ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಪುರ: ಪ್ರಾಥಮಿಕ ಶಿಕ್ಷಣಕ್ಕಷ್ಟೇ ಸೀಮಿತ

40ಕ್ಕೂ ಹೆಚ್ಚು ಗ್ರಾಮಗಳಿಗೆ ಕೇಂದ್ರ ಸ್ಥಾನ: ಬಳ್ಳಾರಿಗೆ ಹೋಗುವ ಅನಿವಾರ್ಯತೆ ಸೃಷ್ಟಿ
Published 21 ಏಪ್ರಿಲ್ 2024, 7:15 IST
Last Updated 21 ಏಪ್ರಿಲ್ 2024, 7:15 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಚಿತ್ರದುರ್ಗ ಜಿಲ್ಲೆಯ ದೊಡ್ಡ ಗ್ರಾಮಗಳಲ್ಲಿ ತಾಲ್ಲೂಕಿನ ರಾಂಪುರ ಕೂಡ ಒಂದು. ಇಲ್ಲಿ ಸರ್ಕಾರಿ ಪ್ರೌಢ ಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳೇ ಇಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ದೇವಸಮುದ್ರ ಹೋಬಳಿ ವ್ಯಾಪ್ತಿಯ 30ಕ್ಕೂ ಹೆಚ್ಚು ಮತ್ತು ಕೂಡ್ಲಿಗಿ ಹಾಗೂ ಸಂಡೂರು ತಾಲ್ಲೂಕಿನ ಹತ್ತಾರು ಗ್ರಾಮಗಳಿಗೆ ರಾಂಪುರವೇ ಕೇಂದ್ರ ಸ್ಥಾನ. ಇಲ್ಲಿ ಹಿರಿಯ ಪ್ರಾಥಮಿಕ ಹಂತದವರೆಗೆ ಮಾತ್ರ ಸರ್ಕಾರಿ ಶಾಲೆಯಲ್ಲಿ ಕಲಿಯಲು ಅವಕಾಶ ಇದೆ. ಪ್ರೌಢ, ಪಿಯು ಹಾಗೂ ಪದವಿ ಶಿಕ್ಷಣಕ್ಕೆ ಇಲ್ಲಿನವರು ಖಾಸಗಿ ವಿದ್ಯಾಸಂಸ್ಥೆಗಳನ್ನೇ ಅವಲಂಬಿಸಬೇಕು. ಇಲ್ಲವೇ ದೂರದ ಬಳ್ಳಾರಿ, ಚಳ್ಳಕೆರೆಗೆ ಹೋಗಬೇಕಿದೆ.

‘ರಾಂಪುರದಲ್ಲಿ 12 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಕೊಂಡಾಪುರ, ಬಸಾಪುರ, ವಿಠಲಾಫುರ, ವೆಂಕಟಾಪುರ, ಕಣಕುಪ್ಪೆ, ಶಿರೇಕೊಳ, ವೀರಾಪುರ, ಮೇಗಲಕಣಿವೆ, ಕೆಳಗಿನಕಣಿವೆ, ಪೆನ್ನಮ್ಮನಹಳ್ಳಿ ಸೇರಿದಂತೆ ಕೂಡ್ಲಿಗಿ ಮತ್ತು ಸಂಡೂರು ತಾಲ್ಲೂಕಿನ ಹಲವು ಗ್ರಾಮಗಳಿಗೂ ರಾಂಪುರವೇ ಕೇಂದ್ರ ಸ್ಥಳ. ಇಲ್ಲಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ಕಾಲೇಜು ಆರಂಭಿಸಬೇಕಿದೆ. ಆದರೆ ಜನಪ್ರತಿನಿಧಿಗಳಿಗೆ ಈ ಕುರಿತು ಆಸಕ್ತಿಯೇ ಇಲ್ಲ. ಅಧಿಕಾರಿಗಳಲ್ಲೂ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ. ಇದರಿಂದ ವಿದ್ಯಾರ್ಥಿಗಳು ಪಡಿಪಾಟಲು ಪಡಬೇಕಾಗಿದೆ’ ಎಂದು ದಸಂಸ ಜಿಲ್ಲಾ ಸಂಚಾಲಕ ಕೊಂಡಾಪುರ ಪರಮೇಶ್ವರಪ್ಪ ದೂರುತ್ತಾರೆ.

‘ಸರ್ಕಾರದ ನಿರ್ಲಕ್ಷ್ಯದಿಂದಾಗಿ ಖಾಸಗಿ ಸಂಸ್ಥೆಗಳಿಗೆ ಲಾಭವಾಗುತ್ತಿದೆ. ಈ ಭಾಗವು ಮಳೆಯಾಶ್ರಿತವಾಗಿದ್ದು ಕೂಲಿ ಕಾರ್ಮಿಕರು, ದಿನಗೂಲಿಗಳೇ ಹೆಚ್ಚಾಗಿ ನೆಲೆಸಿದ್ದಾರೆ. ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ ಪಾವತಿಸಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಶಕ್ತಿ ಅವರಿಗಿಲ್ಲ. ಸರ್ಕಾರಿ ಶಾಲೆ ಅಥವಾ ಕಾಲೇಜು ಸ್ಥಾಪನೆಯಾದರೆ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಸಿಗುತ್ತದೆ. ಜೊತೆಗೆ ಸರ್ಕಾರದ ಇತರೆ ಸೌಲಭ್ಯಗಳು ಅವರಿಗೆ ಲಭಿಸುತ್ತವೆ’ ಎಂದು ಹೇಳುತ್ತಾರೆ.

‘ಪಿಯು, ಪದವಿ, ಐಟಿಐ ಕಲಿಕೆಗಾಗಿ ಹೆಚ್ಚಿನ ವಿದ್ಯಾರ್ಥಿಗಳು ಬಳ್ಳಾರಿಗೆ ಹೋಗಬೇಕಾಗಿದೆ. ಹೀಗೆ ಪ್ರಯಾಣ ಕೈಗೊಳ್ಳುವವರು ಪ್ರತಿದಿನ ಬೆಳಿಗ್ಗೆ 6 ಇಲ್ಲವೇ 7 ಗಂಟೆ ವೇಳೆಗೇ ಬಸ್‌ಗಾಗಿ ಕಾದು ನಿಲ್ಲುತ್ತಾರೆ. ಇದು ಸಮಸ್ಯೆಯ ತೀವ್ರತೆಗೆ ಹಿಡಿದ ಕನ್ನಡಿಯಂತಿದೆ. ಸಮಯಕ್ಕೆ ಸರಿಯಾಗಿ ಬಸ್‌ ಬರುವುದಿಲ್ಲ. ಬಹುಪಾಲು ಬಸ್‌ಗಳು ಹೆದ್ದಾರಿಯ ಬೈಪಾಸ್‌ ಮೂಲಕವೇ  ಹೋಗುವ ಕಾರಣ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಶ್‌ ತಿಳಿಸಿದರು. 

‘ಗ್ರಾಮದ ಗಡ್ಡೆ ವೀರಭದ್ರಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ವಿಶಾಲ ಜಾಗವಿದೆ. ಇಲ್ಲಿಯೇ ಪ್ರೌಢ, ಪದವಿ ಕಾಲೇಜು ಆರಂಭಿಸಬಹುದು. ಆದರೆ ಇದಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಅಗತ್ಯ. ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜು ಒದಗಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಸಂಬಂಧಪಟ್ಟವರು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಮನೋಧೋರಣೆ ಬದಲಿಸಲಿ. ಈ ಶೈಕ್ಷಣಿಕ ವರ್ಷದಲ್ಲೇ ಶಾಲೆ, ಕಾಲೇಜು ಆರಂಭಕ್ಕೆ ಕ್ರಮ ಕೈಗೊಳ್ಳಲಿ’ ಎಂದು ಕೊಂಡಾಪುರದ ಪರಮೇಶ್ವರಪ್ಪ ಮನವಿ ಮಾಡಿದರು.

ರಾಂಪುರದಲ್ಲಿ ಕೆಪಿಎಸ್‌ಸಿ ಶಾಲೆ ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕಾಟನಾಯಕನಹಳ್ಳಿ ಹಾಗೂ ರಾಂಪುರದಲ್ಲಿ ಶಾಲೆ ಆರಂಭವಾಗುವ ಸಾಧ್ಯತೆಯಿದೆ. ಚುನಾವಣೆ ನಂತರ ಈ ಬಗ್ಗೆ ವಿವರ ಪಡೆಯುತ್ತೇವೆ
–ನಿರ್ಮಲಾದೇವಿ ಬಿಇಒ ಮೊಳಕಾಲ್ಮುರು
ಪ್ರತಿಭಟನೆ ಮಾಡಿದಾಗ ಮಾತ್ರ ಒಂದೆರೆಡು ದಿನ ಬಸ್‌ಗಳು ಗ್ರಾಮದ‌ ಒಳಗಡೆ ಬಂದು ಹೋದವು. ನಂತರ ಸಮಸ್ಯೆ ಮುಂದುವರಿದಿದೆ. ಸಹಾಯವಾಣಿ ಆರಂಭಿಸಿದ್ದರೂ ಮಾಹಿತಿ ಕೊರತೆಯಿಂದ ಸೌಲಭ್ಯ ಸಿಗುತ್ತಿಲ್ಲ
–ತಿಪ್ಪೇಶ್ ಗ್ರಾ.ಪಂ. ಸದಸ್ಯ ರಾಂಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT