ಮಂಗಳವಾರ, ಆಗಸ್ಟ್ 3, 2021
28 °C
ಇಬ್ಬರು ನ್ಯಾಯಾಧೀಶರು ಕ್ವಾರಂಟೈನ್‌, ನ್ಯಾಯಾಲಯ ಸಂಪೂರ್ಣ ಸ್ಯಾನಿಟೈಸ್‌

ಚಿತ್ರದುರ್ಗದಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಮತ್ತೆ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಚಳ್ಳಕೆರೆ, ಹಿರಿಯೂರು ಹಾಗೂ ಹೊಸದುರ್ಗ ತಾಲ್ಲೂಕಿನ ತಲಾ ಒಬ್ಬರಲ್ಲಿ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ.

ಇದರಿಂದ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಈವರೆಗೆ 50 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 33 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಗಂಟಲು ದ್ರವದ ಮಾದರಿಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ರವಾನೆ ಮಾಡಿ ವರದಿಯನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ಮಾಹಿತಿ ನೀಡಿದ್ದಾರೆ.

40 ಜನ ಕ್ವಾರಂಟೈನ್‌: ನ್ಯಾಯಾಲಯದ ಬೆರಳಚ್ಚುಗಾರರೊಬ್ಬರಿಗೆ ಸೋಂಕು ದೃಢಪಟ್ಟಿದ್ದರಿಂದ ಇಬ್ಬರು ಹಿರಿಯ ಸಿವಿಲ್‌ ನ್ಯಾಯಾಧೀಶರು ಸೇರಿ 40 ಜನರು ಗೃಹ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಪ್ರಾಥಮಿಕ ಸಂಪರ್ಕಿತರಲ್ಲಿ ಪೊಲೀಸರು, ನ್ಯಾಯಾಲಯದ ಸಿಬ್ಬಂದಿ ಇದ್ದಾರೆ.

ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯವನ್ನು ಭಾನುವಾರ ಸ್ಯಾನಿಟೈಸ್‌ ಮಾಡಲಾಯಿತು. ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಶುಚಿಗೊಳಿಸಲಾಯಿತು. ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು ಕಂಡುಬಂದರೆ ನ್ಯಾಯಾಲಯವನ್ನು ಕಂಟೈನ್‌ಮೆಂಟ್‌ ವಲಯವೆಂದು ಪರಿಗಣಿಸುವ ಸಾಧ್ಯತೆ ಇದೆ.

ವರದಿ ವಿಳಂಬ: ಮೂಲತಃ ಹಿರಿಯೂರಿನ ಬೆರಳಚ್ಚುಗಾರರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಿತ್ಯ ಸಂಚರಿಸುತ್ತಿದ್ದರು. ನ್ಯಾಯಾಧೀಶರ ಪೀಠದ ಸಮೀಪ ಕುಳಿತು ಕೆಲಸ ಮಾಡುತ್ತಿದ್ದರು. ಜೂನ್‌ 29ರಂದು ಮಧ್ಯಾಹ್ನ ಇವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಇವರ ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದರು. ಅಂದಿನಿಂದ ಇವರು ಗೃಹ ಕ್ವಾರಂಟೈನ್‌ನಲ್ಲಿದ್ದರು.

ಏಳು ದಿನಗಳ ಬಳಿಕ ವರದಿ ಬಂದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಶಿವಮೊಗ್ಗ ಪ್ರಯೋಗಾಲಯಕ್ಕೆ ರವಾನೆಯಾಗಿದ್ದ ಮಾದರಿಯ ವರದಿ ಬರುವಲ್ಲಿ ವಿಳಂಬವಾಗಿದೆ ಎಂದು ಆರೋಗ್ಯ ಇಲಾಖೆ ಸಬೂಬು ನೀಡಿದೆ.

17 ಕಂಟೈನ್‌ಮೆಂಟ್‌ ವಲಯ: ಹೆಚ್ಚುತ್ತಿರುವ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಕಂಟೈನ್‌ಮೆಂಟ್‌ ವಲಯದ ನಿಯಮಗಳನ್ನು ಮತ್ತೆ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಕೋವಿಡ್–19 ದೃಢಪಟ್ಟಿದ್ದರಿಂದ 17 ಸ್ಥಳಗಳನ್ನು ಕಂಟೈನ್‌ಮೆಂಟ್‌ ವಲಯಗಳೆಂದು ಘೋಷಣೆ ಮಾಡಲಾಗಿದೆ.

ಹಿರಿಯೂರು ಏಳು, ಚಿತ್ರದುರ್ಗ, ಚಳ್ಳಕೆರೆ ತಲಾ ಮೂರು, ಹೊಳಲ್ಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ತಲಾ ಎರಡು ಸ್ಥಳಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಜನಸಂಚಾರ ನಿರ್ಬಂಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.