ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದುರ್ಗ | ನೀರು ಶುದ್ಧೀಕರಣ ಘಟಕದಲ್ಲಿ ಕ್ಲೋರಿನ್ ಸೋರಿಕೆ: 30 ಜನ ಅಸ್ವಸ್ಥ

Published : 9 ಸೆಪ್ಟೆಂಬರ್ 2024, 15:57 IST
Last Updated : 9 ಸೆಪ್ಟೆಂಬರ್ 2024, 15:57 IST
ಫಾಲೋ ಮಾಡಿ
Comments

ಹೊಸದುರ್ಗ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದ ಎದುರಿರುವ ನೀರು ಶುದ್ಧೀಕರಣ ಘಟಕದಲ್ಲಿ ಸೋಮವಾರ ಕ್ಲೋರಿನ್ ಸೋರಿಕೆಯಾಗಿ 30 ಜನರು ಅಸ್ವಸ್ಥಗೊಂಡಿದ್ದಾರೆ.

ಸಂಜೆ 6ರ ಸುಮಾರಿಗೆ ಘಟಕದಲ್ಲಿ ಇದ್ದಕ್ಕಿದ್ದಂತೆ ಕ್ಲೋರಿನ್ ಸೋರಿಕೆಯಾಗಿದೆ. ಅಕ್ಕಪಕ್ಕದ ಬಡಾವಣೆಯ ನಿವಾಸಿಗಳು ಅಸ್ವಸ್ಥರಾಗಿದ್ದು, ಅವರೆಲ್ಲರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರಾತ್ರಿ 8 ರ ಹೊತ್ತಿಗೆ ಸೋರಿಕೆ ತಡೆಯಲಾಗಿದೆ.

ಇಲ್ಲಿನ ಕಲ್ಲೇಶ್ವರ ಬಡಾವಣೆ, ಅಯ್ಯಪ್ಪಸ್ವಾಮಿ ಬಡಾವಣೆ, ಗೊರವಿನಕಲ್ಲು, ಕಪ್ಪಗೆರೆ ರಸ್ತೆ ಬಳಿಯ ನಿವಾಸಿಗಳು ಅಸ್ವಸ್ಥರಾಗಿದ್ದಾರೆ. ಕೆಲವರಿಗೆ ವಾಂತಿಯಾಗಿದೆ. ಇನ್ನು ಕೆಲವರಲ್ಲಿ ತಲೆ ಸುತ್ತು, ಕೆಮ್ಮು, ಉಸಿರಾಟದ ಸಮಸ್ಯೆ ಕಂಡುಬಂದಿದೆ. ಅಂಥವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಘಟಕದ ಬಳಿ ಜನರು ಜಮಾಯಿಸಿದ್ದರು. ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿ, ವೃತ್ತ ನಿರೀಕ್ಷಕ, ಅಗ್ನಿಶಾಮಕ ದಳದವರು ಪರಿಸ್ಥಿತಿ ನಿಭಾಯಿಸಲು ಹೆಣಗಾಡಬೇಕಾಯಿತು. ಸುತ್ತಲಿನ ಪ್ರದೇಶದ ಜನರಿಗೂ ಎಚ್ಚರಿಕೆ ನೀಡಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.

‘ನೀರು ಶುದ್ಧೀಕರಣ ಘಟಕದಿಂದ ಈ ಮೊದಲು ಹೊಸದುರ್ಗಕ್ಕೆ ನೀರು ಪೂರೈಸಲಾಗುತ್ತಿತ್ತು. ಕೆಲ್ಲೋಡು ಬಳಿ ಹೊಸದಾಗಿ ಪಂಪ್‌ಹೌಸ್ ನಿರ್ಮಿಸಿದ ನಂತರ 8 ವರ್ಷಗಳಿಂದ ಇದರ ಬಳಕೆ ನಿಂತಿದೆ. ಆಕಸ್ಮಿಕವಾಗಿ ಕ್ಲೋರಿನ್‌ ಸೋರಿಕೆಯಾಗಿದೆ. 1 ಕಿ.ಮೀ.ವರೆಗೂ ಗಾಳಿಯಲ್ಲಿ ಹರಡಿದ್ದು, ತಜ್ಞರ ತಂಡದೊಂದಿಗೆ ಸ್ಥಳಕ್ಕೆ ತೆರಳಿ ನೀರಿನಲ್ಲಿ ಕ್ಲೋರಿನ್ ವಿಲೀನಗೊಳಿಸಲಾಗಿದೆ. ಯಾವುದೇ ಪ್ರಾಣಪಾಯವಾಗಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT