ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭವಿಷ್ಯದಲ್ಲಿ ಮೀಸಲಾತಿ ರದ್ದಾದರೂ ಅಚ್ಚರಿ ಇಲ್ಲ: ಸಚಿವ ನಾರಾಯಣ

Published 23 ಜುಲೈ 2023, 16:00 IST
Last Updated 23 ಜುಲೈ 2023, 16:00 IST
ಅಕ್ಷರ ಗಾತ್ರ

ಹೊಳಲ್ಕೆರೆ: ಮುಂದೆ ಮೀಲಾತಿ ರದ್ದಾಗುವ ಸಾಧ್ಯತೆಗಳಿದ್ದು, ಮಾದಿಗ ಜನಾಂಗದ ವಿದ್ಯಾರ್ಥಿಗಳು ಮೇಲ್ವರ್ಗದ ವಿದ್ಯಾರ್ಥಿಗಳೊಂದಿಗೆ ಸಮಾನ ಸ್ಪರ್ಧೆ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಎಚ್ಚರಿಸಿದರು.

ಪಟ್ಟಣದಲ್ಲಿ ಭಾನುವಾರ ಡಾ.ಬಿ.ಆರ್. ಅಂಬೇಡ್ಕರ್ ಗ್ರಂಥಾಲಯ, ತಾಲ್ಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘ ಹಾಗೂ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾದಿಗ ಸಮಾಜ ಎಲ್ಲಾ ಕ್ಷೇತ್ರಗಳಲ್ಲಿ ಹಿಂದೆ ಉಳಿದಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ, ನಮ್ಮ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೇಳಿಕೊಳ್ಳುವ ಪ್ರಗತಿ ಸಾಧಿಸಿಲ್ಲ. ಸಮುದಾಯ ಮುಂದೆ ಬರಬೇಕು ಎಂದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ದಲಿತ ಸಮುದಾಯ ಶಿಕ್ಷಣ ಪಡೆಯಬೇಕು ಎಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಾಗಿತ್ತು. ಮಾದಿಗ ಸಮುದಾಯದ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸನ್ನದ್ಧರಾಗಬೇಕು. ಸ್ವಾಭಿಮಾನದಿಂದ ಬದುಕಬೇಕು’ ಎಂದು ಸಲಹೆ ನೀಡಿದರು.

‘ಛಲವಿದ್ದರೆ ಸಾಧನೆಗೆ ಯಾವುದೂ ಅಡ್ಡಿ ಆಗುವುದಿಲ್ಲ. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ, ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಮಾದರಿಯಾಗಿ ಇಟ್ಟುಕೊಂಡು ಅಧ್ಯಯನ ಮಾಡಬೇಕು’ ಎಂದು ಮಾಜಿ ಸಚಿವ ಎಚ್.ಆಂಜನೇಯ ಕಿವಿಮಾತು ಹೇಳಿದರು.

40 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, 22 ಪಿಯುಸಿ, ಇಬ್ಬರು ಬಿ.ಇಡಿ, ಇಬ್ಬರು ಪಿಎಚ್‌ಡಿ ಪದವಿ ಪಡೆದ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಆದಿಜಾಂಬವ ಮಠದ ಷಡಾಕ್ಷರಿ ಮುನಿ ಸ್ವಾಮೀಜಿ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಮಾದಿಗ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ. ಚಂದ್ರಪ್ಪ, ಗೌರವಾಧ್ಯಕ್ಷ ಕೆ.ಜೆ.ಜಗದೀಶ್, ತಾಲ್ಲೂಕು ಘಟಕದ ಅಧ್ಯಕ್ಷೆ ಜೆ.ಸಿದ್ದಲಿಂಗಮ್ಮ, ಎಸ್.ಶ್ರೀನಿವಾಸ ಮೀರ್ತಿ, ಎಂ.ರೇವಣ ಸಿದ್ದಪ್ಪ, ನಾಗರಾಜ್, ಜಂಬೂದ್ವೀಪ ರಾಮಣ್ಣ, ಉಮೇಶ್, ದಲಿತ ಸಂಘರ್ಷ ಸಮಿತಿಯ ಪಾಂಡುರಂಗಸ್ವಾಮಿ, ಕೆಂಗುಂಟೆ ಜಯಪ್ಪ, ಜಯಪ್ರಕಾಶ್ ಜೆಪಿ, ಸಿ.ಹನುಮಂತಪ್ಪ, ಇಒ ರವಿಕುಮಾರ್, ಎಸ್.ಎನ್.ಕಾಂತರಾಜ್, ಆರ್.ದ್ವಾಮಕ್ಕ ಸಮುದಾಯದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT