ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕೋಟೆ ಪ್ರವೇಶಕ್ಕೆ ‘ಆನ್‌ಲೈನ್‌’ ತೊಡಕು

ನಗದು ರಹಿತ ವ್ಯವಸ್ಥೆಗೆ ಪ್ರವಾಸಿಗರು ಹೈರಾಣು, ಒಮ್ಮೆ ಐವರಿಗೆ ಮಾತ್ರ ಅವಕಾಶ
Published 8 ಮೇ 2023, 19:31 IST
Last Updated 8 ಮೇ 2023, 19:31 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಬಿಸಿಲಿನ ಬೇಗೆಗೆ ಸುಸ್ತಾಗಿದ್ದೇವೆ. ಇಲ್ಲಿ ಹಣ ಪಡೆದು ಟಿಕೆಟ್‌ ನೀಡುತ್ತಿಲ್ಲ. ಕುಟುಂಬದವರನ್ನು ಅರ್ಧ ಗಂಟೆಯಿಂದ ರಸ್ತೆಯಲ್ಲಿ ನಿಲ್ಲಿಸಿದ್ದೇನೆ’ ಎನ್ನುತ್ತಾ ಮೊಬೈಲ್‌ ಹಿಡಿದು ಗೊಣಗುತ್ತಿದ್ದರು ಹಾಸನದ ಪ್ರವಾಸಿಗ ಕೆ.ಆರ್‌.ಛಾಯಾಪತಿ. ಐತಿಹಾಸಿಕ ಕಲ್ಲಿನ ಕೋಟೆ ಪ್ರವೇಶಕ್ಕೆ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ ರೂಪಿಸಿದ ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ ಅವರನ್ನು ಹೈರಾಣ ಮಾಡಿತ್ತು.

ಕೋವಿಡ್‌ ಸಂದರ್ಭದಲ್ಲಿ ಕೋಟೆ ಮುಂಭಾಗದ ಕೌಂಟರ್‌ ಬಳಿ ಹಣ ಪಡೆದು ಟಿಕೆಟ್‌ ವಿತರಿಸುವುದನ್ನು ಸಂಪೂರ್ಣ ಸ್ಥಗಿತಗೊಳಿಸಿ, ನಗದು ರಹಿತ ಟಿಕೆಟ್‌ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಕೊರೊನಾ ಭಯ ದೂರವಾದರೂ ಆ ವ್ಯವಸ್ಥೆ ಬದಲಾಗಿಲ್ಲ. ಇದರಿಂದ ಪ್ರವಾಸಿಗರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಇಲ್ಲಿನ ಕೋಟೆಗೆ ನಿತ್ಯವೂ ಪ್ರವಾಸಿಗರು ಭೇಟಿ ನೀಡುತ್ತಾರೆ. ರಜಾ ದಿನಗಳಲ್ಲಿ ಈ ಸಂಖ್ಯೆ ಎರಡು, ಮೂರು ಸಾವಿರದ ಗಡಿ ದಾಟುತ್ತದೆ. ನಿತ್ಯ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ಕೋಟೆ ವೀಕ್ಷಣೆಗೆ ಅವಕಾಶವಿದೆ. 15 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತ. ಭಾರತೀಯರಿಗೆ ₹ 25 ಹಾಗೂ ವಿದೇಶಿ ಪ್ರವಾಸಿಗರಿಗೆ ₹ 300 ಪ್ರವೇಶ ದರ ನಿಗದಿಗೊಳಿಸಲಾಗಿದೆ. ಆನ್‌ಲೈನ್‌ನಲ್ಲಿ ಭಾರತೀಯರಿಗೆ ₹ 20 ಹಾಗೂ ವಿದೇಶಿಗರಿಗೆ ₹ 250 ಪಡೆಯಲಾಗುತ್ತಿದೆ.

ಕೋಟೆ ಪ್ರವೇಶದ್ವಾರದ ಬಳಿ ಟಿಕೆಟ್‌ ಪಡೆಯಲು ಕ್ಯೂಆರ್‌ ಕೋಡ್‌ ಫಲಕ ಅಳವಡಿಸಲಾಗಿದೆ. ಪ್ರವೇಶ ಬಯಸುವವರು ಫೋನ್‌ನಲ್ಲಿ ಕೋಡ್‌ ಸ್ಕ್ಯಾನ್‌ ಮಾಡಿದರೆ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ ಜಾಲತಾಣ ತೆರೆದುಕೊಳ್ಳುತ್ತದೆ. ಪ್ರವಾಸಿಗರ ಹೆಸರು, ಗುರುತಿನ ಚೀಟಿ ಸಂಖ್ಯೆ ಸೇರಿ ಇತರ ಮಾಹಿತಿ ಭರ್ತಿ ಮಾಡಬೇಕು. ಬಳಿಕ ನೆಟ್‌ ಬ್ಯಾಂಕಿಂಗ್, ಡೆಬಿಟ್‌ ಕಾರ್ಡ್‌ ಅಥವಾ ಯುಪಿಐ ಮೂಲಕ ಹಣ ಪಾವತಿಸಿದರೆ ಟಿಕೆಟ್‌ ಲಭ್ಯವಾಗುತ್ತದೆ. ಆದರೆ, ಸರ್ವರ್‌ ಸಮಸ್ಯೆಯಿಂದ ಟಿಕೆಟ್‌ ಪಡೆಯುವುದು ಸುಲಭವಾಗಿಲ್ಲ. ಒಮ್ಮೆ ಐದು ಪ್ರವಾಸಿಗರಿಗೆ ಮಾತ್ರ ಅವಕಾಶವಿರುವುದು ಸಮಸ್ಯೆ ತಂದೊಡ್ಡಿದೆ. ಇದು ಪ್ರವಾಸಿಸ್ನೇಹಿಯಾಗಿಲ್ಲ ಎಂಬುದು ಪ್ರವಾಸಿಗರ ದೂರು.

ಗ್ರಾಮೀಣರಿಗೆ ಆನ್‌ಲೈನ್‌ ಟಿಕೆಟ್‌ ಪಡೆಯುವುದು ದುಸ್ತರವಾಗಿದೆ. ಸಿಬ್ಬಂದಿ ಮತ್ತೊಬ್ಬರ ಮೊಬೈಲ್‌ನಲ್ಲಿ ಟಿಕೆಟ್‌ ವ್ಯವಸ್ಥೆ ಮಾಡುತ್ತಾರೆ. ಬಹುತೇಕರು ಇದಕ್ಕೆ ಸಮ್ಮತಿಸುತ್ತಿಲ್ಲ. ಇಂತಹ ಸಮಯದಲ್ಲಿ ಪ್ರವಾಸಿಗರು ಸಿಬ್ಬಂದಿ ಜೊತೆ ಗಲಾಟೆ ನಡೆಸಿದ ನಿದರ್ಶನಗಳಿವೆ.

‘ಕೊರೊನಾ ಸಮಯದಲ್ಲಿ ಇಲಾಖೆ ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ ಜಾರಿಗೊಳಿಸಿತು. ಪ್ರವಾಸಿಗರು ಹೆಚ್ಚಾದಾಗ ನಗದು ಸ್ವೀಕರಿಸಿ ಟಿಕೆಟ್‌ ನೀಡಲಾಗುತ್ತಿದೆ’ ಎನ್ನುತ್ತಾರೆ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಪಿ.ಸುಧೀರ್‌.

ಸೋಂಕಿನ ಭೀತಿ ತಗ್ಗಿದರೂ ವ್ಯವಸ್ಥೆ ಮಾತ್ರ ಬದಲಾಗಿಲ್ಲ. ಇದರಿಂದ ಕೋಟೆ ವೀಕ್ಷಣೆಗೆ ಬರುವ ಅನೇಕರು ಟಿಕೆಟ್‌ ಪಡೆಯಲು ಸಾಧ್ಯವಾಗದೇ ನಿರಾಸೆಯಿಂದ ಹಿಂದಿರುಗುವುದು ಸಾಮಾನ್ಯವಾಗಿದೆ.

ಸೌಮ್ಯಶ್ರೀ ಬಿ. ಘಾಟೆ
ಸೌಮ್ಯಶ್ರೀ ಬಿ. ಘಾಟೆ
ಎಚ್‌.ಎಸ್‌. ಆದರ್ಶ
ಎಚ್‌.ಎಸ್‌. ಆದರ್ಶ
ಹಂಪಿಯಂತೆ ಕೋಟೆ ವೀಕ್ಷಣೆಗೂ ಸಹ ಆನ್‌ಲೈನ್‌ ಆಫ್‌ಲೈನ್‌ ಟಿಕೆಟ್‌ ಸೌಲಭ್ಯ ಕಲ್ಪಿಸಬೇಕು. ಕೋಟೆ ಪ್ರವೇಶ ದ್ವಾರದಲ್ಲಿ ಅರ್ಧ ತಾಸಿಗೂ ಹೆಚ್ಚು ಸಮಯ ಕಳೆಯುವಂತಾಗಿದೆ.
–ಸೌಮ್ಯಶ್ರೀ ಬಿ. ಘಾಟೆ ಪ್ರವಾಸಿ ಬೆಂಗಳೂರು
ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಟಿಕೆಟ್‌ ಪಡೆಯಲು ಸಾಧ್ಯವಾಗದೆ ನಿರಾಸೆಯಿಂದ ಹಂಪಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ಗ್ರಾಮೀಣ ಜನರಿಗೆ ಸಮಸ್ಯೆ ಆಗುತ್ತಿದೆ. ನಗದು ಪಡೆದು ಟಿಕೆಟ್‌ ನೀಡಿದರೆ ಅನುಕೂಲ.
–ಎಚ್‌.ಎಸ್‌. ಆದರ್ಶ ಪ್ರವಾಸಿಗ ತಿಪಟೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT