ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಊರಿಗೆ ಮರಳುತ್ತಿದ್ದವರು ಅಪಘಾತಕ್ಕೆ ಬಲಿ

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರ್ಯಾಕ್ಟರ್‌–ಬುಲೆರೊ ಡಿಕ್ಕಿ, ಮೂವರು ಸಾಗು
Last Updated 29 ಮಾರ್ಚ್ 2020, 11:19 IST
ಅಕ್ಷರ ಗಾತ್ರ

ಹಿರಿಯೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ನಿರುದ್ಯೋಗಿಗಳಾದ ಕಾರ್ಮಿಕರು ಊರಿಗೆ ಮರಳುವಾಗ ಅಪಘಾತಕ್ಕೆ ಬಲಿಯಾಗಿದ್ದಾರೆ.ತಾಲ್ಲೂಕಿನ ಕಸ್ತೂರಿ ರಂಗಪ್ಪನಹಳ್ಳಿ ಗೇಟ್ ಬಳಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್‌ ಮತ್ತು ಬುಲೆರೊ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಮೂವರು ಕಾರ್ಮಿಕು ಮೃತಪಟ್ಟಿದ್ದಾರೆ.

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಳೂರು ಗ್ರಾಮದ ಮೌನೇಶ್ (27), ಸಕ್ಕಪ್ಪ (30) ಹಾಗೂ ಮಹದೇವಪ್ಪ (33) ಮೃತಪಟ್ಟವರು. ಅಪಘಾತದಲ್ಲಿ 11 ಜನರು ಗಾಯಗೊಂಡಿದ್ದು, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರ್ಮಿಕರು ಬೆಂಗಳೂರಿನಿಂದ ಟ್ರ್ಯಾಕ್ಟರ್‌ನಲ್ಲಿ ಕಲಬುರ್ಗಿಗೆ ಹೊರಟಿದ್ದರು. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಸ್ತೂರಿ ರಂಗಪ್ಪನಹಳ್ಳಿ ಗೇಟ್‌ ಸಮೀಪ ಹಿಂದಿನಿಂದ ವೇಗವಾಗಿ ಬಂದ ಬುಲೆರೊ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹೆದ್ದಾರಿ ಪಕ್ಕದ ಗುಂಡಿಗೆ ಉರುಳುವುದನ್ನು ತಪ್ಪಿಸಲು ಚಾಲಕ ಬ್ರೇಕ್‌ ಹಾಕಿದ್ದಾರೆ. ಇದರಿಂದ ಟ್ರಾಲಿ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣದಲ್ಲಿ ನಮ್ಮೂರಿನ 14 ಜನ ತೊಡಗಿಕೊಂಡಿದ್ದೆವು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮೂರು ತಿಂಗಳು ಕೆಲಸ ಸ್ಥಗಿತೊಗೊಳಿಸಿದ್ದಾಗಿ ಎಂಜಿನಿಯರ್‌ ಹೇಳಿದರು. ಬೆಂಗಳೂರಿನಲ್ಲಿ ಕೆಲಸವಿಲ್ಲದೇ ಇರಲು ಸಾಧ್ಯವಿಲ್ಲ. ಮಣ್ಣಿನ ಕೆಲಸಕ್ಕೆ ತಂದಿದ್ದ ಟ್ರ್ಯಾಕ್ಟರ್‌ನಲ್ಲಿ ಊರಿಗೆ ಹೊರಟಿದ್ದೆವು. ನೆಲಮಂಗಲ, ತುಮಕೂರು ಹಾಗೂ ಶಿರಾ ಟೋಲ್‌ ಬಳಿ ಪೊಲೀಸರಿಗೆ ನಮ್ಮ ಕಷ್ಟ ಮನವರಿಕೆ ಮಾಡಿಕೊಟ್ಟು ಮುಂದೆ ಬರುವಾಗ ಈ ಅವಘಡ ಸಂಭವಿಸಿತು’ ಎಂದು ಆಸ್ಪತ್ರೆಯಲ್ಲಿ ಕಣ್ಣೀರಾದರು ಗಾಯಾಳು ದೊಡ್ಡಪ್ಪ.

‘ಮೃತ ಮಾನಪ್ಪ (ಮೌನೇಶ್) ದೊಡ್ಡಮ್ಮನ ಮಗ, ಸಕ್ಕಪ್ಪ ಅತ್ತೆಯ ಮಗ. ಮಹದೇವಪ್ಪ ದೂರದ ಸಂಬಂಧಿ. ಟ್ರ್ಯಾಕ್ಟರ್‌ನಲ್ಲಿದ್ದ 14 ಮಂದಿ ಒಂದೇ ಊರಿನವರು. ಊರಲ್ಲಿ ಅಲ್ಪಸ್ವಲ್ಪ ಜಮೀನಿದೆ. ಹಳೆಯ ಮನೆಗಳಿವೆ. ಸಕಾಲದಲ್ಲಿ ಮಳೆಯಾದರೆ ಒಂದೆರಡು ಚೀಲ ಜೋಳ ಕೈಗೆ ಸಿಗುತ್ತದೆ. ಅದು ಕುಟುಂಬದವರ ಹೊಟ್ಟೆ ತುಂಬಿಸದ ಕಾರಣ ಮನೆಯಲ್ಲಿ ಅಪ್ಪ–ಅವ್ವನನ್ನು ಬಿಟ್ಟು 9 ತಿಂಗಳ ಹಿಂದೆ ಬೆಂಗಳೂರಿಗೆ ಹೋಗಿದ್ದೆವು’ ಎನ್ನುವಾಗ ಕಣ್ಣಂಚಲ್ಲಿ ನೀರು ಕಾಣಿಸಿತು.

‘ಮಳೆಗಾಲ ಆರಂಭ ಆಗುವವರೆಗೆ ಬೆಂಗಳೂರಿನಲ್ಲೆ ಇರಬೇಕು ಅಂದುಕೊಂಡಿದ್ದೆವು. ಕೊರೊನಾ ಕಾರಣಕ್ಕೆ ಜೊತೆಗಿದ್ದವರೇ ಮರಳಿ ಬಾರದ ಜಾಗಕ್ಕೆ ಹೋಗಿದ್ದಾರೆ. ತಾಲ್ಲೂಕು ಆಸ್ಪತ್ರೆಯಲ್ಲಿ ಎಂಟು ಜನರಿದ್ದೇವೆ. ಸಂಬಂಧಿಕರು ಊರಿಂದ ಬರಲು ಬಸ್ಸುಗಳಿಲ್ಲ. ಶವಗಳನ್ನು ಊರಿಗೆ ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದು ತಿಳಿಯುತ್ತಿಲ್ಲ. ಪೊಲೀಸರು ಎಲ್ಲ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ಊರು ತಲುಪಿದರೆ ಸಾಕು ಎಂಬಂತಾಗಿದೆ’ ಎಂದು ದೊಡ್ಡಪ್ಪ ನೋವು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT