ಸೋಮವಾರ, ಜೂನ್ 14, 2021
25 °C

ಕೋವಿಡ್‌ ಕರ್ತವ್ಯ: ಸಂದರ್ಶನಕ್ಕೆ ಜಮಾಯಿಸಿದ ಉದ್ಯೋಗ ಆಕಾಂಕ್ಷಿಗಳು, ಕಾಣೆಯಾದ ಅಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಗುತ್ತಿಗೆ ಆಧಾರದಲ್ಲಿ ಆರು ತಿಂಗಳು ಕರ್ತವ್ಯ ನಿರ್ವಹಿಸಲು ವಿವಿಧ ಹುದ್ದೆಗಳಿಗೆ ಕರೆದಿದ್ದ ನೇರ ಸಂದರ್ಶನಕ್ಕೆ ಗುರುವಾರ ನೂರಾರು ಆಕಾಂಕ್ಷಿಗಳು ಜಮಾಯಿಸಿದ್ದರು. ಇದರಿಂದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ (ಡಿಎಚ್‌ಒ) ಬಳಿ ನೂಕುನುಗ್ಗಲು ಉಂಟಾಯಿತು. ಕೋವಿಡ್ ಮಾರ್ಗಸೂಚಿ ಪಾಲಿಸುವಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವಿಫಲರಾದರು.

ಆಸಕ್ತ ಯುವಕ–ಯುವತಿಯರು ಮಾಸ್ಕ್‌ ಧರಿಸಿದ್ದರಾದರೂ ಯಾರೊಬ್ಬರು ಅಂತರ ಕಾಯ್ದುಕೊಳ್ಳಲಿಲ್ಲ. ಒಬ್ಬರ ಹಿಂದೆಯೇ ಮತ್ತೊಬ್ಬರು ಸರತಿಯಲ್ಲಿ ನಿಂತಿದ್ದರಿಂದಾಗಿ ಕೋವಿಡ್ ನಿಯಮ ಉಲ್ಲಂಘನೆಯಾಯಿತು. ಇದನ್ನು ಸರಿಪಡಿಸಲು ಸಿಬ್ಬಂದಿ ಕೂಡ ಮುಂದಾಗಲಿಲ್ಲ.

ಅಲ್ಲಿದ್ದವರಲ್ಲಿ ಕೋವಿಡ್ ಭಯ, ಆತಂಕ ಇರಲಿಲ್ಲ. ಉದ್ಯೋಗ ಖಾತ್ರಿಯಾದರೆ ಸಾಕು ಎಂದು ಹಾತೊರೆಯುತ್ತಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೂಡ ಇಷ್ಟೊಂದು ಜನರು ಬರುತ್ತಾರೆ ಎಂಬ ಊಹೆ ಮಾಡಿರಲಿಲ್ಲ. ಪ್ರತಿಯೊಬ್ಬರ ವಿವರ ಪಡೆಯಲು ಸಮಯ ಹಿಡಿಯಿತು. ಹೀಗಾಗಿ ತುಂಬಾ ಹೊತ್ತು ಸರತಿಯಲ್ಲೇ ಅನೇಕರು ಕಾಯುವಂತಾಯಿತು.

ಜಿಲ್ಲೆಯಲ್ಲೂ ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಕಾರಣ ಸಮರ್ಥವಾಗಿ ಎದುರಿಸಲು ಸಿಬ್ಬಂದಿ ಕೊರತೆ ಎದುರಾಗಿದೆ. ಇದೇ ಕಾರಣಕ್ಕೆ ಡಿಸಿಎಚ್‌ಸಿ ಮತ್ತು ಸಿಸಿಸಿ (ಕೋವಿಡ್ ಕೇರ್‌ ಕೇಂದ್ರ) ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ನಿಯೋಜಿಸುವ ಅಗತ್ಯವಿದೆ ಎಂಬುದಾಗಿ ಡಿಎಚ್‌ಒ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು.

ಇತ್ತೀಚೆಗೆ ಜಿಲ್ಲಾಧಿಕಾರಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಮಂಜೂರಾತಿ ನೀಡಿದ್ದರು. ಅದರಂತೆ ಪ್ರಯೋಗ ಶಾಲಾ ತಂತ್ರಜ್ಞರು 23, ಕ್ಷ–ಕಿರಣ ತಂತ್ರಜ್ಞರು 11, ಡಾಟಾ ಎಂಟ್ರಿ ಆಪರೇಟರ್‌ 21 ಹಾಗೂ ಗ್ರೂಪ್‌ ‘ಡಿ’ 58 ಸೇರಿ ಒಟ್ಟು 113 ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿತ್ತು.

ನೇಮಕಾತಿಯು ಗುತ್ತಿಗೆ ಆಧಾರದಲ್ಲಿ ಗರಿಷ್ಠ 6 ತಿಂಗಳ ಅವಧಿಗೆ ಮಾತ್ರ ಇರುತ್ತದೆ. ನಿಯಮಾನುಸಾರ ವೇತನ ಪಾವತಿಸಲಾಗುವುದು. ಅಭ್ಯರ್ಥಿಗಳ ವಯೋಮಿತಿ 40 ವರ್ಷದೊಳಗೆ ಇರಬೇಕು ಎಂಬ ಷರತ್ತು ವಿಧಿಸಿತ್ತು. ಈ ನಡುವೆಯೂ ಡಿಎಂಎಲ್‌ಟಿ, ಎಕ್ಸರೇ–ಡಿಪ್ಲೊಮಾ, ಪಿಯು ಮತ್ತು ಗಣಕಯಂತ್ರ ತರಬೇತಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದ್ದ ಅನೇಕರು ಸಂದರ್ಶನಕ್ಕಾಗಿ ಬಂದಿದ್ದರು. ದಾಖಲಾತಿ ಸಲ್ಲಿಸುವ ವೇಳೆ ನೂಕುನುಗ್ಗಲು ಉಂಟಾಯಿತು.

***

ಗುತ್ತಿಗೆ ಆಧಾರದ ನೇಮಕಾತಿ ಪ್ರಕ್ರಿಯೆ ಸಂಬಂಧ ಆಸಕ್ತರು ಅರ್ಜಿ ಸಲ್ಲಿಸಲು ಬಂದಿದ್ದರು. ಎರಡು ದಿನದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಅರ್ಹರನ್ನು ಆಯ್ಕೆ ಮಾಡಲಾಗುವುದು.

-ಡಾ. ಫಾಲಾಕ್ಷ, ಜಿಲ್ಲಾ ಆರೋಗ್ಯಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು