ್ಚಿನ ಅನುಕೂಲವಾಗುತ್ತದೆ’ ಎನ್ನುತ್ತಾರೆ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರವಿ ಕುಮಾರ್‌.

ಚಿತ್ರದುರ್ಗದ ಹೊಸ ಬಸ್‌ ನಿಲ್ದಾಣಕ್ಕೆ ಪ್ರಯಾಣಿಕರ ಒತ್ತಡ ಹೆಚ್ಚಾಗಿದೆ. ಇರುವುದರಲ್ಲೇ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ನೂತನ ಬಸ್‌ ನಿಲ್ದಾಣ ನಿರ್ಮಾಣವಾದರೆ ಎಲ್ಲ ಸಮಸ್ಯೆ ಬಗೆಹರಿಯಲಿದೆ.

ಜಿ.ಬಿ. ಮಂಜುನಾಥ್‌, ವಿಭಾಗೀಯ ನಿಯಂತ್ರಣಾಧಿಕಾರಿ (ಪ್ರಭಾರ)

ಚಿತ್ರದುರ್ಗ ಬಸ್‌ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದೆ. ಪ್ರಯಾಣಿಕರಿಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಸೇವೆಯಲ್ಲಿರುವ ಸಿಬ್ಬಂದಿ ನಿರ್ಲಕ್ಷ್ಯದಿಂದ ಸಮಸ್ಯೆ ಹೆಚ್ಚಾಗಿದೆ.

ನಾಗರಾಜ್‌, ಪ್ರಯಾಣಿಕ, ಬೆಂಗಳೂರು

ವಿದ್ಯಾರ್ಥಿನಿಯರು, ಮಹಿಳೆಯರ ರಕ್ಷಣೆಗೆ ಹೆಚ್ಚಿನ ಗಮನಹರಿಸಬೇಕು. ಮಧ್ಯಾಹ್ನ ಪೋಲಿ ಹುಡುಗರ ಕಾಟ ಹೆಚ್ಚಿದೆ. ಪ್ರಯಾಣಿಕರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು.

ಆರ್‌. ಹೇಮಾ, ಶಿಕ್ಷಕಿ, ಚಿತ್ರದುರ್ಗ

ಪಟ್ಟಣದಲ್ಲಿ ಬಸ್‌ ನಿಲ್ದಾಣ ಇಲ್ಲದ್ದರಿಂದ ರಸ್ತೆ ಬದಿಯಲ್ಲಿ ಬಸ್‌ಗಳಿಗೆ ಕಾಯಬೇಕು. ಅದರಲ್ಲೂ ಮಹಿಳೆಯರು, ಮಕ್ಕಳು ಮತ್ತು ವಯಸ್ಸಾದವರಿಗೆ ಸಮಸ್ಯೆಯಾಗಿದೆ.

ಟಿ. ರೂಪಾ ವಿಶ್ವನಾಥ್‌ ಪಟೇಲ್‌, ನಾಯಕನಹಟ್ಟಿ

ಸರ್ಕಾರಿ ಮತ್ತು ಖಾಸಗಿ ಬಸ್‌ ನಿಲ್ದಾಣಗಳ ನಿರ್ಮಾಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು.

ಜಿ.ಬಿ. ಮುದಿಯಪ್ಪ, ಅಧ್ಯಕ್ಷರು, ನೀರಾವರಿ ಮತ್ತು ಸಾಮಾಜಿಕ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT