ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿಗೆ ಹರಡುತ್ತಿರುವ ಬೆಂಕಿ ರೋಗ: ಆತಂಕ

ಮರದಿಂದ ಮರಕ್ಕೆ ರೋಗ ಹಬ್ಬಿ ಇಡೀ ತೋಟವೇ ನಾಶವಾಗುವಂತಹ ದುಃಸ್ಥಿತಿ
Last Updated 24 ಜೂನ್ 2022, 3:03 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ರೈತರ ಪ್ರಮುಖ ಆದಾಯದ ಮೂಲ ತೆಂಗು. ತೆಂಗಿನಕಾಯಿ ದರ ಇಳಿಕೆಯಿಂದ ಕಂಗಾಲಾಗಿರುವ ರೈತರು ಬರುವ ಶ್ರಾವಣ ಮಾಸದಲ್ಲಿ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ತಾಲ್ಲೂಕಿನ ವಿವಿಧೆಡೆ ತೆಂಗಿನ ಮರಗಳಿಗೆ ಕಪ್ಪು ತಲೆ ಹುಳುಬಾಧೆ (ಬೆಂಕಿ ರೋಗ) ಆವರಿಸುತ್ತಿರುವುದು ರೈತರ ನಿದ್ದೆಗೆಡಿಸಿದೆ.

2 ವರ್ಷಗಳಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ತೆಂಗು ಉತ್ತಮವಾಗಿ ಬಂದಿದೆ. ಕಸಬಾ, ಶ್ರೀರಾಂಪುರ, ಮತ್ತೋಡು ಹಾಗೂ ಮಾಡದಕೆರೆ ಹೋಬಳಿಗಳಲ್ಲಿ ಹೆಚ್ಚಾಗಿ ತೆಂಗು ಬೆಳೆಯುವ ರೈತರು ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದರು. ಬೆಂಕಿ ರೋಗ ಮರದಿಂದ ಮರಕ್ಕೆ ಹಬ್ಬಿ, ಇಡೀ ತೋಟವೇ ನಾಶವಾಗುವಂತಹ ದುಃಸ್ಥಿತಿ ಬಂದೊದಗಿದೆ.

‘ಬೆಂಕಿ ರೋಗ ತಾಲ್ಲೂಕಿನಲ್ಲಿ ಆರಂಭಿಕ ಹಂತದಲ್ಲಿದೆ. ಬೆಂಕಿ ರೋಗದಿಂದಾಗಿ ಗರಿ ಒಣಗಿ ಗುಳ್ಳು (ಆಗ ತಾನೆ ತೆಂಗು ಚಿಕ್ಕದಾಗಿ ಬಿಡಲು ಆರಂಭಿಸುವುದು) ಉದುರುತ್ತವೆ. ಈ ರೋಗ ಬಂದು 3-6 ತಿಂಗಳೊಳಗೆ ಸುಳಿ ಬಿದ್ದು, ಇಡೀ ಮರದ ಬೆಳವಣಿಗೆ ಕುಂಠಿತವಾಗುತ್ತದೆ. ಈಗಾಗಲೇ ತೆಂಗಿಗೆ ನುಸಿರೋಗ, ಬೂದಿ ರೋಗ, ಎಲೆ ಹೀರುವ ರೋಗ, ಸುಳಿರೋಗದಂತಹ ಹಲವು ರೋಗಗಳು ಕಾಡುತ್ತಿವೆ. ಹೆಚ್ಚು ಮಳೆಯಾದರೆ ಬೆಳೆಗಳಿಗೆ ತಗುಲುವ ರೋಗದ ಪ್ರಮಾಣ ಇಳಿಕೆಯಾಗುತ್ತದೆ’ ಎನ್ನುತ್ತಾರೆ ರೈತ ರಘು ನೀರಗುಂದ.

‘ಬೆಂಕಿ ರೋಗಕ್ಕೆ ಕಾರಣ ಕಪ್ಪುತಲೆ ಹುಳು. ಇದು ತೆಂಗಿನ ಗರಿಗಳ ಹಿಂಭಾಗದಲ್ಲಿ ಕುಳಿತು ಎಲೆಯ ಹಿಂಭಾಗವನ್ನು ತಿನ್ನುತ್ತದೆ. ನಂತರ ಹಸಿರಾಗಿದ್ದ ಎಲೆಗಳು ಬಣ್ಣ ಕಳೆದುಕೊಂಡು ಸುಟ್ಟುಹೋದಂತೆ ಕಾಣುತ್ತವೆ. ಈ ರೋಗವು ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಒಂದು ಹದವಾದ ಗುಡುಗು ಸಿಡಿಲಿನ ಮಳೆಯಾದಲ್ಲಿ ಎಲೆಯ ಮೇಲಿರುವ ಕಪ್ಪು ತಲೆ ಹುಳುಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗುವುದರಿಂದ ರೋಗದ ಪ್ರಮಾಣ ಕಡಿಮೆಯಾಗುತ್ತದೆ. ರೈತರು ಇಲಾಖೆಯ ತಜ್ಞರ ಸಲಹೆ ಪಡೆದು, ಮಾರ್ಗಸೂಚಿ ಪಾಲಿಸಿದಲ್ಲಿ ರೋಗ ನಿಯಂತ್ರಿಸಬಹುದು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಸಿ. ಮಂಜುನಾಥ್.

‘ಕಪ್ಪು ತಲೆ ಹುಳು ತೆಂಗಿನ ಮರದ ಎಲೆಯ ಕೆಳಭಾಗದಿಂದ ಹಸಿರು ಭಾಗ ತಿನ್ನುತ್ತದೆ. ಇದನ್ನು ತಡೆಗಟ್ಟಲು ಆರಂಭಿಕ ಹಂತದಲ್ಲೇ ಒಂದೆರಡು ತೆಂಗಿನ ಗರಿಗಳನ್ನು ಕತ್ತರಿಸಿ ಸುಟ್ಟು ಹಾಕಬೇಕು. 10 ಮಿಲಿ ಲೀಟರ್‌ ಮಾನೋಕ್ರೋಟಪಸ್ ಕೀಟನಾಶಕವನ್ನು 10 ಮಿಲಿ ಲೀಟರ್‌ ನೀರಿಗೆ ಬೆರೆಸಿ, ಬೇರಿಗೆ ಕಟ್ಟಬೇಕು. ತೆಂಗಿನ ಮರದ ಸುತ್ತ 6–7 ಅಡಿ ಮಣ್ಣು ಅಗೆದು ಪೆನ್ಸಿಲ್‌ ಗಾತ್ರದ ಬೇರು ಬಿಡಿಸಬೇಕು. ಆ ಬೇರಿನ ತುದಿಭಾಗದಲ್ಲಿ ಓರೆಯಾಗಿ ಕಟ್ಟಬೇಕು. ಅದರ ಮೇಲೆ ಗರಿ ಅಥವಾ ಕಸ ಹಾಕಿ ಮುಚ್ಚಬೇಕು. ಒಂದೆರಡು ದಿನ ಬಿಟ್ಟು ನೋಡಿದಾಗ ಔಷಧಿಯನ್ನು ಬೇರು ಎಳೆದುಕೊಂಡಿದ್ದರೇ ಸಮರ್ಪಕವಾಗಿ ಕಟ್ಟಿದ್ದೇವೆ ಎಂಬರ್ಥ. ಮಾನೋಕ್ರೋಟಪಸ್ ಇದೊಂದು ಅತ್ಯಂತ ವಿಷಕಾರಿ ಕೀಟನಾಶಕ. ಹೀಗಾಗಿ ಇದನ್ನು ಬೇರಿಗೆ ಕಟ್ಟಿದ ನಂತರ 2 ತಿಂಗಳ ಕಾಲ ತೆಂಗಿನ ಕಾಯಿ ಅಥವಾ ಎಳನೀರು ಬಳಸಬಾರದು. ಕಪ್ಪು ತಲೆ ಹುಳುಗಳ ಹರಡುವಿಕೆಯ ಆರಂಭಿಕ ಹಂತದಲ್ಲೇ ಔಷಧ ಕಟ್ಟಬೇಕು. ಮರವನ್ನೆಲ್ಲ ಆವರಿಸಿದಾಗ ಔಷಧ ಕಟ್ಟಿದಾಗ ಯಾವುದೇ ಉಪಯೋಗ ಆಗುವುದಿಲ್ಲ.

ಜೈವಿಕ ಹತೋಟಿ ಕ್ರಮ: ‘ಪರೋಪ ಜೀವಿಗಳನ್ನು ಒಂದು ಮರಕ್ಕೆ 10-15ರಷ್ಟು ಬಿಡುಗಡೆ ಮಾಡಬೇಕು. ಇವು ತೆಂಗಿನ ಮರದ ಎಲೆ ಮೇಲಿರುವ ಕಪ್ಪು ತಲೆ ಹುಳುವಿನ ಮೊಟ್ಟೆಗಳನ್ನು ತಿಂದು ಅವುಗಳ ಸಂತತಿ ಬೆಳೆಯದಂತೆ ನೋಡಿಕೊಳ್ಳುತ್ತವೆ’ ಎನ್ನುತ್ತಾರೆ ಹಿರಿಯೂರು ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಎಸ್‌. ಓಂಕಾರಪ್ಪ.

ಮುನ್ನೆಚ್ಚರಿಕೆ ತೆಗೆದುಕೊಳ್ಳಿ

ರೋಗ ಬರುವ ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಂಡರೆ ಬೆಂಕಿ ರೋಗ ಹರಡುವುದನ್ನು ನಿಯಂತ್ರಿಸಬಹುದು. ರಾಸಾಯನಿಕಗಳು, ಸಾವಯವ ಅಥವಾ ಮನೆಯಲ್ಲೇ ಗಂಜಲು ಮತ್ತು ಕೊಟ್ಟಿಗೆ ಗೊಬ್ಬರದಿಂದ ತಯಾರಿಸಿದ ಔಷಧವನ್ನು ಸಿಂಪಡಣೆ ಮಾಡುವುದರಿಂದ ರೋಗ ನಿಯಂತ್ರಿಸಬಹುದು. ಈ ಕುರಿತು ತಜ್ಞರ ಸಲಹೆ ಪಡೆದುಕೊಳ್ಳುವುದು ಉತ್ತಮ.

– ರಘು ನೀರಗುಂದ, ರೈತ

ಗರಿಗಳನ್ನು ಸಾಗಿಸಬೇಡಿ

ಕಪ್ಪು ತಲೆ ಹುಳು ರೋಗಕ್ಕೆ ತುತ್ತಾಗಿರುವ ತೋಟದಲ್ಲಿಯ ಗರಿ ಅಥವಾ ಸಸಿಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಿಸಬಾರದು. ಅದರಿಂದ ರೋಗ ಇನ್ನಷ್ಟು ಕಡೆ ಹಡುವ ಸಾಧ್ಯತೆ ಇರುತ್ತದೆ. ರಾಸಾಯನಿಕ ಅಥವಾ ಜೈವಿಕ ವಿಧಾನ ಅನುಸರಿಸಿದರೆ ಈ ಕೀಟಗಳನ್ನು ಹತೋಟಿ ಮಾಡಬಹುದು.

–ಡಾ.ಎಸ್‌. ಓಂಕಾರಪ್ಪ, ಸಸ್ಯ ಸಂರಕ್ಷಣಾ ವಿಜ್ಞಾನಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT