ಬುಧವಾರ, ಅಕ್ಟೋಬರ್ 20, 2021
29 °C
‘ನಬಾರ್ಡ್‌’ ನೆರವಿನೊಂದಿಗೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಸಾಲ

ಪಿಎಸಿಎಸ್‌ ಇನ್ನು ಬಹು ಸೇವಾ ಕೇಂದ್ರ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ರೈತರಿಗೆ ಸಾಲ ಸೌಲಭ್ಯ ನೀಡಲು ಮಾತ್ರ ಸೀಮಿತವಾಗಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು (ಪಿಎಸಿಎಸ್) ಬಹು ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಸಹಕಾರ ಇಲಾಖೆ ಮುಂದಾಗಿದೆ. ಜಿಲ್ಲೆಯ 24 ಸಂಘಗಳು ಮೊದಲ ಹಂತದಲ್ಲಿ ಹೊಸರೂಪ ಪಡೆಯಲು ಆಸಕ್ತಿ ತೋರಿವೆ.

ಪತ್ತಿನ ಸಹಕಾರ ಸಂಘಗಳು ರೈತರಿಗೆ ಅನುಕೂಲವಾಗುವ ಸೇವೆಗಳನ್ನು ಒದಗಿಸುವ ಕೇಂದ್ರಗಳಾಗಬೇಕು ಎಂಬುದು ಕೇಂದ್ರ ಸರ್ಕಾರದ ಆಶಯ. ಕೃಷಿ ಚಟುವಟಿಕೆಗೆ ಪೂರಕವಾಗಿ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಫೆಬ್ರುವರಿ ತಿಂಗಳಲ್ಲಿ ನೂತನ ಯೋಜನೆಯೊಂದನ್ನು ಘೋಷಣೆ ಮಾಡಿತ್ತು. ರಾಜ್ಯದ 5,500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ 980 ಸೊಸೈಟಿಗಳು ಬಹು ಸೇವಾ ಕೇಂದ್ರಗಳಾಗಲಿವೆ.

ಗೋದಾಮು ನಿರ್ಮಾಣ, ಕೋಲ್ಡ್‌ ಸ್ಟೋರೇಜ್‌, ಗ್ರೇಡಿಂಗ್‌, ಕೃಷಿ ಉತ್ಪನ್ನ ಸಾಗಣೆ ವ್ಯವಸ್ಥೆ, ಕೃಷಿ ಮಾಹಿತಿ ಕೇಂದ್ರ, ಸೇವಾ ಕೇಂದ್ರ, ಮಳಿಗೆ ಹೀಗೆ ಹಲವು ರೀತಿಯ ಸೌಲಭ್ಯಗಳನ್ನು ಸಂಘಗಳು ಹೊಂದಬೇಕಾಗುತ್ತದೆ. ಪ್ರತಿ ಸಂಘವೂ ಗರಿಷ್ಠ ₹ 1 ಕೋಟಿವರೆಗೆ ಸಾಲ ಪಡೆಯಲು ಅವಕಾಶವಿದೆ. ಯೋಜನೆಯ ರೂಪುರೇಷ ಪರಿಶೀಲಿಸಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಸಾಲ ಮಂಜೂರಾತಿ ಮಾಡಲಿದೆ.

ಈ ನೂತನ ಯೋಜನೆಗೆ ‘ನಬಾರ್ಡ್‌’ ಆರ್ಥಿಕ ನೆರವು ನೀಡುತ್ತಿದೆ. ಶೇ 3ರ ಬಡ್ಡಿ ದರದಲ್ಲಿ ಅಪೆಕ್ಸ್‌ ಬ್ಯಾಂಕಿಗೆ ಸಾಲ ನೀಡಿದೆ. ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಮೂಲಕ ಜಿಲ್ಲೆಯಲ್ಲಿ ಇದು ಅನುಷ್ಠಾನಕ್ಕೆ ಬರುತ್ತಿದೆ. ಮೊದಲ ಹಂತದಲ್ಲಿ ಜಿಲ್ಲೆಯ 24 ಸಂಘಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಐದು ಸಂಘಗಳಿಗೆ ಆರ್ಥಿಕ ಅನುಮೋದನೆ ದೊರೆತು ಗೋದಾಮು ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿವೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಮೂರು ವರ್ಷದಲ್ಲಿ ಬಹು ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ. ಮೊದಲ ವರ್ಷ 980 ಸೊಸೈಟಿಗಳಿಗೆ ಮೂಲಸೌಲಭ್ಯ ಒದಗಿಸಲಾಗುತ್ತಿದೆ. ಈ ಉದ್ದೇಶಕ್ಕೆ ರಾಜ್ಯದ 21 ಡಿಸಿಸಿ ಬ್ಯಾಂಕುಗಳಿಗೆ ₹ 300 ಕೋಟಿ ನೆರವನ್ನು ಅಪೆಕ್ಸ್‌ ಬ್ಯಾಂಕ್‌ ನೀಡಿದೆ. ಸೊಸೈಟಿಗಳ ಕೋರಿಕೆ ಆಧರಿಸಿ ಸಾಲ ಮಂಜೂರಾತಿ ನೀಡಲಾಗುತ್ತದೆ.

‘ಕೃಷಿ ಪತ್ತಿನ ಸಹಕಾರ ಸಂಘಗಳು ರೈತರೊಂದಿಗೆ ಹೆಚ್ಚು ಒಡನಾಟ ಬೆಳೆಸಿಕೊಳ್ಳಬೇಕು. ಮೆಕ್ಕೆಜೋಳ, ಶೇಂಗಾ, ಈರುಳ್ಳಿ ಸೇರಿ ಎಲ್ಲ ಬೆಳೆಗಳ ಮೌಲ್ಯವರ್ಧನೆಗೆ ಪೂರಕವಾಗಿ ಕೆಲಸ ಮಾಡಬೇಕು. ಗುಣಮಟ್ಟದ ಆಧಾರದ ಮೇರೆಗೆ ಬೆಳೆ ಪ್ರತ್ಯೇಕಿಸುವ ಸೌಲಭ್ಯ ರೈತರಿಗೆ ಸಿಗಬೇಕು. ರಸಗೊಬ್ಬರ ಸಂಗ್ರಹಕ್ಕೆ ವೈಜ್ಞಾನಿಕ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂಬುದು ಕೇಂದ್ರ ಸರ್ಕಾರದ ಆಶಯ’ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ಇಲ್ಯಾಸ್‌ ಉಲ್ಲಾ ಷರೀಫ್‌ ತಿಳಿಸಿದರು.

ಮೂಲಸೌಲಭ್ಯ ಕಲ್ಪಿಸಿಕೊಳ್ಳಲು ಮುಂದೆ ಬರುವ ಸೊಸೈಟಿ ಭೂಮಿ ಅಥವಾ ನಿವೇಶನ ಹೊಂದಿರುವುದು ಕಡ್ಡಾಯ. ಆಯ್ಕೆಯಾದ ಸೊಸೈಟಿ ಶೇ 20 ಮೊತ್ತವನ್ನು ಭರಿಸಬೇಕು. ಶೇ 80ರ ಮೊತ್ತವನ್ನು ಡಿಸಿಸಿ ಬ್ಯಾಂಕ್ ಸಾಲದ ರೂಪದಲ್ಲಿ ಮಂಜೂರು ಮಾಡಲಿದೆ. ಜಿಲ್ಲೆಯ 24 ಬ್ಯಾಂಕುಗಳಿಗೆ ₹ 7.10 ಕೋಟಿ ಮೊತ್ತದ ಯೋಜನೆ ಸಿದ್ಧವಾಗಿದೆ. ಇದರಲ್ಲಿ ಡಿಸಿಸಿ ಬ್ಯಾಂಕ್‌ ₹ 5.76 ಕೋಟಿಯನ್ನು ಸಾಲದ ರೂಪದಲ್ಲಿ ನೀಡಲಿದೆ.

***

ಬಹುತೇಕ ಸೊಸೈಟಿಗಳು ಗೋದಾಮು ನಿರ್ಮಿಸಿಕೊಳ್ಳಲು ಆಸಕ್ತಿ ತೋರಿವೆ. ಸಕಾಲದಲ್ಲಿ ಸಾಲ ಮರುಪಾವತಿಸುವ ಸೊಸೈಟಿಗೆ ಬಡ್ಡಿ ದರ ಕಡಿತಗೊಳಿಸುವ ಸಾಧ್ಯತೆ ಇದೆ.

ಎಂ.ಇಲ್ಯಾಸ್‌ ಉಲ್ಲಾ ಷರೀಫ್‌, ಎಂಡಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.