ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬೆಳಗುವ ನಂದಾದೀಪ ಸ್ತ್ರೀ

ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶಿವಮೂರ್ತಿ ಮುರುಘಾ ಶರಣರು
Last Updated 6 ಡಿಸೆಂಬರ್ 2021, 5:38 IST
ಅಕ್ಷರ ಗಾತ್ರ

ಚಿತ್ರದುರ್ಗ: ಎಲ್ಲಿಯೋ ಬೆಳೆದ ಪುಷ್ಪ ಬಹುತೇಕ ಶುಭ ಕಾರ್ಯಕ್ರಮಗಳಲ್ಲಿ ನಳನಳಿಸುತ್ತ ತನ್ನನ್ನು ಸಮರ್ಪಿಸಿಕೊಳ್ಳುತ್ತದೆ. ಅದೇ ರೀತಿ ಸ್ತ್ರೀ ಕೂಡ ಜೀವನ ಸಂಗಾತಿಯಾದ ಪತಿಯ ಮನೆಯನ್ನು ಬೆಳಗುವ ನಂದಾದೀಪ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಬಸವಕೇಂದ್ರ ಮುರುಘಾಮಠದ ಅನುಭವ ಮಂಟಪದಲ್ಲಿ ಶ್ರೀಮಠ, ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 31ನೇ ವರ್ಷದ 12ನೇ ತಿಂಗಳ ‘ಸಾಮೂಹಿಕ ಕಲ್ಯಾಣ ಮಹೋತ್ಸವ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹೆಣ್ಣಿನ ಕುಟುಂಬದವರನ್ನು ಹಣಕ್ಕಾಗಿ ಪೀಡಿಸುವವರು ಎಂದಿಗೂ ಉದ್ಧಾರ ಆಗುವುದಿಲ್ಲ. ಅವರ ಬದುಕು ಸುಖಕರವಾಗಿರಲು ಸಾಧ್ಯವಿಲ್ಲ. ಯಾರೂ ಇಂತಹ ಶೋಷಣೆ ಮಾಡಬಾರದು. ವಧು–ವರರ ಕೊರಳು ಸೇರುವ ಹೂಮಾಲೆಗೆ ವಿಶಾಲ ಭಾವನೆ ಇರುವಾಗ ಮನುಷ್ಯರೇಕೆ ಬದಲಾಗಬಾರದು’ ಎಂದು ಅವರು ಪ್ರಶ್ನಿಸಿದರು.

ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಪ್ರಸನ್ನಕುಮಾರ್, ‘ದೇಶಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಸನಾತನ ಹಿಂದೂ ಧರ್ಮ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿದೆ. ಆದರೆ, ಇತ್ತೀಚೆಗೆ ವಿದೇಶಿ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ಎಲ್ಲ ಧರ್ಮ–ಜಾತಿಗಳ ಸರಳ ವಿವಾಹಗಳು ಮುರುಘಾಮಠದಲ್ಲಿ ನಡೆಯುತ್ತಿರುವುದು ವಿಶೇಷ. ಇದು ರಾಜ್ಯ–ರಾಷ್ಟ್ರಕ್ಕೆ ಪ್ರೇರಣೆಯಾಗಿದೆ. ಯಾರೂ ಆಡಂಬರದ ಜೀವನಕ್ಕೆ ಒಳಗಾಗಬಾರದು. ಸರಳ ಜೀವನ ನಡೆಸಬೇಕು. ಎಲ್ಲರನ್ನೂ ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಬೆಂಗಳೂರಿನ ಆರ್. ನಿರಂಜನ (ರೆಡ್ಡಿ ಸಮುದಾಯ) - ಚನ್ನಗಿರಿಯ ಎಚ್. ಆಲಮ್ಮ (ಆದಿದ್ರಾವಿಡ), ಕೊಪ್ಪಳ ಜಿಲ್ಲೆಯ ಶರಣಪ್ಪ ಶಿವಪ್ಪ ಪಲ್ಲೇದ (ಲಿಂಗಾಯತ) - ದಾವಣಗೆರೆಯ ಎನ್. ಪೂಜಾ (ವಾಲ್ಮೀಕಿ) ಎರಡು ಅಂತರ್ಜಾತಿ ವಿವಾಹ ಸೇರಿ ಒಟ್ಟು 29 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಾಸೋಹಿಗಳಾದ ಎಸ್. ರುದ್ರಮುನಿಯಪ್ಪ, ಎಂ.ಶಂಕರಮೂರ್ತಿ ಇದ್ದರು.

***

ದುರಾಸೆ ಸಂಸಾರವನ್ನು ದುಃಖಕ್ಕೆ ತಳ್ಳುತ್ತದೆ. ಪತಿ–ಪತ್ನಿಯರಲ್ಲಿ ಸಾಮರಸ್ಯ ಇದ್ದಾಗ ಬದುಕು ಪ್ರಜ್ವಲಿಸುತ್ತದೆ. ಪರೋಪಕಾರ ಗುಣದೊಂದಿಗೆ ಸಂಸ್ಕೃತಿ ಜತೆ ಸಾಗಿದರೆ ಜೀವನ ಪರಿಪೂರ್ಣವಾಗಲಿದೆ.

ಶಿವಮೂರ್ತಿ ಮುರುಘಾ ಶರಣರು, ಮುರುಘಾಮಠ

‘ಲೋಕ ಕಲ್ಯಾಣಕ್ಕೆ ಕೈಜೋಡಿಸಿ’

‘ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಶ್ರೀಮಠ ಸರಳವಾಗಿ ಸಾಮೂಹಿಕ ಕಲ್ಯಾಣ ನಡೆಸುತ್ತಿರುವುದು ಸಂತಸದ ವಿಷಯ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದೆ. ಜನ ಅನಗತ್ಯವಾಗಿ ಖರ್ಚು ಮಾಡುವ ಬದಲು ಅದನ್ನು ಸತ್ಕಾರ್ಯಗಳಿಗೆ ಬಳಸಿದರೆ ಲೋಕ ಕಲ್ಯಾಣಕ್ಕೆ ಕೈಜೋಡಿಸಿದಂತೆ ಆಗುತ್ತದೆ’ ಎಂದು ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣೆಜ್ಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT