ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಟೆಕ್‌ ಸಂತೆ ಮೈದಾನದಲ್ಲಿ ಸೌಕರ್ಯಗಳ ಕೊರತೆ

Last Updated 1 ಏಪ್ರಿಲ್ 2022, 6:06 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಬಿ.ದುರ್ಗ ಹೋಬಳಿಯ ದೊಡ್ಡ ಗ್ರಾಮಗಳಲ್ಲಿ ಒಂದಾದ ಚಿಕ್ಕಜಾಜೂರಿನ ಸಂತೆಮೈದಾನ ಅತ್ಯಾಧುನಿಕವಾಗಿದ್ದರೂ ಶೌಚಾಲಯ, ಕುಡಿಯುವ ನೀರು ಇತ್ಯಾದಿ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದೆ.

₹ 1 ಕೋಟಿಗೂ ಅಧಿಕ ವಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ಸಂತೆ ಮೈದಾನವನ್ನು 2017ರ ಏಪ್ರಿಲ್‌ನಲ್ಲಿ ಲೋಕಾರ್ಪಣೆ ಮಾಡಲಾಗಿದ್ದು, ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ಬೇಸಿಗೆಯಲ್ಲಿ ಬಿಸಿಲು ಹಾಗೂ ಮಳೆಗಾಲದಲ್ಲಿ ಮಳೆ ನೀರು ಸೋರದಂತೆ ಮತ್ತು ತರಕಾರಿ ಮತ್ತು ದಿನಸಿ ಕೆಳಗೆ ನೀರು ಹರಿಯದಂತೆ ಎತ್ತರವಾದ ಜಗುಲಿಗಳನ್ನು ನಿರ್ಮಿಸಲಾಗಿದೆ. ಇಡೀ ಸಂತೆ ಮೈದಾನಕ್ಕೆ ತಗಡು ಹೊದಿಸಲಾಗಿದ್ದು ಬಿಸಿಲು ಹಾಗೂ ಮಳೆಯಿಂದ ವ್ಯಾಪಾರಿಗಳಿಗೆ ರಕ್ಷಣೆ ಇದೆ.

ಹೋಬಳಿಯ ಬಹುತೇಕ ಗ್ರಾಮಗಳ ಜನರು ಸಂತೆಗೆ ಬಂದು ವಾರಕ್ಕೆ ಆಗುವಷ್ಟು ಸೊಪ್ಪು, ತರಕಾರಿ, ದಿನಸಿ ಸಾಮಗ್ರಿಗಳನ್ನು ಖರೀದಿಸುತ್ತಾರೆ. ತರಕಾರಿ ಜತೆ ದಿನಸಿ, ಕಬ್ಬಿಣದ ಸಿದ್ಧ ವಸ್ತುಗಳು, ಕೃಷಿ ಪರಿಕರಗಳು ಸಹ ಇಲ್ಲಿ ಮಾರಾಟ ಮಾಡಲಾಗುತ್ತದೆ. ಹೊಳಲ್ಕೆರೆ ಹಾಗೂ ಚನ್ನಗಿರಿ ತಾಲ್ಲೂಕಿನ ವ್ಯಾಪಾರಿಗಳು ಸಂತೆಗೆ ಬಂದು ವ್ಯಾಪಾರ ಮಾಡುತ್ತಾರೆ.

ಮೂಲಭೂತ ಸೌಕರ್ಯಗಳ ಕೊರತೆ: ಸಂತೆ ಮೈದಾನ ಉದ್ಘಾಟನೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಲಾಗಿತ್ತು. ಆದರೆ, ಮೈದಾನ ಉದ್ಘಾಟನೆಯಾಗಿ ನಾಲ್ಕೂವರೆ ವರ್ಷಗಳು ಕಳೆದರೂ ಭರವಸೆ ಈಡೇರಿಲ್ಲ. ಪುರುಷ ವ್ಯಾಪಾರಿಗಳು ಪಕ್ಕದ ಕೆರೆ ಕಡೆ ಹೋಗಿ ಬರುತ್ತಾರೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳಾ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ವ್ಯಾಪಾರಿ ಇಂದ್ರಮ್ಮ ಮನವಿ ಮಾಡಿದ್ದಾರೆ.

‘ಬೇಸಿಗೆ ಸಮಯದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ. ನಾವು ತರುವ 2–3 ಲೀಟರ್ ಬಾಟಲಿ ನೀರು ಮಧ್ಯಾಹ್ನದ ವೇಳೆಗೆ ಖಾಲಿ ಆಗುತ್ತದೆ. ಆನಂತರ ನೀರಿಗಾಗಿ ಅಲ್ಲಿ ಇಲ್ಲಿ ಬೇಡುವ ಸ್ಥಿತಿ ಇದೆ. ಆದ್ದರಿಂದ ಗ್ರಾಮ ಪಂಚಾಯಿತಿ ವತಿಯಿಂದ ಇಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕು’ ಎಂದು ವ್ಯಾಪಾರಿಗಳಾದ ಸಿದ್ದಪ್ಪ, ರುದ್ರಪ್ಪ, ತಿಮ್ಮೇಶ್, ಮಂಜುನಾಥ, ರಶೀದ್, ಸಯ್ಯದ್ ರಹಮತ್, ಖಾಸಿಂ ಸಾಬ್, ಹನುಮಂತಪ್ಪ ಒತ್ತಾಯಿಸಿದ್ದಾರೆ.

ಸಂತೆ ದಿನವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಗ್ರಾಹಕರು ಸಂತೆ ಮೈದಾನಕ್ಕೆ ಬರುವುದಿಲ್ಲವೆಂದು ಕೆಲ ವ್ಯಾಪಾರಿಗಳು ಗ್ರಾಮದ ಮುಖ್ಯರಸ್ತೆಯಲ್ಲಿರುವ ದಿನಸಿ, ಬಟ್ಟೆ ಮತ್ತಿತರ ಅಂಗಡಿಗಳ ಮುಂಭಾಗದಲ್ಲಿ ವ್ಯಾಪಾರ ಮಾಡುತ್ತಾರೆ. ಹೀಗೆ ಅಂಗಡಿಗಳ ಮುಂದೆ ವ್ಯಾಪಾರ ಮಾಡುವವರು ದಿನಕ್ಕೆ ₹ 150–300ರ ವರೆಗೆ ಬಾಡಿಗೆ ನೀಡುತ್ತಾರೆ. ಆದರಿಲ್ಲಿ ನೆರಳಿನ ವ್ಯವಸ್ಥೆ ಇಲ್ಲ. ಬಿಸಿಲಿನ ತಾಪಕ್ಕೆ ತರಕಾರಿ, ಸೊಪ್ಪು ಒಣಗುತ್ತಿವೆ. ದುಬಾರಿ ಬೆಲೆ ಕೊಟ್ಟು ಖರೀದಿಸಿ ತಂದ ತರಕಾರಿ ಒಣಗಿ ಹಾಳಾಗುವುದರಿಂದ ನಷ್ಟ ಅನುಭವಿಸುವಂತಾಗಿದೆ.

ಕೊರೊನಾ ಸಂದರ್ಭದಲ್ಲಿ ಎಲ್ಲಾ ವ್ಯಾಪಾರಿಗಳಿಗೂ ಸಂತೆ ಮೈದಾನದಲ್ಲೇ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಅದನ್ನೇ ಮುಂದುವರಿಸಬೇಕು ಎಂದು ಜಯಣ್ಣ ಮತ್ತಿತರ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಸಂತೆ ಮೈದಾನದಲ್ಲಿ ವ್ಯಾಪಾರಕ್ಕೆ ಸೂಚನೆ

ಚಿಕ್ಕಜಾಜೂರು ಮುಖ್ಯರಸ್ತೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ್ದ ಶಿಥಿಲಗೊಂಡಿದ್ದ ವಾಣಿಜ್ಯ ಮಳಿಗೆಗಳನ್ನು ನೆಲಸಮಗೊಳಿಸಿದ್ದು, ಶೀಘ್ರದಲ್ಲಿಯೇ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಅಲ್ಲದೇ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದರಿಂದ ಪಾದಚಾರಿಗಳು ಹಾಗೂ ಬಸ್ ಮತ್ತಿತರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಆದ್ದರಿಂದ ಬೀದಿ ಬದಿಯ ಎಲ್ಲಾ ವ್ಯಾಪಾರಿಗಳು ಸಂತೆ ಮೈದಾನ ಅಥವಾ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿರುವ ಮರಗಳ ಕೆಳಗೆ ವ್ಯಾಪಾರ ಮಾಡಬೇಕು. ತಪ್ಪಿದಲ್ಲಿ ವ್ಯಾಪಾರಿಗಳು ಹಾಗೂ ಅವರಿಗೆ ಜಾಗ ನೀಡುವ ಅಂಗಡಿಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುನೀತ್‌ ತಿಳಿಸಿದ್ದಾರೆ.

ಕುಡಿಯುವ ನೀರಿನ ವ್ಯವಸ್ಥೆ ಶೀಘ್ರದಲ್ಲಿಯೇ ಕಲ್ಪಿಸಲಾಗುವುದು.ಶೌಚಾಲಯ ನಿರ್ಮಾಣಕ್ಕೆ ಹಣಕಾಸಿನ ತೊಂದರೆ ಇದ್ದು, ಈ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು.

ರಶ್ಮಿ ಪ್ರದೀಪ್‌ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT