ಚಿತ್ರದುರ್ಗ: ಗಣಿಬಾಧಿತ ಪ್ರದೇಶಗಳ ಜನರಿಗೆ ಆರೋಗ್ಯ ತಪಾಸಣೆ ನಡೆಸುತ್ತಿರುವ ಸಂಚಾರ ಆರೋಗ್ಯ ಘಟಕಗಳ (ಆಂಬುಲೆನ್ಸ್) ಸಿಬ್ಬಂದಿಗೆ 6 ತಿಂಗಳಿಂದ ವೇತನ ಪಾವತಿ ಮಾಡಿಲ್ಲ. ಜೊತೆಗೆ ಔಷಧವನ್ನೂ ಸಮರ್ಪಕವಾಗಿ ಪೂರೈಸದ ಪರಿಣಾಮ ಬೆಟ್ಟಗುಡ್ಡಗಳ ಆಸುಪಾಸಿನಲ್ಲಿರುವ ಗಣಿಬಾಧಿತರಿಗೆ ಚಿಕಿತ್ಸೆ ಮರೀಚಿಕೆಯಾಗಿದೆ.
ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಗಣಿಬಾಧಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿಯ ಜನರಿಗೆ ಚಿಕಿತ್ಸೆ ನೀಡಲು ಕೋವಿಡ್ ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ ಆರಂಭಿಸಲಾಯಿತು. ಪ್ರತಿ ತಾಲ್ಲೂಕಿಗೆ ತಲಾ ಒಂದರಂತೆ ಆಂಬುಲೆನ್ಸ್ ನೀಡಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 6 ಆಂಬುಲೆನ್ಸ್‌ಗಳು ಸೇವೆ ನೀಡುತ್ತಿವೆ.
ಪ್ರತಿ ಆಂಬುಲೆನ್ಸ್‌ನಲ್ಲಿ ಒಬ್ಬರು ಎಂಬಿಬಿಎಸ್ ವೈದ್ಯ, ಒಬ್ಬರು ಶುಶ್ರೂಷಕ, ಒಬ್ಬರು ಪ್ರಯೋಗಾಲಯ ತಂತ್ರಜ್ಞ, ಔಷಧ ವಿತರಕ, ‘ಡಿ’ ಗ್ರೂಪ್ ನೌಕರ ಹಾಗೂ ಚಾಲಕ ಇರುತ್ತಾರೆ. ಫೆಬ್ರುವರಿ ನಂತರ ಇಲ್ಲಿಯವರೆಗೂ ಸಿಬ್ಬಂದಿಗೆ ವೇತನ ಬಿಡುಗಡೆ ಮಾಡದ ಕಾರಣ ಸಿಬ್ಬಂದಿ ಅತಂತ್ರರಾಗಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಆರಂಭವಾಗಿರುವ ಈ ಯೋಜನೆಗೆ ಜಿಲ್ಲಾ ಖನಿಜ ನಿಧಿ (ಡಿಎಂಎಫ್)ಯಿಂದ ಹಣ ಬಿಡುಗಡೆಯಾಗಬೇಕು. ನಿಧಿಯಲ್ಲಿ ಹಣವಿದ್ದರೂ ಇಲ್ಲಿಯವರೆಗೂ ವೇತನ ಬಿಡುಗಡೆಯಾಗಿರುವುದು ಸಿಬ್ಬಂದಿಯ ಆಕ್ರೋಶಕ್ಕೆ ಕಾರಣವಾಗಿದೆ.
‘ಯೋಜನೆ ಆರಂಭವಾದ ದಿನದಿಂದ ಇಲ್ಲಿಯವರೆಗೂ ಸರಿಯಾಗಿ ವೇತನ ಬಿಡುಗಡೆಯಾಗಿಲ್ಲ. ವೇತನವಿಲ್ಲದೇ ಬದುಕು ನಡೆಸುವುದು ಹೇಗೆ? ಸ್ಥಳೀಯ ಶಾಸಕರು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ವೇತನ ಬಂದಿಲ್ಲ. ಸಾಲ ಮಾಡಿಕೊಂಡು ಜೀವನ ನಡೆಸಬೇಕಾದ ಸ್ಥಿತಿ ಇದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಶುಶ್ರೂಷಕರೊಬ್ಬರು ನೋವು ತೋಡಿಕೊಂಡರು.
ಔಷಧದ ಕೊರತೆ:
ಕಲ್ಲು, ಕಬ್ಬಿಣ ಮತ್ತು ಉಕ್ಕು ಗಣಿಗಾರಿಕೆಯಿಂದ ಬಾಧಿತರಾಗಿರುವ ಗ್ರಾಮಗಳಲ್ಲಿ ಓಡಾಡುವ ಈ ಆಂಬುಲೆನ್ಸ್‌ಗಳು ಜನರ ಚಿಕಿತ್ಸೆಗೆ ಸಿಬ್ಬಂದಿಸಮೇತ ಧಾವಿಸುತ್ತವೆ. ಇಲ್ಲಿಯ ಜನರಿಗೆ ಆಸ್ತಮಾ ಸೇರಿದಂತೆ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಂಡುಬಂದಿದ್ದು, ವೈದ್ಯಕೀಯ ಪರೀಕ್ಷೆಗಳ ಅಗತ್ಯವಿದೆ. ಔಷಧ ಕೊರತೆ ಸಿಬ್ಬಂದಿಯನ್ನು ಕಾಡುತ್ತಿದ್ದು, ಚಿಕಿತ್ಸೆ ನೀಡಲು ತೊಡಕಾಗಿದೆ.
‘ಹಣಕಾಸಿನ ಕೊರತೆಯಿಂದಾಗಿ ಔಷಧ ಖರೀದಿ ಮಾಡಲು ಸಾಧ್ಯವಾಗಿಲ್ಲ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧ ಪಡೆದು ಚಿಕಿತ್ಸೆ ನೀಡುತ್ತಿದ್ದೇವೆ. ಗಂಭೀರ ಸ್ವರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ವೈದ್ಯರೊಬ್ಬರು ತಿಳಿಸಿದರು.
ಜಿಲ್ಲೆಯ 6 ತಾಲ್ಲೂಕುಗಳಿಂದ 163 ಗ್ರಾಮಗಳನ್ನು ‘ಗಣಿಬಾಧಿತ’ ಎಂದು ಗುರುತಿಸಲಾಗಿದೆ. ಬಹುತೇಕ ಗ್ರಾಮಗಳು ನಗರ, ಪಟ್ಟಣ ಪ್ರದೇಶದಿಂದ ದೂರವಿದ್ದು, ಸೌಲಭ್ಯಗಳಿಂದ ವಂಚಿತವಾಗಿವೆ. ಕೆಲವು ಗ್ರಾಮಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದಲೂ ದೂರವಿವೆ. ಅವುಗಳಿಗೆ ಸಂಚಾರ ಆರೋಗ್ಯ ಘಟಕಗಳ ಸೇವೆ ಅಗತ್ಯವಾಗಿದೆ.
‘ಕೆಲವು ಹಳ್ಳಿಗಳಿಗೆ ತೆರಳಲು ರಸ್ತೆಯೂ ಇಲ್ಲ, ಶೌಚಾಲಯ, ನೀರೂ ಸಿಗುವುದಿಲ್ಲ. ಸವಾಲುಗಳ ನಡುವೆಯೂ ನಾವು ಸೇವೆ ನೀಡುತ್ತಿದ್ದೇವೆ. ನಮ್ಮ ಸೇವೆಗೆ ಸರಿಯಾಗಿ ಸಂಬಳವೂ ಬಾರದಿದ್ದರೆ ಬೇಸರವಾಗುತ್ತದೆ’ ಎಂದು ವೈದ್ಯರು ಬೇಸರಿಸಿದರು.
2 ದಿನದೊಳಗೆ ವೇತನ ಬಿಡುಗಡೆ ‘ಗಣಿಬಾಧಿತ ಪ್ರದೇಶಗಳಲ್ಲಿ ಚಿಕಿತ್ಸೆ ನೀಡುತ್ತಿರುವ ಆಂಬುಲೆನ್ಸ್ ಸಿಬ್ಬಂದಿಗೆ 2 ದಿನದೊಳಗೆ ವೇತನ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದರೆ ಆಂಬುಲೆನ್ಸ್ ನಿರ್ವಹಣೆಯಲ್ಲಿ ಕೆಲವು ಲೋಪಗಳು ಕಂಡುಬಂದಿದ್ದು ಅದರ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು. ‘ಹೊರಗಿನಿಂದ ಔಷಧ ಖರೀದಿ ವಿಚಾರದಲ್ಲಿ ಗೊಂದಲಗಳಿವೆ. ಜೊತೆಗೆ ಎಲ್ಲೆಲ್ಲಿ ಚಿಕಿತ್ಸೆ ನೀಡಿದ್ದಾರೆ ಎಂಬ ಸಮಗ್ರ ವರದಿ ನೀಡುವಂತೆ ಗಣಿ ಆರೋಗ್ಯ ಇಲಾಖೆಯಿಂದ ವರದಿ ಕೇಳಿದ್ದೇನೆ. ಮಾನವೀಯತೆ ದೃಷ್ಟಿಯಿಂದ ಕೂಡಲೇ ಜಿಲ್ಲಾ ಖನಿಜ ನಿಧಿಯಿಂದ ವೇತನ ಬಿಡುಗಡೆ ಮಾಡುವಂತೆ ಸೂಚಿಸಿದ್ದೇನೆ’ ಎಂದು ಹೇಳಿದರು.
ವೇತನ ಕಡಿತ; ಬೇಸರ ಎಂಬಿಬಿಎಸ್ ಪೂರೈಸಿದ ವೈದ್ಯರಿಗೆ ₹ 60000 ವೇತನ ನಿಗದಿ ಮಾಡಲಾಗಿದೆ. ಆದರೆ ಸದ್ಯ ವೈದ್ಯರು ಕೇವಲ ₹ 48000 ಸ್ವೀಕರಿಸುತ್ತಿದ್ದಾರೆ. ಉಳಿಕೆ ₹ 12000 ಹಣವನ್ನು ಸೇವಾ ಶುಲ್ಕ ಎಂದು ಕಡಿತ ಮಾಡಿಕೊಳ್ಳಲಾಗುತ್ತಿರುವುದು ವೈದ್ಯರಿಗೆ ಬೇಸರ ತರಿಸಿದೆ. ‘ಸೇವಾ ಶುಲ್ಕವನ್ನು ಜಿಲ್ಲಾಡಳಿತವೇ ಭರಿಸಿ ಪೂರ್ತಿ ₹ 60000 ವೇತನ ನೀಡಬೇಕು’ ಎಂದು ವೈದ್ಯರು ಒತ್ತಾಯಿಸಿದರು.
ಗಣಿಬಾಧಿತ ಗ್ರಾಮಗಳ ವಿವರ ತಾಲ್ಲೂಕು; ಹಳ್ಳಿಗಳ ಸಂಖ್ಯೆ
ಚಳ್ಳಕೆರೆ; 40
ಚಿತ್ರದುರ್ಗ; 30
ಹಿರಿಯೂರು; 30
ಹೊಳಲ್ಕೆರೆ;24
ಹೊದುರ್ಗ; 20
ಮೊಳಕಾಲ್ಮುರು; 19
ಒಟ್ಟು; 163
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.