ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಕ್‌ಪೋಸ್ಟ್‌ ಸಿಬ್ಬಂದಿಗೆ ಬೇಕಿದೆ ‘ಆಹಾರ ಭಾಗ್ಯ’

ಸ್ಥಳೀಯ ಸಂಸ್ಥೆಗಳಿಂದ ತಿಂಡಿ, ಊಟ ಪೂರೈಸಲು ಮನವಿ
ಕೊಂಡ್ಲಹಳ್ಳಿ ಜಯಪ್ರಕಾಶ
Published 30 ಮಾರ್ಚ್ 2024, 8:30 IST
Last Updated 30 ಮಾರ್ಚ್ 2024, 8:30 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಸಕಾಲಕ್ಕೆ ಊಟ, ತಿಂಡಿ ವ್ಯವಸ್ಥೆ ಇಲ್ಲದೇ ತೊಂದರೆಗೀಡಾಗಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನ ಈ ತಪಾಸಣಾ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಜಿಲ್ಲೆಯಲ್ಲಿ ಏ.26 ರಂದು ಮತದಾನ ಇದ್ದರೂ ಬೇರೆ ಕಡೆ ಚುನಾವಣೆ ಇರುವ ಕಾರಣ ಮೇ 8ರವರೆಗೂ ಕೆಲಸ ಮಾಡಬೇಕಿದೆ. ಸುಮಾರು 60 ದಿನಗಳ ಕಾಲ ಚೆಕ್‌ಪೋಸ್ಟ್‌ ಕೆಲಸ ಮಾಡಬೇಕಿದೆ ಎಂದು ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಹೇಳಿದರು.

ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕ್ರಮವಾಗಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2, ಮಧ್ಯಾಹ್ನ 2 ರಿಂದ ರಾತ್ರಿ 10 ಗಂಟೆ, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಮೂರು ಪಾಳಿಗಳಲ್ಲಿ ಕೆಲಸ ಮಾಡಬೇಕಿದೆ. ಪ್ರತಿ ಕೇಂದ್ರಕ್ಕೆ ಒಬ್ಬ ಅಧಿಕಾರಿ, ಸಹಾಯಕ ಅಧಿಕಾರಿ, ಪೊಲೀಸ್‌ ಸಿಬ್ಬಂದಿ ಸೇರಿ ನಾಲ್ವರನ್ನು ನಿಯೋಜಿಸಲಾಗಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೆಲಸ ಮಾಡುವ ಶಿಕ್ಷಕರು, ಉಪನ್ಯಾಸಕರು, ಇತರೆ ಸರ್ಕಾರಿ ಅಧಿಕಾರಿಗಳನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ. 

'ನಾನು ಚಳ್ಳಕೆರೆಯಲ್ಲಿ ವಾಸ ಮಾಡುತ್ತಿದ್ದು, ಉಪನ್ಯಾಸಕ ವೃತ್ತಿ ಮಾಡುತ್ತಿದ್ದೇನೆ. ಮೊಳಕಾಲ್ಮುರು ತಾಲ್ಲೂಕಿನ ಚೆಕ್‌ಪೋಸ್ಟ್‌ಗೆ ನಿಯೋಜಿಸಲಾಗಿದೆ. ಬೆಳಿಗ್ಗೆ 6 ಗಂಟೆಗೆ ಕೇಂದ್ರಕ್ಕೆ ಬರಬೇಕಾದಲ್ಲಿ ಮನೆಯನ್ನು ಬೆಳಗಿನ ಜಾವ 4 ಗಂಟೆಗೆ ಬಿಡಬೇಕು. ಹೆದ್ದಾರಿಯಲ್ಲಿ ಸಿಕ್ಕ ವಾಹನದಲ್ಲಿ ಬಂದು ಅಲ್ಲಿಂದ ಆಟೊ ಅಥವಾ ಯಾವುದಾದರೂ ಬೈಕ್‌ ಸವಾರರ ನೆರವು ಪಡೆದು ಚೆಕ್‌ಪೋಸ್ಟ್‌ ತಲುಪಬೇಕು. ಇಷ್ಟು ಬೇಗ ಆಹಾರ ಸಿದ್ಧಪಡಿಸಿಕೊಂಡು ತರಲು ಸಾಧ್ಯವೇ?. ತಂದರೂ ಬೇಸಿಗೆ ಇರುವುದರಿಂದ ಅದು ಹಳಸುವುದಿಲ್ಲದೇ?’ ಎಂದು ಮತ್ತೊಬ್ಬ ಸಿಬ್ಬಂದಿ ಪ್ರಶ್ನೆ ಮಾಡಿದರು.

‘ಕೇಂದ್ರಗಳನ್ನು ಊರಿನ ಹೊರಭಾಗದಲ್ಲಿ ಸ್ಥಾಪಿಸಲಾಗಿದೆ. ಕುಡಿಯುವ ನೀರು ಮಾತ್ರ ನೀಡಲಾಗುತ್ತಿದೆ. ಸಾರಿಗೆ ವ್ಯವಸ್ಥೆ ಇಲ್ಲ. ಊಟ, ತಿಂಡಿಯನ್ನು ನೀಡುತ್ತಿಲ್ಲ. ಈಗ 24 ಗಂಟೆಯೂ ವೆಬ್‌ ಕ್ಯಾಮರಾ ಕೆಲಸ ಮಾಡುವ ಕಾರಣ ಸಿಬ್ಬಂದಿ ಇರುವಿಕೆ ಗೊತ್ತಾಗಲಿದೆ. ಸಮೀಪದ ಗ್ರಾಮಕ್ಕೆ ಹೋಗಿ ಊಟ, ತಿಂಡಿ ಮಾಡಲು ಸಾಧ್ಯವಿಲ್ಲದಂತಾಗಿದೆ. ರಾತ್ರಿ 10ಕ್ಕೆ ಪಾಳಿ ಮುಗಿಸಿ ಹೊರಡುವವರು ಮನೆ ತಲುಪಲು 12 ಗಂಟೆ ಆಗುತ್ತದೆ’ ಎಂದು ಸಿಬ್ಬಂದಿಯೊಬ್ಬರು ದೂರಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಪಾಸಣಾ ಕೇಂದ್ರದಲ್ಲಿ ಕೆಲಸ ಮಾಡಿದ್ದಕ್ಕೆ ₹6,000 ನೀಡಲಾಗಿತ್ತು. ಹಣಕ್ಕಿಂತಲೂ, ಸಮಯ ಸರಿಯಾಗಿ ಗುಣಮಟ್ಟದ ಊಟ ಸಿಕ್ಕಲ್ಲಿ ಅನುಕೂಲವಾಗುತ್ತದೆ. ಹಿಂದೆ ಎಸ್‌ಎಸ್‌ಟಿ ಸಿಬ್ಬಂದಿಗೂ ವಾಹನ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಇವುಗಳನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದರು.

‘ನಿಯೋಜನೆ ಮಾಡಿರುವ ಸಿಬ್ಬಂದಿಯಲ್ಲಿ ಅನೇಕರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಗ್ಯಾಸ್ಟ್ರಿಕ್‌ ಸಮಸ್ಯೆಗಳಿವೆ. ಚೆಕ್‌ಪೋಸ್ಟ್‌ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಥವಾ ಪಟ್ಟಣ ಪಂಚಾಯಿತಿಗೆ ಊಟ, ತಿಂಡಿ ಸರಬರಾಜು ಜವಾಬ್ದಾರಿ ನೀಡಿದಲ್ಲಿ ನಾವು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬಹುದು. ಜಿಲ್ಲಾಡಳಿತ ಇತ್ತ ಗಮನಹರಿಸಿ ಸಾಧ್ಯತೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಈ ಹಿಂದೆ ಮೌಖಿಕ ಸೂಚನೆ ಇತ್ತು ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚೆಕ್‌ಪೋಸ್ಟ್‌ ಸಿಬ್ಬಂದಿಗೆ ಊಟ ತಿಂಡಿ ನೀರಿನ ವ್ಯವಸ್ಥೆ ಮಾಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ  ತಾಲ್ಲೂಕು ಪಂಚಾಯಿತಿ ಇಒ ಮೌಖಿಕ ಆದೇಶ ನೀಡಿದ್ದರು. ಕೆಲವರು ಇದನ್ನು ಪಾಲಿಸಿದ್ದರು. ಇದಕ್ಕೆ ಅಷ್ಟಾಗಿ ಖರ್ಚು ಸಹ ಬರುವುದಿಲ್ಲ ಮಾಡಿದಲ್ಲಿ ತುಂಬಾ ಅನುಕೂಲವಾಗುತ್ತದೆ’ ಎಂದು ಕಂದಾಯ ಸಿಬ್ಬಂದಿಯೊಬ್ಬರು ಹೇಳಿದರು.

ಪರಿಶೀಲಿಸುವ ಭರವಸೆ ‘ವಿಧಾನಸಭಾ ಕ್ಷೇತ್ರದಲ್ಲಿ 5 ಕಡೆ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ. ಕುಡಿಯುವ ನೀರು ನೆರಳಿನ ವ್ಯವಸ್ಥೆ ಮಾಡಿಕೊಡಲಾಗಿದೆ. ಊಟ ತಿಂಡಿ ನೀಡುತ್ತಿಲ್ಲ. ಹಿಂದಿನ ಚುನಾವಣೆ ಮಾಹಿತಿ ಪಡೆದುಕೊಂಡು ಸಾಧ್ಯವಿದ್ದಲ್ಲಿ ವ್ಯವಸ್ಥೆ ಕಲ್ಪಿಸಲು ಮುಂದಾಗುತ್ತೇವೆ. ಸೌಲಭ್ಯ ನೀಡಿದರೆ ಸಿಬ್ಬಂದಿಗೆ ಅನುಕೂಲವಾಗಲಿದೆ’ ಎಂದು ತಹಶೀಲ್ದಾರ್‌ ಶಂಕರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT