ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಾಜ್ಞೆ ಜಾರಿ, ವಹಿವಾಟಿಗೆ ಅವಕಾಶ

ಹೋಟೆಲ್‌ ಸೇವೆ ಪಾರ್ಸಲ್‌ಗೆ ಸೀಮಿತ, ಮಾರ್ಗಸೂಚಿ ಪಾಲನೆಗೆ ದಂಡ ಪ್ರಯೋಗ
Last Updated 22 ಏಪ್ರಿಲ್ 2021, 15:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕಿನ ನಿಯಂತ್ರಣಕ್ಕೆ ರೂಪಿಸಿದ ನಿಯಮಗಳನ್ನು ಬಿಗಿಗೊಳಿಸುತ್ತಿರುವ ಜಿಲ್ಲಾಡಳಿತ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಿದೆ. ವಾರಾಂತ್ಯದ ಲಾಕ್‌ಡೌನ್‌ ಹಾಗೂ ಕರ್ಫ್ಯೂ ಬಗೆಗಿನ ಗೊಂದಲಗಳನ್ನು ನಿವಾರಿಸುವ ಪ್ರಯತ್ನ ಮಾಡಿದೆ.

ಕರ್ಫ್ಯೂ ಜಾರಿ ಆಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಜನಸಂಚಾರ ವಿರಳವಾಗಿದೆ. ವಾಹನ ಸಂಚಾರ ಮೊದಲಿನಂತೆ ಕಾಣುತ್ತಿಲ್ಲ. ಬಸ್‌ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ವಾಣಿಜ್ಯ ವಹಿವಾಟಿಗೆ ಅವಕಾಶ ಕಲ್ಪಿಸಿದರೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು.

ಜಿಲ್ಲೆಯಲ್ಲಿ ಕರ್ಫ್ಯೂ ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ. ನಿತ್ಯ ರಾತ್ರಿ 9ರಿಂದ ಬೆಳಿಗ್ಗೆ 6 ಹಾಗೂ ಶನಿವಾರ, ಭಾನುವಾರಗಳಂದು ಇದು ಅನುಷ್ಠಾನ ಆಗಲಿದೆ. ನಿಷೇಧಾಜ್ಞೆ, ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೂಚನೆ ನೀಡಲಾಗಿದೆ.

ಹೋಟೆಲ್‌, ಬಾರ್‌ನಲ್ಲಿ ಪಾರ್ಸಲ್‌:ಕೋವಿಡ್ ಮಾರ್ಗಸೂಚಿ ಗುರುವಾರದಿಂದ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದಿದೆ. ಹೋಟೆಲ್‌, ಬಾರ್‌ ಅಂಡ್‌ ರೆಸ್ಟೊರೆಂಟ್‌ ಸೇವೆಗೆ ಕೆಲ ನಿರ್ಬಂಧಗಳನ್ನು ವಿಧಿಸಲಾಗಿದೆ. ಪಾರ್ಸಲ್‌ ಸೇವೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಬುಧವಾರ ಬಹುತೇಕ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಸೇವೆ ಸಿಕ್ಕಿತ್ತು. ಮಾರ್ಗಸೂಚಿಯ ಅನ್ವಯ ನಡೆದುಕೊಳ್ಳುವಂತೆ ಸ್ಥಳೀಯ ಆಡಳಿತದ ಸಿಬ್ಬಂದಿ ಹಾಗೂ ಪೊಲೀಸರು ಎಚ್ಚರಿಕೆ ನೀಡಿದ್ದರು. ಹೀಗಾಗಿ, ಬಹುತೇಕ ಎಲ್ಲ ಹೋಟೆಲ್‌ಗಳು ಗುರುವಾರ ಪಾರ್ಸಲ್‌ ಸೇವೆ ಮಾತ್ರ ಒದಗಿಸಿದವು.

ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿಯೂ ಇದೇ ನಿಯಮ ಪಾಲನೆ ಆಯಿತು. ಮದ್ಯವನ್ನು ಅನೇಕರು ಮನೆಗೆ ಕೊಂಡೊಯ್ದರು. ವಾರಾಂತ್ಯದಲ್ಲಿ ಲಾಕ್‌ಡೌನ್ ಇರುವುದರಿಂದ ಮದ್ಯ ಮಾರಾಟ ಹೆಚ್ಚಳವಾಗಿದೆ.

ಶೇ 50ರಷ್ಟು ಜನರಿಗೆ ಅವಕಾಶ:ಜಿಲ್ಲೆಯಲ್ಲಿ ಗುರುವಾರ ಜನಜೀವನ ಸಹಜವಾಗಿತ್ತು. ಮಾರುಕಟ್ಟೆ ಪ್ರದೇಶದ ಮೇಲೆ ನಗರಸಭೆ ನಿಗಾ ವಹಿಸಿತ್ತು. ಪೊಲೀಸರು ಗಸ್ತು ತಿರುಗಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಆಗದಂತೆ ನೋಡಿಕೊಂಡರು.

ವಾಣಿಜ್ಯ ಮಳಿಗೆಗಳು ಬೆಳಿಗ್ಗೆ ಎಂದಿನಂತೆ ಬಾಗಿಲು ತೆರೆದವು. ಅನೇಕರು ರಾತ್ರಿ 8ಕ್ಕೆ ಬಾಗಿಲು ಹಾಕಿದರು. ರಾತ್ರಿ ಕರ್ಫ್ಯೂ ಇರುವುದರಿಂದ ಸಂಜೆ ಬಳಿಕ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಹೀಗಾಗಿ, ಅಂಗಡಿಗಳ ಬಾಗಿಲು ಮುಚ್ಚಿ ಕರ್ಫ್ಯೂ ಜಾರಿಗೂ ಮುನ್ನವೇ ಮನೆ ತಲುಪಿದರು.

ಬಸ್‌, ಆಟೊ, ಕ್ಯಾಬ್‌ ಸೇರಿ ಇತರೆ ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧ ಇರಲಿಲ್ಲ. ಆದರೆ, ಆಸನದ ಸಾಮರ್ಥ್ಯದ ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರದಿಂದ ಈ ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ.

ಬೆಳಿಗ್ಗೆ 10ರವರೆಗೆ ಮಾತ್ರ:ಶನಿವಾರ ಮತ್ತು ಭಾನುವಾರ ಲಾಕ್‌ಡೌನ್‌ ಇರುವುದರಿಂದ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ದಿನಸಿ, ತರಕಾರಿ, ಹಾಲು ಅಂಗಡಿ ಈ ಅವಧಿಯಲ್ಲಿ ಮಾತ್ರ ತೆರೆದಿರುತ್ತವೆ.

ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಎಲ್ಲ ಬಗೆಯ ಕೈಗಾರಿಕೆಗಳು, ಸಂಸ್ಥೆಗಳು, ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸಬಹುದು. ಸಿಬ್ಬಂದಿ ಸಂಚಾರಕ್ಕೆ ಸಂಸ್ಥೆಗಳಿಂದ ಪಡೆದ ಗುರುತಿನ ಚೀಟಿ ತೋರಿಸಿದರೆ ಸಾಕು. ಮಾಸ್ಕ್‌ ಧರಿಸದವರು ಹಾಗೂ ಅಂತರ ಕಾಪಾಡಿಕೊಳ್ಳದೇ ವ್ಯಾಪಾರ ಮಾಡುತ್ತಿದ್ದವರಿಗೆ ದಂಡದ ಬಿಸಿ ಮುಟ್ಟಿಸಲಾಗಿದೆ.

ಚಿತ್ರದುರ್ಗದಲ್ಲಿ ಸೋಂಕು ಹೆಚ್ಚಳ:ಜಿಲ್ಲೆಯಲ್ಲಿ ಗುರುವಾರ 164 ಜನರಿಗೆ ಕೋವಿಡ್ ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16,304 ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 82, ಚಳ್ಳಕೆರೆ 9, ಹಿರಿಯೂರು 17, ಹೊಳಲ್ಕೆರೆ 13, ಹೊಸದುರ್ಗ 20, ಮೊಳಕಾಲ್ಮುರು ತಾಲ್ಲೂಕಿನಲ್ಲಿ 6 ಹಾಗೂ ಹೊರ ಜಿಲ್ಲೆಯ 17 ಪ್ರಕರಣಗಳು ಪತ್ತೆಯಾಗಿವೆ. 2,419 ಜನರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇನ್ನೂ 1,438 ಜನರ ವರದಿ ಬರುವುದು ಬಾಕಿ ಇದೆ.

ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಗುರುವಾರ 65 ಜನರು ಗುಣಮುಖರಾಗಿದ್ದಾರೆ. ಈವರೆಗೆ 15,527 ಜನರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ 707 ಸಕ್ರಿಯ ಪ್ರಕರಣಗಳಿವೆ. 70 ಜನ ಕೋವಿಡ್‍ನಿಂದ ಮೃತಪಟ್ಟಿದ್ದಾರೆ ಎಂದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿರಂಗನಾಥ್ ತಿಳಿಸಿದ್ದಾರೆ.

ಅದ್ದೂರಿ ರಥೋತ್ಸವ:ಚಿತ್ರದುರ್ಗ ತಾಲ್ಲೂಕಿನ ಪಂಡ್ರಹಳ್ಳಿಯ ರಂಗನಾಥಸ್ವಾಮಿ ರಥೋತ್ಸವ ಗುರುವಾರ ಅದ್ದೂರಿಯಾಗಿ ನಡೆಯಿತು. ಜಿಲ್ಲಾಡಳಿತದ ನಿರ್ಬಂಧದ ನಡುವೆಯೂ ರಥೋತ್ಸವ ಜರುಗಿತು.

ರಥೋತ್ಸವಕ್ಕೆ ಸಾಕಷ್ಟು ಭಕ್ತರು ಸೇರಿದ್ದರು. ಮಾಸ್ಕ್‌ ಹಾಗೂ ಅಂತರ ಕಾಯ್ದೊಂಡಿದ್ದು ಕಂಡುಬರಲಿಲ್ಲ. ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿ ಬುಧವಾರ ಅದ್ದೂರಿ ಕೆಂಡೋತ್ಸವ ನಡೆದಿದೆ. ಗ್ರಾಮೀಣ ಪ್ರದೇಶದಲ್ಲಿ ಜಾತ್ರೆ, ಉತ್ಸವಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT