ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿವೈಎಸ್‌ಪಿ ಅಮಾನತಿಗೆ ರೈತ ಮುಖಂಡರ ಒತ್ತಾಯ

Published : 2 ಆಗಸ್ಟ್ 2024, 15:27 IST
Last Updated : 2 ಆಗಸ್ಟ್ 2024, 15:27 IST
ಫಾಲೋ ಮಾಡಿ
Comments

ಚಿತ್ರದುರ್ಗ: ಹಿರಿಯೂರು ತಾಲ್ಲೂಕು ವನಗೊಂಡನಹಳ್ಳಿಯಲ್ಲಿ ರೈತರು ನಡೆಸಿದ ಪ್ರತಿಭಟನೆ ವೇಳೆ ಡಿವೈಎಸ್ಪಿ ಎಸ್‌.ಚೈತ್ರಾ ಅವರು ರೈತ ನಾಯಕರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಪ್ರತಿಭಟನೆಗೆ ಅಡ್ಡಿಪಡಿಸಿ ಪ್ರತಿಭಟನಾಕಾರರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕೂಡಲೇ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿ ರೈತಸಂಘದ ಸದಸ್ಯರು ಶುಕ್ರವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಹಿರಿಯೂರು ಭಾಗದ 16 ಕೆರೆ ತುಂಬಿಸಬೇಕೆಂದು ಒತ್ತಾಯಿಸಿ 42 ದಿನ ಸತ್ಯಾಗ್ರಹ ನಡೆಸಲಾಗಿತ್ತು. ಜುಲೈ 31ರಂದು ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆಯಲ್ಲಿ ಬಂದು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಒಂದು ದಿನ ಮೊದಲು ಸೂಕ್ತ ಬಂದೋಬಸ್ತ್ ನೀಡುವಂತೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೆ ಪ್ರತಿಭಟನಾಕಾರರು ತಾಲ್ಲೂಕು ಕಚೇರಿಗೆ ತಲುಪಿದಾಗ ಚೈತ್ರಾ ಅವರು ಕಚೇರಿಯ ಆವರಣ ಪ್ರವೇಶಿಸಲು ಬಿಡದೆ ಕಾಂಪೌಂಡ್ ಗೇಟ್ ಹಾಕಿ ಹೊರಭಾಗದ ರಸ್ತೆಯಲ್ಲಿ ಜನರನ್ನು ನಿಲ್ಲಿಸಿದ್ದರು. ಇದರಿಂದ ವಾಗ್ವಾದ ನಡೆದು ನೂಕುನುಗ್ಗಲು ಉಂಟಾಯಿತು. ಬೇರೆ ತಾಲ್ಲೂಕುಗಳಿಂದ ಭದ್ರತೆಗಾಗಿ ಬಂದಿದ್ದ ಪೊಲೀಸರು ರೈತರನ್ನು ತಳ್ಳುತ್ತಾ ಅವಾಚ್ಯ ಶಬ್ದಗಳಿಂದು ನಿಂದಿಸಿದರು ಎಂದು ಪ್ರತಿಭಟನಕಾರರು ಆರೋಪಿಸಿದರು.

ಚೈತ್ರಾ ಅವರು ರಾಜ್ಯ ನಾಯಕರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡುತ್ತಾ ದರ್ಪ ಮೆರೆದಿರುತ್ತಾರೆ. ರೈತ ಮುಖಂಡರು ಪ್ರಚೋದನೆಗೊಳ್ಳುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಹೋರಾಟಗಾರರ ವಿರುದ್ಧ ಬೇಕಾಬಿಟ್ಟಿಯಾಗಿ ಮಾತನಾಡಿರುವ ಚೈತ್ರಾ ಅವರನ್ನು ತಕ್ಷಣವೇ ಅಮಾನತು ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳ, ಹುಲ್ಲುಬಂದಿ ಖರಾಬು ಮತ್ತು ಗ್ರಾಮ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಡಿವೈಎಸ್‌ಪಿ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, ಅವರು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ತಾಲ್ಲೂಕಿನಲ್ಲಿ ಕಳ್ಳತನ, ವಂಚನೆ ಪ್ರಕರಣ ಹೆಚ್ಚಾಗಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ.  ರೈತರ ಪ್ರತಿಭಟನೆ ಹಕ್ಕು ಕಸಿದುಕೊಳ್ಳಲು ಯತ್ನಿಸಿರುವ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ರೈತಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಸಿದ್ದವೀರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್‌.ಹಳ್ಳಿ ಮಲ್ಲಿಕಾರ್ಜುನ್‌, ಕಾರ್ಯದರ್ಶಿ ಬಸವರಾಜಪ್ಪ, ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಮುಖಂಡರಾದ ಮಂಜುನಾಥ್‌, ರಂಗಸ್ವಾಮಿ, ಸಿದ್ದರಾಮಣ್ಣ, ಸದಾಶಿವಪ್ಪ, ಪ್ರಸನ್ನ, ತಿಮ್ಮಾರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT