ಶುಕ್ರವಾರ, ಮೇ 27, 2022
30 °C
ಜಿಲ್ಲಾಧಿಕಾರಿ ಜತೆ ನಡೆದ ವಿಡಿಯೊ ಸಂವಾದದಲ್ಲಿ ಮಳೆ ಹಾನಿ ಮಾಹಿತಿ ಪಡೆದ ಬಸವರಾಜ ಬೊಮ್ಮಾಯಿ

ಚಿತ್ರದುರ್ಗ: ತ್ವರಿತ ಪರಿಹಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಉಂಟಾದ ಜೀವಹಾನಿ, ಮನೆಗಳ ಹಾನಿ, ಜಾನುವಾರುಗಳ ಹಾನಿ ಹಾಗೂ ಬೆಳೆಗಳ ಹಾನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ಪಡೆದರು.

ಮಳೆ ಹಾನಿ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಲು ಶುಕ್ರವಾರ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೆ ವಿಡಿಯೊ ಸಂವಾದ ನಡೆಸಿದ ಅವರು ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯದ ನೀರಿನ ಸಂಗ್ರಹ, ಜಲಾಶಯದ ಸಾಮರ್ಥ್ಯ ಕುರಿತು ಮಾಹಿತಿ
ಪಡೆದರು.

ಅಂಕಿ–ಅಂಶ ನಿಖರವಾಗಿರಲಿ: ‘ಕೃಷಿ, ತೋಟಗಾರಿಕೆ, ಕಂದಾಯ ಸೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಳೆಯಿಂದ ಆಗಿರುವ ಬೆಳೆ ನಷ್ಟವನ್ನು ಕ್ಷೇತ್ರವಾರು ಸಮೀಕ್ಷೆ ನಡೆಸಬೇಕು. ನಿಖರವಾದ ಅಂಕಿ–ಅಂಶ ಸರ್ಕಾರದ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಬೇಕು. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರರು ಮಳೆಯಿಂದ ಹಾನಿಯಾದ ಮನೆಗಳ ಚಿತ್ರಗಳನ್ನು ಜಿಪಿಎಸ್ ಸಮೇತ ಅಪ್‍ಲೋಡ್ ಮಾಡಬೇಕು’ ಎಂದು ಬೊಮ್ಮಾಯಿ ಅವರು ತಾಕೀತು ಮಾಡಿದರು.

‘ರಸ್ತೆ, ಸೇತುವೆಗಳು ಮಳೆಯಿಂದ ಹಾನಿಯಾಗಿ ಸಂಪರ್ಕ ಕಡಿತಗೊಂಡಿದ್ದಲ್ಲಿ ತಕ್ಷಣವೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಂಪರ್ಕ ಕಾರ್ಯ ಕೈಗೊಳ್ಳಬೇಕು. ವಿವೇಚನೆ ಹಾಗೂ ಅಧಿಕಾರ ಬಳಸಿ ಮಳೆಯಿಂದ ಆಗಿರುವ ತೊಂದರೆಗಳಿಗೆ ರಕ್ಷಣೆ ಮತ್ತು ಪರಿಹಾರ ನೀಡಲು ತ್ವರಿತವಾಗಿ ಜಿಲ್ಲಾಧಿಕಾರಿ ಮುಂದಾಗಬೇಕು. ಮನೆಗಳು ಭಾಗಶಃ ಹಾನಿಯಾಗಿ, ನೀರು ನುಗ್ಗಿ, ವಾಸಿಸಲು ತೊಂದರೆ ಉಂಟಾಗಿದ್ದಲ್ಲಿ ಅಂತಹ ಕುಟುಂಬದವರಿಗೆ ಕೂಡಲೇ ₹ 10 ಸಾವಿರ ಪರಿಹಾರ ನೀಡಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ‘ನ.1ರಿಂದ ಈವರೆಗೆ ಜಿಲ್ಲೆಯಲ್ಲಿ ಆರು ಜೀವಹಾನಿ ಪ್ರಕರಣ ಸಂಭವಿಸಿವೆ. ನ. 14ರಂದು ಹಿರಿಯೂರು ತಾಲ್ಲೂಕಿನಲ್ಲಿ ಮೂರು, ನಾಯಕನಹಟ್ಟಿಯಲ್ಲಿ ಎರಡು ಹಾಗೂ ಹಿರಿಯೂರಿನಲ್ಲಿ ಒಂದು ಜೀವಹಾನಿ ಪ್ರಕರಣ ಸಂಭವಿಸಿವೆ. ಈಗಾಗಲೇ ಮೂರು ಜೀವಹಾನಿ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ಇನ್ನುಳಿದ ಮೂರು ಪ್ರಕರಣಗಳಿಗೆ ಪರಿಹಾರ ನೀಡಲಾಗುವುದು’ ಎಂದು ಸಿಎಂಗೆ ಮಾಹಿತಿ ನೀಡಿದರು.

‘ಶುಕ್ರವಾರಕ್ಕೆ ವಿ.ವಿ.ಸಾಗರ ಜಲಾಶಯದ ನೀರಿನ ಮಟ್ಟ 119.5 ಅಡಿಗೆ ತಲುಪಿದೆ. 21.1 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಗರಿಷ್ಠ 30 ಟಿಎಂಸಿ ಸಾಮರ್ಥ್ಯ ಹೊಂದಿದೆ. ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 166 ಕೆರೆಗಳು ಇದ್ದು, ಅದರಲ್ಲಿ 22 ಕೆರೆಗಳು ತುಂಬಿವೆ. ಇನ್ನೂ 36 ಕೆರೆಗಳು ಶೇ 50ರಷ್ಟು ಭರ್ತಿಯಾಗಿದೆ. ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ 47 ಕಿ.ಮೀನಷ್ಟು ರಸ್ತೆ ಹಾನಿಯಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಪಿ.ರಮೇಶ್‌ಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಇದ್ದರು.

66,376 ಹೆಕ್ಟೇರ್‌ ಬೆಳೆ ಹಾನಿ: ‘ಜಿಲ್ಲೆಯಲ್ಲಿ ಕೃಷಿ ಸಂಬಂಧ 33,800 ಹೆಕ್ಟೇರ್ ಶೇಂಗಾ, 10,413 ಹೆಕ್ಟೇರ್ ರಾಗಿ, 10,699 ಹೆಕ್ಟೇರ್ ಮೆಕ್ಕೆಜೋಳ ಸೇರಿ ಒಟ್ಟು 66,376 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳು ಹಾನಿಯಾಗಿವೆ. ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಇನ್ನು ಯಾವ್ಯಾವ ಭಾಗದಲ್ಲಿ ಎಷ್ಟು ನಷ್ಟವಾಗಿದೆ ಎಂಬುದರ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ಸಭೆಗೆ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.

‘37 ಜಾನುವಾರು ಮೃತಪಟ್ಟಿವೆ. 220 ಮನೆಗಳು ಭಾಗಶಃ ಹಾನಿಯಾಗಿವೆ. 22 ಹೋಬಳಿ ಕೇಂದ್ರದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ನಾಯಕನಹಟ್ಟಿಯಲ್ಲಿ ಈಗಾಗಲೇ ಕಾಳಜಿ ಕೇಂದ್ರ ಆರಂಭವಾಗಿದೆ. ಸಹಾಯಕ್ಕಾಗಿ ಸಹಾಯವಾಣಿ ಕೂಡ ಆರಂಭಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು