ಭಾನುವಾರ, ಜನವರಿ 17, 2021
20 °C
ಹಿರಿಯೂರು: ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಗೆ ಒತ್ತು ನೀಡುತ್ತಿರುವ ತೋಟಗಾರಿಕೆ ಮಹಾವಿದ್ಯಾಲಯ

ರೈತರಿಗೆ ವರದಾನ ಈ ಮಹಾವಿದ್ಯಾಲಯ

ಸುವರ್ಣಾ ಬಸವರಾಜ್ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ತಾಲ್ಲೂಕಿನ ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರಕ್ಕೆ ಹೋಗುವ ಮಾರ್ಗದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಗೆ ಒತ್ತು ನೀಡುವ ಮೂಲಕ ಬಯಲು ಸೀಮೆಯ ರೈತರಿಗೆ ವರದಾನವಾಗಿದೆ.

ಹಿರಿಯೂರು ತಾಲ್ಲೂಕಿನ ರೈತರು 80ರ ದಶಕದಲ್ಲಿಯೇ ಅಂಜೂರ, ದಾಳಿಂಬೆ, ಮೋಸಂಬಿ, ಪಪ್ಪಾಯ, ಬಾಳೆ, ಸೀಬೆ, ಸಪೋಟ, ವೆನ್ನಿಲಾ, ಆಲೋವೆರಾ ಬೆಳೆಯುವ ಮೂಲಕ ತೋಟಗಾರಿಕೆ ಬೆಳೆಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದರು.

ತಾಲ್ಲೂಕಿಗೆ ತೋಟಗಾರಿಕೆ ಕಾಲೇಜಿನ ಅಗತ್ಯ ಇರುವುದನ್ನು ಅರಿತ ಸರ್ಕಾರ 2010ರಲ್ಲಿ ಕಾಲೇಜು ಮಂಜೂರು ಮಾಡಿತು. ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆಯುತ್ತಿದ್ದ ಕಾಲೇಜು 2013ರಲ್ಲಿ ಪ್ರಸ್ತುತ ಇರುವ 120 ಎಕರೆ ವಿಸ್ತೀರ್ಣದ ಪ್ರದೇಶಕ್ಕೆ ಸ್ಥಳಾಂತರಗೊಂಡ ನಂತರ ಕಾಲೇಜಿನ ಚಿತ್ರಣವೇ ಬದಲಾಗಿದೆ.

2010ರಲ್ಲಿ 30 ವಿದ್ಯಾರ್ಥಿಗಳಿಗೆ ಇದ್ದ ಪ್ರವೇಶ ಮಿತಿ ಪ್ರಸ್ತುತ 100ಕ್ಕೆ ವಿಸ್ತರಣೆಗೊಂಡಿದೆ. ಪ್ರಸ್ತುತ ನಾಲ್ಕು ವರ್ಷಗಳಿಂದ ಒಟ್ಟು 328 ವಿದ್ಯಾರ್ಥಿಗಳು ತೋಟಗಾರಿಕೆ ವ್ಯಾಸಂಗದಲ್ಲಿ ತೊಡಗಿದ್ದಾರೆ. ವಿದ್ಯಾಲಯ ಕೇವಲ ಬೋಧನೆಗೆ ಸೀಮಿತವಾಗದೆ, ಸುಧಾರಿತ ಬೇಸಾಯ ಕ್ರಮಗಳನ್ನು ರೈತರಿಗೆ ತಲುಪಿಸುವ, ಬೆಳೆ ಸುಧಾರಣೆ, ಸಸ್ಯ ಉತ್ಪಾದನೆ, ಸಸ್ಯ ಸಂರಕ್ಷಣೆ, ಕೊಯ್ಲೋತ್ತರ ತಾಂತ್ರಿಕತೆ, ಮಾರುಕಟ್ಟೆ ವ್ಯವಸ್ಥೆ, ಜಾಗತಿಕ ಬೆಳವಣಿಗೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ತರಬೇತಿ, ಕುಶಲ ಭರಿತ ತೋಟಗಾರಿಕೆಗೆ ಒತ್ತು ನೀಡುತ್ತಿದೆ.

ವಿದ್ಯಾಲಯದಲ್ಲಿ ಫ್ರೂಟ್ ವಿಜ್ಞಾನ, ತರಕಾರಿ ವಿಜ್ಞಾನ, ಫ್ಲೋರಿಕಲ್ಚರ್ ಅಂಡ್ ಲ್ಯಾಂಡ್ ಸ್ಕೇಪ್ ಆರ್ಕಿಟೆಕ್ಚರ್, ಪ್ಲಾಂಟೇಷನ್–ಸ್ಪೈಸಿಸ್– ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಕ್ರಾಪ್ಸ್ ಒಳಗೊಂಡಂತೆ ಹಲವು ವಿಭಾಗಗಳಿವೆ.

ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಸಹಯೋಗದಲ್ಲಿ ತೆಂಗು, ಅಡಕೆ, ಹುಣಸೆ, ಡ್ರ್ಯಾಗನ್ ಫ್ರೂಟ್, ಐದಾರು ತಳಿಯ ಮಾವು, ಸೀಬೆ, ನಿಂಬೆ, ಅಂಗಾಂಶ ಬಾಳೆ, ಹತ್ತಾರು ಬಗೆಯ ಹೂವು ಒಳಗೊಂಡ ನರ್ಸರಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಪ್ರಸ್ತುತ ವಿದ್ಯಾಲಯದ ಮುಖ್ಯಸ್ಥರಾಗಿರುವ ಡಾ.ಸುರೇಶ್ ಏಕಬೋಟೆ ಅವರು 72 ಸಾವಿರ ದಾಳಿಂಬೆ ಸಸಿಗಳನ್ನು ನಾಟಿ ಮಾಡಿ ಕೋಲಾರ ಜಿಲ್ಲೆವರೆಗಿನ ರೈತರಿಗೆ ಹಂಚಿಕೆ ಮಾಡಿದ್ದಾರೆ.

ನ. 4ರಂದು ವರ್ಗಾವಣೆಗೊಂಡಿರುವ ವಿದ್ಯಾಲಯದ ಮುಖ್ಯಸ್ಥ ಡಾ.ಎಚ್.ನಾರಾಯಣಸ್ವಾಮಿ ಅವರು ತೆಂಗು, ಅಡಿಕೆ, ಪಿಕೆಎಂ ತಳಿಯ ನುಗ್ಗೆ, ಹಲಸು, ಕರಿಬೇವು, ಹುಣಿಸೆ ಹಾಗೂ ಅಲಂಕಾರಿಕ ಸಸಿಗಳನ್ನು ಅಭಿವೃದ್ಧಿ ಪಡಿಸಿದ್ದರು. ಪ್ರಸ್ತುತ ವಿದ್ಯಾಲಯದಲ್ಲಿ 2,000 ತೆಂಗು (ಪ್ರತಿ ಸಸಿಗೆ ₹ 70), 6,000 ಅಡಿಕೆ (ಪ್ರತಿ ಸಸಿಗೆ ₹ 25), ಪಿಕೆಎಂ ತಳಿಯ ನುಗ್ಗೆ (ಬೀಜದಿಂದ ತಯಾರಿಸಿದ್ದು, ಪ್ರತಿ ಸಸಿಗೆ ₹ 15), 50 ಹಲಸು (ಪ್ರತಿ ಸಸಿಗೆ ₹ 50), ಕರಿಬೇವು (ಪ್ರತಿ ಸಸಿಗೆ ₹ 15), 2,000 ಹುಣಿಸೆ (ಪ್ರತಿ ಸಸಿಗೆ ₹ 50), 3,000 ಅಲಂಕಾರಿಕ ಗಿಡಗಳ (ಪ್ರತಿ ಸಸಿಗೆ ₹ 50) ದಾಸ್ತಾನು ಇದೆ.

ರಾಜ್ಯದ ಬೇರೆ ಬೇರೆ ಭಾಗಗಳ ರೈತರು ವಿದ್ಯಾಲಯಕ್ಕೆ ಬಂದು ಸಸಿಗಳನ್ನು ಖರೀದಿಸಿ ಅಗತ್ಯ ಮಾಹಿತಿ ಪಡೆದು ಹೋಗುತ್ತಿದ್ದಾರೆ. ರಫ್ತುಯೋಗ್ಯ ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆ, ಸ್ಥಳೀಯ ಬೇಡಿಕೆ ಮತ್ತು ಮಾರುಕಟ್ಟೆಗಳಿಗೆ ಸೂಕ್ತವಿರುವ ಗುಣಮಟ್ಟದ ತಾಜಾ ಹಾಗೂ ಸಂಸ್ಕರಿತ ಉತ್ಪನ್ನಗಳ ಉತ್ಪಾದನೆ, ಯಾಂತ್ರಿಕತೆಗೆ ಒತ್ತುಕೊಟ್ಟು ರೈತರಿಗೆ ಹೆಚ್ಚು ವರಮಾನ ಕೊಡುವ ಯೋಜನೆ ರೂಪಿಸುವುದು. ರೈತರ ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ಬೀಜ ಮತ್ತು
ಸಸಿಗಳ ಪೂರೈಕೆಗೆ ಬೇಕಿರುವ ಸಂಶೋಧನೆ ಕೈಗೊಳ್ಳುವ ಯೋಜನೆ ವಿದ್ಯಾಲಯದ್ದು.

ವಿವರಗಳಿಗೆ ಡಾ.ಸುರೇಶ್ ಏಕಬೋಟೆ, (ಮಹಾವಿದ್ಯಾಲಯದ ಮುಖ್ಯಸ್ಥರು –9972554919) ಅವರನ್ನು ಸಂಪರ್ಕಿಸಬಹುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು