ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಾಡಿಗರಹಟ್ಟಿ: ಕುಡಿಯುವ ನೀರಿನಲ್ಲಿ ವಿಬ್ರಿಯೊ ಬ್ಯಾಕ್ಟೀರಿಯಾ- ಕಾಲರಾ ದೃಢ

Published 8 ಆಗಸ್ಟ್ 2023, 11:15 IST
Last Updated 8 ಆಗಸ್ಟ್ 2023, 11:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರಿನಿಂದ ಸಂಭವಿಸಿದ ದುರಂತಕ್ಕೆ ಕಾಲರಾ ಕಾರಣ ಎಂಬುದು ದೃಢಪಟ್ಟಿದೆ. ಕಲುಷಿತ ನೀರಿನಲ್ಲಿ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾ ಇತ್ತು ಎಂಬುದನ್ನು ಬೆಂಗಳೂರಿನ ವೈದ್ಯಕೀಯ ಕಾಲೇಜು ಪ್ರಯೋಗಾಲಯ ಖಚಿತಪಡಿಸಿದೆ.

‘ಮೂವರು ಅಸ್ವಸ್ಥರ ಭೇದಿಯ ಮಾದರಿಯಗಳನ್ನು ಬೆಂಗಳೂರಿಗೆ ರವಾನೆ ಮಾಡಲಾಗಿತ್ತು. ಎರಡು ಮಾದರಿಯಲ್ಲಿ ವಿಬ್ರಿಯೊ ಬ್ಯಾಕ್ಟೀರಿಯಾ ಇರುವುದು ಖಚಿತವಾಗಿದೆ. ನೀರು ಕಲುಷಿತಗೊಂಡಿದ್ದರ ಪರಿಣಾಮವಾಗಿ ಬ್ಯಾಕ್ಟೀರಿಯಾ ನೀರಿನಲ್ಲಿ ಸೇರಿರುವ ಸಾಧ್ಯತೆ ಇದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ರಂಗನಾಥ್‌ ಮಾಹಿತಿ ನೀಡಿದ್ದಾರೆ.

ನಗರಸಭೆ ವತಿಯಿಂದ ಕವಾಡಿಗರಹಟ್ಟಿಗೆ ಪೂರೈಕೆ ಮಾಡಿದ್ದ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಘಟಕ ಆ.3ರಂದು ವರದಿ ನೀಡಿತ್ತು. ಕಾಲರಾ ಹರಡಬಹುದಾದ ಬ್ಯಾಕ್ಟೀರಿಯಾ ಕೂಡ ಪತ್ತೆಯಾಗಿತ್ತು. ಇದನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರಿನ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟಿದ್ದು, 214 ಜನರು ಅಸ್ವಸ್ಥಗೊಂಡಿದ್ದಾರೆ.

ಮಿದುಳು ರಕ್ತಸ್ರಾವದಿಂದ ಸಾವು:

ಕಲುಷಿತ ನೀರು ಕುಡಿದು ಮೃತಪಟ್ಟಿದ್ದಾರೆ ಎನ್ನಲಾದ ಚಿತ್ರದುರ್ಗ ತಾಲ್ಲೂಕಿನ ಚಿಕ್ಕಪುರ ಗ್ರಾಮದ ಕರಿಬಸಪ್ಪ (35) ಸಾವಿಗೆ ಮಿದುಳು ರಕ್ತಸ್ರಾವ ಕಾರಣ ಎಂದು ವೈದ್ಯಕೀಯ ವರದಿ ಖಚಿತಪಡಿಸಿದೆ. ಮಿದುಳು ಪಾರ್ಶ್ವವಾಯು ಕಾರಣಕ್ಕೆ ರಕ್ತಸ್ರಾವ ಉಂಟಾಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

‘ಕರಿಬಸಪ್ಪ ಅಸ್ವಸ್ಥಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾದಾಗ ಹತ್ತು ದಿನಗಳಿಂದ ಗ್ರಾಮದಲ್ಲಿಯೇ ವಾಸವಾಗಿದ್ದರು ಎಂಬುದಾಗಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬಸವೇಶ್ವರ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಕೂಡ ಕವಾಡಿಗರಹಟ್ಟಿಯ ಸಹೋದರಿಯ ಮನೆಗೆ ಭೇಟಿ ನೀಡಿದ್ದ ವಿವರ ಒದಗಿಸಿಲ್ಲ. ಮೃತಪಟ್ಟ ಬಳಿಕ ಕವಾಡಿಗರಹಟ್ಟಿಗೆ ಬಂದು ಹೋಗಿದ್ದರು ಎಂಬುದಾಗಿ ಸಂಬಂಧಿಕರು ಹೇಳುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

‘ವಾಂತಿ–ಭೇದಿ ಕಾಣಿಸಿಕೊಂಡ ತಕ್ಷಣ ನಿರ್ಜಲೀಕರಣ ಉಂಟಾಗುತ್ತದೆ. ರಕ್ತದೊತ್ತಡ ಕಡಿಮೆಯಾಗಿ ಸಮಸ್ಯೆ ಸೃಷ್ಟಿಯಾಗುತ್ತದೆ. ಕರಿಬಸಪ್ಪ ಅವರು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಬಂದಾಗಲೇ ಮಿದುಳಿನಲ್ಲಿ ರಕ್ತಸ್ರಾವವಾಗಿತ್ತು. ಇದು ಹೇಗೆ ಸಾಧ್ಯ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಕವಾಡಿಗರಹಟ್ಟಿಗೆ ಬಂದು ಹೋಗಿದ್ದರೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ರಂಗನಾಥ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT