ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಬಿರುಬಿಸಿಲು: ಟೊಮೆಟೊ ನಾಟಿ ಪ್ರದೇಶ ಕುಸಿತ

ಪ್ರಜಾವಾಣಿ ವಿಶೇಷ: ದರ ಕುಸಿತ, ಕೂಲಿ ಕಾರ್ಮಿಕರ ಕೊರತೆಗೆ ತತ್ತರಿಸಿದ ಬೆಳೆಗಾರ
Published 4 ಜೂನ್ 2023, 6:15 IST
Last Updated 4 ಜೂನ್ 2023, 6:15 IST
ಅಕ್ಷರ ಗಾತ್ರ

ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ಹೆಚ್ಚಾದ ಬಿಸಿಲಿನ ಪ್ರಖರತೆ, ಕೂಲಿ ಕಾರ್ಮಿಕರ ಕೊರತೆ, ಸತತ ದರ ಕುಸಿತದ ಕಾರಣಕ್ಕೆ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಟೊಮೆಟೊ ನಾಟಿ ಪ್ರಮಾಣ ತೀವ್ರ ಕುಸಿತವಾಗುವ ಲಕ್ಷಣಗಳು ಕಂಡುಬಂದಿದೆ.

ಮುಂಗಾರಿನಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ ಭಾಗದಲ್ಲಿ ಪ್ರಮುಖವಾಗಿ ಟೊಮೆಟೊ ನಾಟಿ ಮಾಡಲಾಗುತ್ತದೆ. ಚಿತ್ರದುರ್ಗ, ಹಿರಿಯೂರು ತಾಲ್ಲೂಕಿನ ಕೆಲವು ಭಾಗಗಳಲ್ಲೂ ನಾಟಿ ಮಾಡಲಾಗುತ್ತದೆ. ಈ ಬಾರಿ ಜೂನ್‌ವರೆಗೆ ಉತ್ತಮ ಮಳೆಯಾಗದಿರುವುದು ಹಾಗೂ ಭಾರಿ ಬಿಸಿಲಿನಿಂದಾಗಿ ಟೊಮೊಟೊ ನಾಟಿಗೆ ರೈತರು ಮುಂದಾಗಿಲ್ಲ. ಈ ಕಾರಣಕ್ಕೆ ನಿಧಾನವಾಗಿ ಟೊಮೆಟೊ ದರ ಏರಿಕೆಯಾಗುತ್ತಿದೆ.

ಕಳೆದ ವರ್ಷ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳಿಂದ ಮುಂಗಾರು ಅವಧಿಯಲ್ಲಿ 5 ಕೋಟಿಗೂ ಹೆಚ್ಚು ಸಸಿಗಳು ಮಾರಾಟವಾಗಿದ್ದವು. ಈ ಬಾರಿ ಒಂದು ಕೋಟಿ ಸಸಿ ಮಾರಾಟವಾಗಿರುವ ಅಂದಾಜಿದೆ ಎನ್ನುತ್ತಾರೆ ಚಳ್ಳಕೆರೆಯ ಟೊಮೆಟೊ ನರ್ಸರಿ ಮಾಲೀಕ ವಿಷ್ಣು.

ಬಿಸಿಲಿನ ಪ್ರಖರತೆಯಿಂದ ಅನೇಕ ಕಡೆ ಸಸಿಗಳು ಬಾಡುತ್ತಿವೆ ಎನ್ನಲಾಗಿದೆ. ಪ್ರತಿ ಸಸಿಗೆ ₹ 1ರಿಂದ ₹ 1.50 ದರವಿದೆ. ಕೋಲಾರ, ಚಿಂತಾಮಣಿ, ಶ್ರೀನಿವಾಸಪುರ ಸುತ್ತಮುತ್ತ ಟೊಮೊಟೊ ಬೆಳೆಯಲಾಗುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲೂ ನಾಟಿ ನಡೆಯುತ್ತದೆ. ಮಹಾರಾಷ್ಟ, ಛತ್ತೀಸಗಢ, ಗುಜರಾತ್, ತೆಲಂಗಾಣದಲ್ಲಿ ಟೊಮೆಟೊ ಬೆಳೆಯಲಾಗುತ್ತಿದ್ದು, ಆ ಫಸಲು ಆಯಾ ಗಡಿ ಪ್ರದೇಶಗಳ ಮಾರುಕಟ್ಟೆಗೆ ಬರುತ್ತದೆ. ದರ ಏರಿಕೆಯಾದರೆ ಮಾತ್ರ, ಇತರ ರಾಜ್ಯಗಳ ಟೊಮೊಟೊ ರಾಜ್ಯಕ್ಕೆ ಪೂರೈಕೆಯಾಗುತ್ತದೆ ಎಂದು ಅವರು ಹೇಳುತ್ತಾರೆ. 

‘ನಾಟಿ ಪ್ರಮಾಣ ಗಮನಿಸಿದರೆ, ಜುಲೈ–ಆಗಸ್ಟ್‌ ವೇಳೆ ಟೊಮೆಟೊ ಬೆಳೆಗಾರರಿಗೆ ಉತ್ತಮ ದರ ಸಿಗುವ ಸಾಧ್ಯತೆಯಿದೆ. ಕೂಲಿ ಕಾರ್ಮಿಕರ ಕೊರತೆ ಹೆಚ್ಚುತ್ತಿದೆ. ಟೊಮೆಟೊ ಬೆಳೆಯಲು ಪ್ರತಿ ಎಕರೆಗೆ ₹ 2 ಲಕ್ಷ ವೆಚ್ಚವಾಗುತ್ತದೆ. ಕೆ.ಜಿ. ಟೊಮೊಟೊಗೆ ₹ 15ರಿಂದ ₹ 20 ದರ ಸಿಕ್ಕರೆ ಹಾಕಿರುವ ಬಂಡವಾಳ ವಾಪಸ್ ಬರುತ್ತದೆ. ಆದರೆ, ಕಳೆದ ವರ್ಷದಿಂದ ಸತತವಾಗಿ ದರ ಕುಸಿದಿರುವ ಕಾರಣ, ಮೆಕ್ಕೆಜೋಳ, ಕುಂಬಳ, ಕರಬೂಜ, ಕಲ್ಲಂಗಡಿ ಬೆಳೆಯತ್ತ ರೈತರು ಮುಖ ಮಾಡಿದ್ದಾರೆ‘ ಎಂದು ಅವರು ಮಾಹಿತಿ ನೀಡಿದರು.

ಬಿರುಬಿಸಿಲಿಗೆ ಗಿಡಗಳು ಸೊರಗುತ್ತಿವೆ. ನಾಟಿ ಮಾಡಿದ್ದರಲ್ಲಿ ಅರ್ಧದಷ್ಟು ಗಿಡ ಉಳಿಯಬಹುದು. ಮಳೆ ಬಂದರೆ ಮಾತ್ರ ಅನುಕೂಲ ತಿಪ್ಪೇಸ್ವಾಮಿ ಟೊಮೆಟೊ ಬೆಳೆಗಾರ ಕೋನಸಾಗರ

ನಾಟಿ ಪ್ರಮಾಣ ಕುಸಿತ ಅವಳಿ ತಾಲ್ಲೂಕುಗಳಲ್ಲಿ ಕಳೆದ ವರ್ಷ 4200 ಹೆಕ್ಟೇರ್‌ನಲ್ಲಿ ಟೊಮೆಟೊ ನಾಟಿ ಮಾಡಲಾಗಿತ್ತು. ಈ ವರ್ಷ 1500 ಹೆಕ್ಟೇರ್‌ನಲ್ಲಿ ನಾಟಿ ಮಾಡಿರುವ ಅಂದಾಜಿದೆ. ನಾಟಿಗೆ ಇನ್ನೂ ಸಮಯವಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಮಾಣ ಕಡಿಮೆ ಆಗುವ ಸಾಧ್ಯತೆಯಿದೆ. ಬಿಸಿಲ ಹೆಚ್ಚಳ ಹದ ಮಳೆ ಕೊರತೆ ದರ ಕುಸಿತ ಇದಕ್ಕೆ ಕಾರಣ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ. ಆರ್. ವಿರೂಪಾಕ್ಷಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT