ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ನಗರಸಭೆ ನೌಕರ ಆತ್ಮಹತ್ಯೆ: ಸೆಲ್ಫಿ ವಿಡಿಯೊದಲ್ಲಿದೆ ಕಾರಣ

Last Updated 18 ಮೇ 2020, 14:28 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಧಿಕಾರಿ ಕಿರುಕುಳ ನೀಡಿದ್ದಾರೆಂದು ಸೆಲ್ಫಿ ವಿಡಿಯೊ ಮಾಡಿದ ನಗರಸಭೆಯ ದ್ವಿತೀಯ ದರ್ಜೆ ಸಹಾಯಕ ಶಶಿಕುಮಾರ್‌ (25), ಕಚೇರಿ ಸಮೀಪದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.

ಮೂಲತಃ ಹರಿಹರದ ಶಶಿಕುಮಾರ್‌, ಕೆಲ ವರ್ಷಗಳಿಂದ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಗರಸಭೆಯ ವ್ಯವಸ್ಥಾಪಕಿ ಸೇರಿ ಹಲವರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ನಗರಸಭೆ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಘಟನೆ ನಡೆದಿದೆ.

ದಾವಣಗೆರೆಯಲ್ಲಿ ವಾಸವಾಗಿದ್ದ ಶಶಿಕುಮಾರ್‌ ಲಾಕ್‌ಡೌನ್‌ ಬಳಿಕ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ವಾರದ ಹಿಂದೆ ಕರ್ತವ್ಯಕ್ಕೆ ಬಂದಿದ್ದ ಇವರಿಗೆ ನಗರಸಭೆ ವತಿಯಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ನಗರದಲ್ಲೇ ವಾಸ್ತವ್ಯ ಹೂಡಿದ ಬಳಿಕ ನಿತ್ಯವೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲ ದಿನ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದಕ್ಕೆ ಕಚೇರಿಯ ವ್ಯವಸ್ಥಾಪಕಿ ಕಿರುಕುಳ ನೀಡಿದರು. ಕರ್ತವ್ಯ ನಿರ್ವಹಿಸಿದ ದಿನವೂ ಹಾಜರಾತಿ ಪುಸ್ತಕ ತಿದ್ದಿದರು. ಇದನ್ನು ಪ್ರಶ್ನಿಸಿದ್ದಕ್ಕೆ ವೇತನ ಕಡಿತಗೊಳಿಸಿ ಅಮಾನತು ಮಾಡುವ ಬೆದರಿಕೆ ಹಾಕಿದರು. ಸೋಮವಾರವೂ ಇದೇ ರೀತಿ ಹಾಜರಿ ಪುಸ್ತಕ ತಿದ್ದಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸೆಲ್ಫಿ ವಿಡಿಯೊದಲ್ಲಿ ಶಶಿಕುಮಾರ್‌ ಹೇಳಿಕೊಂಡಿದ್ದಾರೆ.

ವಿಷದ ಬಾಟಲಿ ತೋರಿಸುತ್ತಲೇ ಗದ್ಗದಿತರಾಗಿ ಮಾತನಾಡಿದ ಶಶಿಕುಮಾರ್‌, ತನ್ನನ್ನು ಕ್ಷಮಿಸುವಂತೆ ತಾಯಿ ಹಾಗೂ ದೊಡ್ಡಮ್ಮನಲ್ಲಿ ಪದೇ ಪದೇ ಬೇಡಿಕೊಂಡಿದ್ದಾರೆ. ‘ಅಮಾನತುಗೊಳಿಸಿದರೆ ತಂದೆ, ತಾಯಿ ಇರುವ ಸಂಸಾರವನ್ನು ಹೇಗೆ ಸಾಗಿಸುವುದು’ ಎಂದು ಪ್ರಶ್ನಿಸಿದ್ದಾರೆ.

ವಿಷ ಸೇವಿಸಿದ ಮಾಹಿತಿ ತಿಳಿಯುತ್ತಿದ್ದಂತೆ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಶಶಿಕುಮಾರ್‌ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಮಾರ್ಗ ಮಧ್ಯೆದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಜಿಲ್ಲಾ ಆಸ್ಪತ್ರೆಯ ಶವಾಗಾರದ ಎದುರು ಜಮಾಯಿಸಿದ ಶಶಿಕುಮಾರ್‌ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT