ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗು, ಕೊಬ್ಬರಿ ಬೆಲೆ ಕುಸಿತ: ಕಂಗಾಲಾದ ರೈತ

ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಸರ್ಕಾರಕ್ಕೆ ಹೊಸದುರ್ಗ ತಾಲ್ಲೂಕಿನ ರೈತರ ಮನವಿ
Last Updated 8 ನವೆಂಬರ್ 2022, 5:29 IST
ಅಕ್ಷರ ಗಾತ್ರ

ಹೊಸದುರ್ಗ: ದೀಪಾವಳಿ ನಂತರ ತೆಂಗಿನಕಾಯಿ ಮತ್ತು ಕೊಬ್ಬರಿಯ ಬೆಲೆ ದಿಢೀರ್‌ ಕುಸಿತ ಕಂಡಿದ್ದರಿಂದ ರೈತರು ಕಂಗಾಲಾಗಿದ್ದಾರೆ.

ಸಾಲು ಸಾಲು ಹಬ್ಬಗಳ ಸಂದರ್ಭ ತೆಂಗಿನ ಕಾಯಿ ಮತ್ತು ಕೊಬ್ಬರಿ ಬೆಲೆ ಹೆಚ್ಚಿದ್ದರಿಂದ ರೈತರಲ್ಲಿ ಸಹಜವಾಗಿಯೇ ಸಂತಸ ಮೂಡಿತ್ತು. ದೀಪಾವಳಿಗೆ ಮುನ್ನ ಕ್ವಿಂಟಲ್‌ಗೆ ₹ 18,000ದಿಂದ ₹ 20,000 ಇದ್ದ ಕೊಬ್ಬರಿ ಬೆಲೆ ಕಳೆದ ಒಂದು ವಾರದಿಂದ ಕುಸಿತದತ್ತ ಸಾಗಿದ್ದು, ಇದೀಗ ₹ 11,000ದಿಂದ ₹ 12,000ಕ್ಕೆ ಇಳಿದಿದೆ.

ಹಬ್ಬದ ವೇಳೆ ₹ 15 ಇದ್ದ ತೆಂಗಿನ ಒಂದು ಕಾಯಿಯ ಬೆಲೆ ಈಗ ₹ 9 ಆಗಿದ್ದು, ರೈತರು ಸರ್ಕಾರದಿಂದ ಬೆಂಬಲ ಬೆಲೆಗೆ ಆಗ್ರಹಿಸಿದ್ದಾರೆ.

ತಾಲ್ಲೂಕಿನಲ್ಲಿ 28,714 ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆ ಇದ್ದು, ಕೊಬ್ಬರಿ ಮತ್ತು ಕಾಯಿ ಮಾರಾಟಕ್ಕೆ ಶ್ರೀರಾಂಪುರ ಮತ್ತು ಹೊಸದುರ್ಗದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಭಾಗದ ಕೊಬ್ಬರಿ ಬಹು ರುಚಿಯಾಗಿರುತ್ತದೆ ಎಂಬ ಕಾರಣದಿಂದ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿ ಇತರ ರಾಜ್ಯದವರು ಖರೀದಿಗೆ ಬರುತ್ತಿದ್ದರು. ತಿಪಟೂರು, ಅರಸೀಕೆರೆ ಬಿಟ್ಟರೆ ಶ್ರೀರಾಂಪುರದಲ್ಲೇ ಹೆಚ್ಚು ಕೊಬ್ಬರಿ ಮಾರಾಟವಾಗುತ್ತಿತ್ತು. ಆದರೀಗ ಬೆಲೆ ಕುಸಿತದಿಂದಾಗಿ ತೆಂಗಿನ ಕಾಯಿ ಮತ್ತು ಕೊಬ್ಬರಿ ಮಾರುಕಟ್ಟೆಗೆ ಬರುವುದೂ ಕಡಿಮೆಯಾಗಿದೆ.

‘ಈ ಬಾರಿ ಅಧಿಕ ಮಳೆಯಿಂದಾಗಿ ತೋಟದಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ತೆಂಗಿನ ಕಾಯಿಯಲ್ಲಾದರೂ ಉತ್ತಮ ಲಾಭ ಪಡೆಯುವ ನಿರೀಕ್ಷೆಯಿತ್ತು. ಕಾಯಿ ಕೆಡವಲು ದಿನಕ್ಕೆ ₹ 800, ಅದನ್ನು ಸಾಗಿಸಲು ₹ 1,000 ಖರ್ಚಾಗುತ್ತದೆ. ಕಾಯಿ ಮಾರಾಟ ಮಾಡುವಾಗ ದಲ್ಲಾಳಿಗಳಿಗೆ 1,000 ಹಾಗೂ 110 ಕಾಯಿಗಳನ್ನು ಉಚಿತವಾಗಿ ಕೊಡಬೇಕು. 2 ಸಣ್ಣ ಕಾಯಿಗಳನ್ನು ಒಂದೇ ಎಂದೂ ಲೆಕ್ಕ ಹಾಕಲಾಗುತ್ತದೆ. ಬೆಲೆ ಕುಸಿತದಿಂದ ತೆಂಗು ಬೆಳೆಗಾರರ ಸಂಕಷ್ಟ ಹೇಳತೀರದಾಗಿದೆ’ ಎಂದು ರೈತ ಮುಖಂಡ ಮಳಲಿ ಹರೀಶ್ ಆರ್. ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಸರ್ಕಾರ ಪ್ರತಿ ಕ್ವಿಂಟಲ್ ಕೊಬ್ಬರಿಗೆ ₹ 20,000 ಮತ್ತು ತೆಂಗಿನಕಾಯಿಗೆ ₹ 15,000ದಿಂದ ₹ 20,000 ಬೆಂಬಲ ಬೆಲೆ ನಿಗದಿ ಮಾಡಬೇಕು. ತಪ್ಪಿದಲ್ಲಿ ತಾಲ್ಲೂಕಿನ ತೆಂಗು ಬೆಳೆಗಾರರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ರೋಗ ಬಾಧೆ: ರೈತರು ಒಂದೆಡೆ ಬೆಲೆ ಕುಸಿತದಿಂದ ಕಂಗೆಟ್ಟಿದ್ದರೆ, ಮತ್ತೊಂದೆಡೆ ತೆಂಗಿಗೆ ಹರಡುವ ರೋಗಗಳಿಂದಲೂ ಬೇಸತ್ತಿದ್ದಾರೆ. ನುಸಿರೋಗ, ಕಾಂಡ ಸೋರುವ ಬಾಧೆ, ರಸ ಹೀರುವ ಬಾಧೆ, ಕೀಟ ಬಾಧೆ, ಹರಳು ಉದುರುವುದು, ಬೆಂಕಿರೋಗ ಇತ್ಯಾದಿ ಸಮಸ್ಯೆಯಿಂದ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ದೊರೆಯುತ್ತಿಲ್ಲ.ಮುಂದೆ ಜೀವನ ಹೇಗೆ ಎಂಬ ಆತಂಕ ಎದುರಾಗಿದೆ ಎಂದು ಅವರು ಹೇಳಿದರು.

ರೈತರು ಆತಂಕ ಪಡಬೇಕಿಲ್ಲ. ಕೊಬ್ಬರಿ ಮತ್ತು ತೆಂಗಿನಕಾಯಿ ನೆಲಕ್ಕೆ ತಾಗದಂತೆ ಸಂಗ್ರಹಿಸಿಟ್ಟು ಬೇಡಿಕೆ ಇದ್ದಾಗ ಮಾರಾಟ ಮಾಡಬಹುದು. ಇನ್ನೊಂದು ತಿಂಗಳಲ್ಲಿ ಬೆಲೆಯಲ್ಲಿ ಚೇತರಿಕೆ ಕಾಣಬಹುದು.

ಟಿ. ಗೌತಮ್, ಎಪಿಎಂಸಿ ಮಾರುಕಟ್ಟೆ ಅಧಿಕಾರಿ

ಈ ಬಾರಿ ಅತಿವೃಷ್ಟಿಯಿಂದಾಗಿ ನಿರೀಕ್ಷಿತ ಇಳುವರಿ ದೊರೆತಿಲ್ಲ. ಸರ್ಕಾರ ಕೊಬ್ಬರಿಗೆ ₹ 20,000 ಬೆಂಬಲ ಬೆಲೆ ನಿಗದಿ ಮಾಡಬೇಕು. ತಪ್ಪಿದಲ್ಲಿ ವಿಧಾನಸೌಧ ಮುತ್ತಿಗೆ ಅನಿವಾರ್ಯ.

ಕೆ.ಸಿ. ಮಹೇಶ್ವರ, ರೈತ ಸಂಘದ ತಾಲ್ಲೂಕು ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT