ಗುರುವಾರ , ಆಗಸ್ಟ್ 5, 2021
23 °C
ಅನುಭವ ಹಂಚಿಕೊಂಡ ಕೋವಿಡ್ ಆಸ್ಪತ್ರೆಯ ಶುಶ್ರೂಷಕಿ ಸೌಮ್ಯಾ

ಚಿತ್ರದುರ್ಗ: ಕೋವಿಡ್ ವಿರುದ್ಧ ಹಗಲಿರುಳು ಶ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಾದ ಎಲ್ಲ ಸೋಂಕಿತರನ್ನು ಗುಣಪಡಿಸುವಲ್ಲಿ ವೈದ್ಯರ ಜತೆ ಶುಶ್ರೂಷಕಿಯರೂ ಶ್ರಮಿಸಿದ್ದೇವೆ. ಕೋಟೆನಾಡು ಕೊರೊನಾ ಮುಕ್ತವಾಗಿದೆ...’

‘ಕೋವಿಡ್-19’ ನಿಯಂತ್ರಣಕ್ಕೆ ಕಾರ್ಯನಿರ್ವಹಿಸುತ್ತಿರುವ ಕೋಟೆನಾಡಿನ ‘ಕೊರೊನಾ ವಾರಿಯರ್’ ಜಿಲ್ಲಾ ಆಸ್ಪತ್ರೆಯ ಸ್ಟಾಫ್‌ ನರ್ಸ್ ಜಿ.ಎ. ಸೌಮ್ಯಾ ಅವರ ಮಾತಿದು. ನರ್ಸ್‌ಗಳ ಕಾರ್ಯವೈಖರಿ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಸೋಂಕಿತರನ್ನು ಗುಣಪಡಿಸುವ ಮೊದಲ ತಂಡದಲ್ಲಿ ನಾನೂ ಇದ್ದೆ. ಪಿಪಿಇ ಕಿಟ್ ಧರಿಸಿದ್ದರೂ ಮೊದಲೆರಡು ದಿನ ಭೀತಿಗೆ ಒಳಗಾಗಿದ್ದೆ. ಜಿಲ್ಲಾ ಆಸ್ಪತ್ರೆಯ ವೈದ್ಯರು ಧೈರ್ಯ ತುಂಬಿದರು. ಆನಂತರ ನಿರ್ಭೀತಿಯಿಂದ ಕಾರ್ಯನಿರ್ವಹಿಸಿದೆ. ಎಲ್ಲರೂ ಸೋಂಕಿನಿಂದ ಮುಕ್ತರಾಗಿದ್ದು, ನಮ್ಮ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಎಲ್ಲಿಲ್ಲದ ಸಂತಸ ಉಂಟಾಗಿದೆ’ ಎಂದರು.

‘ಸ್ಟಾಫ್‌ ನರ್ಸ್‌ಗಳಾದ ಎಂ. ರಮ್ಯಾ, ಸುಶ್ಮಿತಾ, ಭಾರತಿ, ಸುಪ್ರಿತಾ, ಶ್ರೀದೇವಿ, ಮೊನಿಷಾ, ಕನ್ಯಕುಮಾರಿ, ಶ್ಯಾಮಲಾ, ಓಬಳಮ್ಮ, ಲಕ್ಷ್ಮಿದೇವಿ ಹೀಗೆ ಪಾಳಿ ಪದ್ಧತಿಯಲ್ಲಿ ಕೆಲಸ ನಿರ್ವಹಿಸಿದೆವು. ನನ್ನಂತೆ ಎಲ್ಲರೂ ಆತಂಕ ಬಿಟ್ಟು ಯುದ್ಧದ ರೀತಿಯಲ್ಲಿ ಹೋರಾಡಿದ್ದೇವೆ’ ಎಂದು ಹೇಳಿದರು.

‘ಪ್ರತಿ 6 ಗಂಟೆಗೊಮ್ಮೆ ಪಾಳಿ ಪದ್ಧತಿಯಲ್ಲಿ ಕಾರ್ಯನಿರ್ವಹಿಸಬೇಕಿತ್ತು. ರಾತ್ರಿ ಕೆಲಸಕ್ಕೆ ನಿಯೋಜನೆಗೊಂಡವರು 12 ಗಂಟೆ ಕೆಲಸ ಮಾಡಿದ್ದಾರೆ. ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದು ಸುಲಭದ ಮಾತಾಗಿರಲಿಲ್ಲ. ಸೋಂಕಿತರಿಗೆ ವೈದ್ಯರು ಸೂಚಿಸಿದ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ನೀಡಿದ್ದೇವೆ. ಯಾರ ಶ್ರಮವೂ ವ್ಯರ್ಥವಾಗಿಲ್ಲ’ ಎಂದು ತಿಳಿಸಿದರು.

‘ಮನೆಗೂ ಹೋಗದೆಯೇ ದುಡಿದಿದ್ದೇವೆ. ಕ್ವಾರಂಟೈನ್ ಮುಗಿಸಿ ಜೂನ್ 12ಕ್ಕೆ ಪುನಾ ನನ್ನನ್ನು ನಿಯೋಜಿಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಯಾವೊಬ್ಬ ರೋಗಿಯೂ ಇಲ್ಲ. ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಲು ನಮಗೆಲ್ಲರಿಗೂ ಹೆಮ್ಮೆ ಇದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು