ಗುರುವಾರ , ಜನವರಿ 21, 2021
30 °C
ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ‘ಮುರುಘಾಶ್ರೀ ಮ್ಯೂಸಿಯಂ’ ಲೋಕಾರ್ಪಣೆ

ಪ್ರವಾಸೋದ್ಯಮ ಭೂಪಟದಲ್ಲಿ ಚಿತ್ರದುರ್ಗ ಚಿರಸ್ಥಾಯಿ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಪ್ರಾಚ್ಯ ವಸ್ತುಸಂಗ್ರಹಾಲಯ, ಬಸವೇಶ್ವರ ಪ್ರತಿಮೆ ನಿರ್ಮಿಸುವ ಮೂಲಕ ಪ್ರವಾಸೋದ್ಯಮ ಭೂಪಟದಲ್ಲಿ ಚಿತ್ರದುರ್ಗ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುತ್ತಿರುವ ಮುರುಘಾ ಮಠದ ಪ್ರಯತ್ನ ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಮುರುಘಾ ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ‘ಮುರುಘಾಶ್ರೀ ಮ್ಯೂಸಿಯಂ’ ಲೋಕಾರ್ಪಣೆ ಹಾಗೂ ಉತ್ತರ ದಿಕ್ಕಿನ ಶಿಲಾನ್ಯಾಸ ಮಂಟಪ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶಿವಮೂರ್ತಿ ಮುರುಘಾ ಶರಣರ ಹಲವು ವರ್ಷಗಳ ಕನಸಾದ ಮ್ಯೂಸಿಯಂ ರಾಷ್ಟ್ರಕ್ಕೆ ಲೋಕಾರ್ಪಣೆಗೊಂಡಿದೆ. ಇಂಡೊನೇಷ್ಯಾ, ದಕ್ಷಿಣ ಆಫ್ರಿಕಾ ಸೇರಿ ಹಲವು ರಾಷ್ಟ್ರಗಳ ಅಪರೂಪದ ವಸ್ತುಗಳು ಇಲ್ಲಿವೆ. 50 ಸಾವಿರ ಪ್ರಾಚ್ಯ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದು ಅಭಿಮಾನದ ಸಂಗತಿ. ಬಸವಾದಿ ಶರಣರ ಆಶಯದಂತೆ ಸಮಸಮಾಜ ನಿರ್ಮಿಸುವ ಕಾರ್ಯದಲ್ಲಿ ಮಠ ತೊಡಗಿಕೊಂಡಿದೆ’ ಎಂದು ಹೇಳಿದರು.

‘ಬಸವಾದಿ ಶರಣರ ದಾರಿಯಲ್ಲಿ ಸಮಾಜವನ್ನು ಮುನ್ನಡೆಸುತ್ತಿರುವ ಶರಣರು, ಶೋಷಿತರ ಪಾಲಿಗೆ ಬೆಳಕಾಗಿದ್ದಾರೆ. ಜಾತ್ಯತೀತ ಮಠವನ್ನಾಗಿ ರೂಪಿಸಿದ ಹಿರಿಮೆ ಅವರಿಗೆ ಸಲ್ಲಬೇಕು. ವೈಚಾರಿಕ ನೆಲೆಗಟ್ಟಿನಲ್ಲಿ ಸಾಮಾಜಿಕ ಪರಿವರ್ತನೆ ಮಾಡುತ್ತಿರುವ ಮುರುಘಾ ಶರಣರು ಎಲ್ಲರೊಂದಿಗೆ ಬೆರೆತು ಮಾಡಿದ ಕಾರ್ಯಗಳು ಅನುಕರಣೀಯ. ನಿರ್ಲಕ್ಷಿತ ಸಮುದಾಯಕ್ಕೆ ಮಠ–ಪೀಠ ಕಟ್ಟಿಕೊಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯ ವಿತರಣಾ ನ್ಯಾಯ ಒದಗಿಸಿದ್ದಾರೆ’ ಎಂದು ಕೊಂಡಾಡಿದರು.

‘ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ ಅತ್ಯಂತ ವೈಭವಪೂರ್ವಕ ವಾಗಿದೆ. ನೆಲ, ಜಲ, ಸಂಪತ್ತಿನಂತೆ ಧರ್ಮ, ಸಂಸ್ಕೃತಿಯಲ್ಲಿಯೂ ಶ್ರೀಮಂತಿಕೆ ಹೊಂದಿದೆ. ಮಠಗಳು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ’ ಎಂದು ಹೇಳಿದರು.

ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ವಸ್ತುವನ್ನು ಬ್ಯಾಂಕಿನಲ್ಲಿಟ್ಟರೆ ನಿಧಿ ಎನಿಸಿಕೊಳ್ಳುತ್ತದೆ. ಮೈಮೇಲೆ ಧರಿಸಿದ ಆಭರಣವಾಗುತ್ತದೆ. ವಸ್ತುಸಂಗ್ರಹಾಲಯ ಸೇರಿದರೆ ಆಕರ್ಷಣೆ ಹೆಚ್ಚುತ್ತದೆ. ಸಾಮಾನ್ಯ ಹಾಗೂ ಅಸಾಮಾನ್ಯ ಎನಿಸಿದ ವಸ್ತುಗಳು ಇಲ್ಲಿವೆ. ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸದ ಫಲವಾಗಿ ಮ್ಯೂಸಿಯಂ ರೂಪುತಳೆದಿದೆ’ ಎಂದರು.

‘ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವವರೆಗೆ ರಾಜ್ಯದ ಕೆಲವು ಪ್ರದೇಶಗಳು ಮಾತ್ರ ಅಭಿವೃದ್ಧಿ ಹೊಂದುತ್ತಿದ್ದವು. ಯಡಿಯೂರಪ್ಪ ಅವರ ಕಾಲದಲ್ಲಿ ಇಡೀ ರಾಜ್ಯ ಅಭಿವೃದ್ಧಿ ಹೊಂದುತ್ತಿದೆ. ಅವರಿಗೆ ಸ್ಟಾರ್‌ ಹಾಗೂ ಫೇಸ್ ವ್ಯಾಲ್ಯೂ ಇದೆ. ಬಸವಣ್ಣನವರ ಮಾರ್ಗದಲ್ಲಿ ಯಡಿಯೂರಪ್ಪ ಸಾಗುತ್ತಿದ್ದಾರೆ’ ಎಂದು ಅಭಿಮಾನ ವ್ಯಕ್ತಪಡಿಸಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

***

‘ಕಲ್ಯಾಣ ಕರ್ನಾಟಕದ ಸೌಲಭ್ಯ ನೀಡಿ’

ಚಿತ್ರದುರ್ಗ ಬರದ ನಾಡು ಎಂಬ ಅಪಖ್ಯಾತಿಗೆ ಒಳಗಾಗಿದೆ. ಈ ಅಪಖ್ಯಾತಿಯನ್ನು ತೊಳೆಯಲು ಕಲ್ಯಾಣ ಕರ್ನಾಟಕ ಅಥವಾ ಉತ್ತರ ಕರ್ನಾಟಕದ ಯೋಜನೆಗಳಿಗೆ ಜಿಲ್ಲೆಯನ್ನು ಸೇರಿಸಿ ಎಂದು ಶಿವಮೂರ್ತಿ ಮುರುಘಾ ಶರಣರು ಮನವಿ
ಮಾಡಿದರು.

‘ಪ್ರಾದೇಶಿಕ ಅಸಮತೋಲನವನ್ನು ತೊಡೆದುಹಾಕುವ ಕಾರ್ಯ ಆಗಬೇಕಿದೆ. ಕರ್ನಾಟಕ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕಿದೆ. ಚಿತ್ರದುರ್ಗ ಕೂಡ ಅತ್ಯಂತ ಹಿಂದುಳಿದಿದೆ. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಸೂಕ್ತ ತೀರ್ಮಾನ ಕೈಗೊಳ್ಳಿ’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು