ಮಂಗಳವಾರ, ಅಕ್ಟೋಬರ್ 19, 2021
22 °C
ಸಾರ್ವಜನಿಕರನ್ನು ಸಮಾಧಾನಪಡಿಸಲು ಮುಂದಾದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ

ಚಿತ್ರದುರ್ಗ: ನಗರಸಭೆ ಸದಸ್ಯರ ವಿರುದ್ಧ ಭುಗಿಲೆದ್ದ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಈಚೆಗೆ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಸಾಮಗ್ರಿಗಳು ನೀರಿನೊಂದಿಗೆ ಕೊಚ್ಚಿ ಹೋಗಿವೆ. ಜನ ಸಂಕಷ್ಟದಲ್ಲಿ ಇದ್ದಾರೆ. ಸೌಜನ್ಯಕ್ಕಾದರೂ ಈ ಭಾಗದ ನಗರಸಭೆ ಸದಸ್ಯ ಭೇಟಿ ನೀಡಿಲ್ಲ. ಇಂಥವರು ಮತ ಕೇಳಲು ಬರುತ್ತಾರೆ. ಸಾರ್ವಜನಿಕರ ಸಮಸ್ಯೆ ಆಲಿಸಲು ಅಲ್ಲ..’

ಮಳೆಯಿಂದ ತೊಂದರೆಗೆ ಒಳಗಾದ ಐಯುಡಿಪಿ ಲೇಔಟ್‌ನ ಬಾಬು ಜಗಜೀವನರಾಂ ಬಡಾವಣೆ ನಿವಾಸಿಗಳಿಗೆ ಆಹಾರದ ಕಿಟ್‌ ನೀಡಲು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಬಂದಿದ್ದರು. ಈ ವೇಳೆ ನಗರಸಭೆಯ ಜನಪ್ರತಿನಿಧಿಗಳ ವಿರುದ್ಧ ಬುಗಿಲೆದ್ದ ಆಕ್ರೋಶವನ್ನು ಜನರು
ಹೊರಹಾಕಿದರು.

ಶಾಸಕರು ಮನವೊಲಿಸಲು ಪ್ರಯತ್ನಿಸಿದರು ಕೆಲವರು ಸುಮ್ಮನಾಗಲಿಲ್ಲ. ‘ನೋಡಿ ಗಲಾಟೆ, ವಾಗ್ವಾದಕ್ಕೆ ನಾನು ಉತ್ತರ ನೀಡಲು ಬಂದಿಲ್ಲ. ನಿವಾಸಿಗಳಿಗೆ ಆಹಾರ ಧಾನ್ಯ, ಪರಿಹಾರದ ಚೆಕ್‌ ನೀಡಲು ಬಂದಿದ್ದೇನೆ. ಬಡವರ ಪರ ಕೆಲಸ ಮಾಡಿದ್ದಕ್ಕಾಗಿ ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಬಡವರ ಪರ ಕೆಲಸ ಮಾಡಿಲ್ಲ ಎಂಬುದಾಗಿ ಸಾರ್ವಜನಿಕ ಹೇಳಿಕೆ ನೀಡಿದಲ್ಲಿ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಈ ಕ್ಷೇತ್ರದಿಂದಲೇ ದೂರ ಸರಿಯುತ್ತೇನೆ’ ಎಂದು ತಿಪ್ಪಾರೆಡ್ಡಿ ಬೇಸರ ಹೊರಹಾಕಿದರು.

‘ರಾಜಕೀಯದ ಮೂಲಕ ಐದು ದಶಕಗಳಿಂದಲೂ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದೇನೆ. ನನಗೆ ಬಡವರು ಬೆನ್ನೆಲುಬಾಗಿ ನಿಂತಿದ್ದಾರೆ. ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ಪುನಃ ದೊರೆಯುತ್ತಿರುವುದು ನನ್ನ ಸೌಭಾಗ್ಯ. ಅಸಮಾಧಾನ ಮುಂದುವರಿಸುವುದು ಬೇಡ’ ಎಂದು ಮನವಿ ಮಾಡಿದರು. ನಂತರ ಜನರ ಆಕ್ರೋಶ ತಣ್ಣಗಾಯಿತು.

‘ಕೆಲವರು ಅಗತ್ಯಕ್ಕಿಂತ ಹೆಚ್ಚು ಮನೆ ಸರ್ಕಾರಿ ಯೋಜನೆಗಳಿಂದ ಪಡೆದಿದ್ದಾರೆ. ಈ ಕುರಿತು ಪರಿಶೀಲಿಸಿ ಮನೆ ಇಲ್ಲದವರಿಗೆ ಸೌಲಭ್ಯ ಕಲ್ಪಿಸಬೇಕು. ಇದು ಕೊಳೆಗೇರಿ ಪ್ರದೇಶವಾಗಿದ್ದು, ಸಾರ್ವಜನಿಕ ಗ್ರಂಥಾಲಯ ಆರಂಭಿಸಬೇಕು’ ಎಂದು ಸ್ಥಳೀಯರು ಕೋರಿದರು.

ತಾಲ್ಲೂಕು ಆಡಳಿತದಿಂದ ಅಕ್ಕಿ, ಅಡುಗೆ ಎಣ್ಣೆ, ಬೇಳೆ, ಸೋಪು, ಪೇಸ್ಟ್ ಸೇರಿ ಅಗತ್ಯ ವಸ್ತುಗಳುಳ್ಳ 25 ಕಿಟ್‌, 15 ಜನರಿಗೆ ತಲಾ ₹ 3,800 ಹಾಗೂ ನಗರಸಭೆಯಿಂದ ತಲಾ ₹ 1 ಸಾವಿರ ಪರಿಹಾರದ ಚೆಕ್‌ ವಿತರಿಸಲಾಯಿತು.

ತಹಶೀಲ್ದಾರ್ ಸತ್ಯನಾರಾಯಣ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್‌ ರೆಡ್ಡಿ, ನಗರಸಭೆ ಸದಸ್ಯರಾದ ಭಾಸ್ಕರ್, ಶ್ರೀನಿವಾಸ್, ಎಂಜಿನಿಯರ್ ಮನೋಹರ್, ರಮೇಶ್, ರಾಜಮ್ಮ, ವರಲಕ್ಷ್ಮಿ, ಪ್ರೇಮಾ ಇದ್ದರು.

 ಮೂಲಸೌಕರ್ಯ ಕಲ್ಪಿಸಲು ಮನವಿ
‘ಈಚೆಗಷ್ಟೇ ಸುರಿದ ಭಾರಿ ಮಳೆಗೆ ಇಲ್ಲಿನ ಕೆಲವು ಮನೆಗಳಿಗೆ ನೀರು ನುಗ್ಗಿ ತೀವ್ರ ತೊಂದರೆ ಉಂಟಾಯಿತು. ಈ ವೇಳೆ ಸ್ಥಳೀಯ ನಿವಾಸಿಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಬೇಕು. ಚರಂಡಿ ವ್ಯವಸ್ಥೆ ಸರಿ ಇಲ್ಲ. ಸರಾಗವಾಗಿ ನೀರು ಹರಿಯದ ಕಾರಣ ಮನೆಗಳಿಗೆ ನುಗ್ಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಕೂಡ ಇಲ್ಲಿದೆ. ಮೂಲಸೌಕರ್ಯ ಕೊರತೆಗಳ ಕುರಿತು ಶಾಸಕರು ಗಮನಹರಿಸಬೇಕು’ ಎಂದು ಸ್ಥಳೀಯ ಮುಖಂಡ ದೇವರಾಜ್ ಮನವಿ ಮಾಡಿದರು. ಇದಕ್ಕೆ ನೆರೆದಿದ್ದ ಮಹಿಳೆಯರು ಕೂಡ ದನಿಗೂಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು