ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕೋವಿಡ್‌ ಕಾಲದ ತಲ್ಲಣಗಳು...

Last Updated 7 ಜೂನ್ 2021, 6:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಬೆಳಿಗ್ಗೆ ಮನೆಯೊಂದರ ಒಲೆ ಹೊತ್ತಿತ್ತು. ಇದ್ದಷ್ಟು ಅಕ್ಕಿ ಹಾಕಿ ಅನ್ನ ಮಾಡುತ್ತಿದ್ದರು ಮಹಿಳೆ. ಒಲೆ ಉರಿಯುತ್ತಿದ್ದುದು ಗೊತ್ತಾಗಿ ಮಕ್ಕಳೆಲ್ಲ ಆ ಗುಡಿಸಲು ಎದುರು ಜಮಾಯಿಸಿದರು. ಅವರ ಕಣ್ಣುಗಳಲ್ಲಿ ಹಸಿವಿನ ನೋವು ಇಣುಕುತ್ತಿತ್ತು. ಮಕ್ಕಳ ಅಂಗೈಗೆ ಒಂದೊಂದು ಹಿಡಿಯಷ್ಟು ಅನ್ನ ಹಾಕಿದ ಮಹಿಳೆ ಉಪವಾಸದಲ್ಲಿ ದಿನ ಕಳೆಯಲು ಸಜ್ಜಾದರು...

ಹಿರಿಯೂರು ತಾಲ್ಲೂಕಿನ ಧರ್ಮಪುರ ಹೊರವಲಯದಲ್ಲಿರುವ ಕೊರಚ ಸಮುದಾಯದ ಸ್ಥಿತಿ ಇದು. ಮನೆಯಲ್ಲಿದ್ದ ದವಸ–ಧಾನ್ಯ ಲಾಕ್‌ಡೌನ್‌ ಜಾರಿಗೊಂಡ 15 ದಿನಗಳಿಗೆ ಮುಗಿದು ಹೋಗಿದೆ. ಮನೆಯ ಅಗತ್ಯ ಸಾಮಗ್ರಿಗಳನ್ನು ತರಲು ಹಣವಿಲ್ಲ. ಸರ್ಕಾರ ನೀಡುವ ಪಡಿತರ ಎಲ್ಲ ದಿನವೂ ಸಾಕಾಗುತ್ತಿಲ್ಲ. ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳಲು ಊರ ಒಳಗೆ ಯಾರೊಬ್ಬರನ್ನೂ ಸೇರಿಸುತ್ತಿಲ್ಲ. ಕೊರೊನಾ ಸೋಂಕಿಗಿಂತ ಹಸಿವು ದೊಡ್ಡ ಶತ್ರುವಾಗಿ ಕಾಡುತ್ತಿದೆ.

ಧರ್ಮಪುರ ಸಮೀಪದ ಹಳ್ಳಿಯ ಅರೆ ಅಲೆಮಾರಿ ಸಮುದಾಯದ ಈ ಜನರು 35 ವರ್ಷಗಳಿಂದ ಕೆರೆಯ ದಡದಲ್ಲಿ ನೆಲೆ ಕಂಡುಕೊಂಡಿದ್ದಾರೆ. ತೆಂಗಿನ ಗರಿಗಳನ್ನು ಬಳಸಿಕೊಂಡು ಗುಡಿಸಲು ಕಟ್ಟಿಕೊಂಡಿದ್ದಾರೆ. ಪ್ರತಿ ಮನೆಯಲ್ಲಿ ನಾಲ್ಕಾರು ಮಕ್ಕಳಿವೆ. ಕೂದಲು ಸಂಗ್ರಹಿಸಿ ಪಿನ್‌ ಮಾರಾಟ ಮಾಡುವುದು ಇವರ ಕಾಯಕ. ಗ್ರಾಮದ ಅಲ್ಲಲ್ಲಿ ಬಿದ್ದ ತೆಂಗಿನ ಕಾಯಿ ಚಿಪ್ಪು ಕಲೆಹಾಕುತ್ತಾರೆ. ಕೆ.ಜಿ. ತೆಂಗಿನ ಕಾಯಿ ಚಿ‍ಪ್ಪನ್ನು ₹ 5ಕ್ಕೆ ಮಾರಾಟ ಮಾಡಿ ಬದುಕು ಸಾಗಿಸುತ್ತಾರೆ. ಕೊರೊನಾ ಸೋಂಕು ಕಾಲಿಟ್ಟ ಬಳಿಕ ಇವರ ಉದ್ಯೋಗಕ್ಕೆ ಕುತ್ತು ಎದುರಾಗಿದೆ.

‘ನಾವೆಲ್ಲ ಆರೋಗ್ಯವಾಗಿದ್ದೇವೆ. ಯಾರೊಬ್ಬರಿಗೂ ಕೋವಿಡ್‌ ಬಂದಿಲ್ಲ. ಕೆಲಸ ಇಲ್ಲದೇ ಬದುಕು ಸಾಗಿಸುವುದು ಕಷ್ಟವಾಗುತ್ತಿದೆ. ದುಡಿದು ತರದಿದ್ದರೆ ಹೊಟ್ಟೆ ತುಂಬುವುದಿಲ್ಲ. ಇದ್ದ ಒಂದಷ್ಟು ಅಕ್ಕಿ, ಕಿರಾಣಿ ಸಾಮಗ್ರಿ ಮುಗಿದು ವಾರ ಕಳೆದಿದೆ. ಕೊರೊನಾ ಸೋಂಕಿಗಿಂತ ಹಸಿವು ನೀಗಿಸಿಕೊಳ್ಳುವುದೇ ಸವಾಲಾಗಿದೆ...’ ಎನ್ನುತ್ತಾ ಹರಿದ ಮಾಸ್ಕ್‌ ಸರಿಪಡಿಸಿಕೊಂಡರು ಲಕ್ಷ್ಮಕ್ಕ.

ಮರದ ಕೆಳಗಿನ ಜೋಪಡಿಯೇ ಇವರ ಮನೆ. ಹಗಲು ಹೊತ್ತು ಮರದ ಸಮೀಪ ಮಕ್ಕಳೆಲ್ಲ ಒಟ್ಟಾಗಿ ಆಟವಾಡುತ್ತಾರೆ. ಆಂಧ್ರಪ್ರದೇಶದ ಗಡಿ ಸಂಪರ್ಕಿಸುವ ರಸ್ತೆಯಲ್ಲಿ ವಾಹನಗಳು ನಿತ್ಯವೂ ಸಂಚರಿಸುತ್ತವೆ. ಸರ್ಕಾರಿ ಅಧಿಕಾರಿಗಳು, ರಾಜಕೀಯ ಮುಖಂಡರು ಅಲ್ಲಿ ಸುಳಿದಾಡುತ್ತಾರೆ. ಆದರೆ, ಈ ಸಮುದಾಯದ ಹಸಿವಿನ ಆಕ್ರಂದನ ಮಾತ್ರ ಯಾರೊಬ್ಬರ ಮನಸನ್ನು ಕರಗಿಸಿಲ್ಲ. ಜಿಲ್ಲೆಯ ಹಲವೆಡೆ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯ ಇಂತಹದೇ ನೋವು ಅನುಭವಿಸುತ್ತಿದೆ.

‘ಕಳೆದ ವರ್ಷ ಏಕಾಏಕಿ ಹೊರಗೆ ಹೋಗಬಾರದು ಎಂದಾಗ ತುಂಬಾ ಕಷ್ಟವಾಗಿತ್ತು. ಆಗಲೂ ಇಂತಹದೇ ಸಮಸ್ಯೆ ಎದುರಾಗಿತ್ತು. ಕೆಲ ದಿನಗಳಲ್ಲೇ ದಾನಿಗಳು ಬಂದು ಆಹಾರ ಧಾನ್ಯಗಳನ್ನು ನೀಡಿದರು. ನಿರೀಕ್ಷೆ ಮೀರಿ ನೆರವು ಸಿಕ್ಕಿತು. ಆದರೆ, ಈ ಬಾರಿ ಯಾವೊಬ್ಬ ದಾನಿಯೂ ಇಲ್ಲಿಗೆ ಬಂದಿಲ್ಲ. ನಗರ ಪ್ರದೇಶಕ್ಕಿಂತ ಬಹು ದೂರದಲ್ಲಿರುವ ನಾವು ಯಾರ ಕಣ್ಣಿಗೂ ಬೀಳುತ್ತಿಲ್ಲ..’ ಎಂದು ನಿರಾಶಾದಾಯಕ ಉತ್ತರವನ್ನೂ ನೀಡಿದರು ಶಂಕ್ರಮ್ಮ.

ಹಿರಿಯರು ಮನೆಯಲ್ಲೇ ಕುಳಿತು ಪೊರಕೆ ಕಟ್ಟುವ ಕಾಯಕವನ್ನೂ ಮಾಡುತ್ತಾರೆ. ಪೊರಕೆಗೆ ಅಗತ್ಯವಿರುವ ಗರಿಯನ್ನು ತರಲು ಹತ್ತಾರು ಕಿ.ಮೀ. ದೂರದ ಅಡವಿಯಲ್ಲಿ ಅಲೆಯಬೇಕು. ಗರಿ ತಂದು ಪೊರಕೆ ಕಟ್ಟಿದರೂ ಮಾರಾಟ ಮಾಡುವುದು ಹೇಗೆ ಎಂಬುದೇ ಯಕ್ಷಪ್ರಶ್ನೆ.

‘ಮನೆ, ಭೂಮಿ ಯಾವುದೂ ನಮಗಿಲ್ಲ. ಹಂದಿಗಳನ್ನು ಸಾಕಿಕೊಂಡು ಬದುಕು ರೂಪಿಸಿಕೊಳ್ಳುವ ಆಸೆಯೂ ಈಡೇರಲಿಲ್ಲ. ಊರೊಳಗೆ ಹೋಗಿ ಮಕ್ಕಳು ಮುದ್ದೆ,ಅನ್ನ ಭಿಕ್ಷೆ ಬೇಡಿ ತರುತ್ತಿದ್ದರು. ಅದಕ್ಕೂ ಅವಕಾಶ ಇಲ್ಲದಂತೆ ಆಗಿದೆ. ನೀರು ತರುವುದು ಕೂಡ ಕಷ್ಟವಾಗಿದೆ. ಇನ್ನು ಮುಂದೆ ನಾವು ಜೀವನಹೇಗೆ ಮಾಡುವುದು...’ ಎಂದು ಪ್ರಶ್ನಿಸಿದರು ಲಕ್ಷ್ಮಕ್ಕ.

ಕೃಷಿ ಕಾರ್ಮಿಕರಿಗೂ ಕೆಲಸವಿಲ್ಲ

ಪೂರ್ವ ಮುಂಗಾರು ಮಳೆ ಉತ್ತಮವಾಗಿ ಬಿದ್ದಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿವೆ. ಆದರೆ, ಕೂಲಿ ಕಾರ್ಮಿಕರನ್ನು ಕೃಷಿ ಕೆಲಸಕ್ಕೆ ಕರೆಯುತ್ತಿಲ್ಲ.

‘ಕೊರೊನಾ ಸೋಂಕು ದಿನ ಕಳೆದಂತೆ ಹೆಚ್ಚಾಗುತ್ತಿದೆ. ಹೊರಗಿನವರು ಬರದಂತೆ ಗ್ರಾಮಗಳಿಗೆ ಬೇಲಿ ಹಾಕಲಾಗಿದೆ. ಯಾರೊಬ್ಬರೂ ಜಮೀನು ಕೆಲಸಕ್ಕೆ ಕರೆಯುತ್ತಿಲ್ಲ. ಕೆಲಸ ಇಲ್ಲದೇ ತೊಂದರೆ ಉಂಟಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು ದೊಡ್ಡಚೆಲ್ಲೂರಿನ ಮಂಜುನಾಥ್‌.

‘ಬೇಸಾಯಕ್ಕೆ ಅಗತ್ಯವಿರುವ ಪರಿಕರಗಳ ದುರಸ್ಥಿ ಕಾರ್ಯವೂ ಮೇ ತಿಂಗಳಲ್ಲಿ ನಡೆಯುತ್ತಿತ್ತು. ಸೋಂಕು ಹೆಚ್ಚಾಗಿದ್ದರಿಂದ ರೈತರು ಆತಂಕಗೊಂಡಿದ್ದಾರೆ. ಬಡಗಿ ಕೆಲಸವನ್ನೇ ನಂಬಿಕೊಂಡು ಬದುಕುತ್ತಿದ್ದ ನಮಗೆ ಜೀವನ ನಡೆಸುವುದು ಕಷ್ಟವಾಗಿದೆ’ ಎಂದು ಧ್ವನಿಗೂಡಿಸಿದರು ಅಂಜನಪ್ಪ.

ಈರುಳ್ಳಿ: ನಷ್ಟವೇ ಹೆಚ್ಚು

ಬೇಸಿಗೆ ಈರುಳ್ಳಿ ಬೆಳೆದು ಕಡಿಮೆ ಬೆಲೆಗೆ ಮಾರಾಟ ಮಾಡಿದ ಚಳ್ಳಕೆರೆ ತಾಲ್ಲೂಕಿನ ಹೊಸಕೆರೆ ಹಳ್ಳಿಯ ಸರೋಜಮ್ಮ ಈ ಬಾರಿಯೂ ನಷ್ಟ ಅನುಭವಿಸಿದ್ದಾರೆ.

ಮೂರು ಎಕರೆ ಜಮೀನಿನ ಎರಡು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಕೊರೊನಾ ಸೋಂಕು ಹೆಚ್ಚಾದಂತೆ ಈರುಳ್ಳಿ ಬೆಲೆ ಕುಸಿತವಾಯಿತು. ಚೀಲವೊಂದಕ್ಕೆ ₹ 350ರಂತೆ 250 ಚೀಲ ಈರುಳ್ಳಿ ಮಾರಾಟ ಮಾಡಿದರು. ಈರುಳ್ಳಿಗೆ ಮಾಡಿದ ಖರ್ಚು ಕೂಡ ಅವರ ಕೈಸೇರಲಿಲ್ಲ.

‘ಈರುಳ್ಳಿ ಕೀಳುವಾಗ ಉತ್ತಮ ಬೆಲೆ ಇತ್ತು. ಸಂತಸದಿಂದಲೇ ಕೆಲಸ ಮಾಡುತ್ತಿರುವಾಗ ಏಕಾಏಕಿ ಇಳಿಕೆಯಾಗ ತೊಡಗಿತು. ಲಾಕ್‌ಡೌನ್‌ ಘೋಷಣೆ ಆಗುತ್ತಿದ್ದಂತೆ ಪಾತಾಳ ತಲುಪಿತು. ಎರಡು ವರ್ಷ ಸತತ ನಷ್ಟ ಅನುಭವಿಸಿದೆವು’ ಎಂದು ಬೇಸರ ಹೊರಹಾಕಿದರು ಸರೋಜಮ್ಮ.

ಊರೂರು ಸುತ್ತಿ ತರಕಾರಿ ಮಾರಾಟ

ಮೊಳಕಾಲ್ಮುರು ತಾಲ್ಲೂಕಿನ ಚಿನ್ನಮ್ಮನಹಳ್ಳಿಯ ಮಲ್ಲಿಕಮ್ಮ ತರಕಾರಿ ಮಾರಾಟ ಮಾಡುವ ಮಹಿಳೆ. ಸಂತೆ ದಿನ ಮಾರುಕಟ್ಟೆಗೆ ತೆರಳಿ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಉಳಿದ ದಿನ ಕೃಷಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಕೊರೊನಾ ಸೋಂಕು ಕಾಣಿಸಿಕೊಂಡು ಸಂತೆಗಳು ರದ್ದಾಗಿದ್ದರಿಂದ ಮಲ್ಲಿಕಮ್ಮ ಊರೂರು ಸುತ್ತಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.

‘ಮೊಳಕಾಲ್ಮುರು, ರಾಂಪುರ, ಬಿ.ಜಿ.ಕೆರೆ ಹಾಗೂ ಕೊಂಡ್ಲಹಳ್ಳಿಯ ಸಂತೆಗೆ ವಾರಕ್ಕೊಮ್ಮೆ ತೆರಳಿ ತರಕಾರಿ ಮಾರಾಟ ಮಾಡುತ್ತಿದ್ದೆ. ರೈತರ ಬಳಿ ತರಕಾರಿ ಖರೀದಿಸಿ ಮಾರುಕಟ್ಟೆಗೆ ಕೊಂಡೊಯ್ದು ವ್ಯಾಪಾರ ಮಾಡುವ ವೃತ್ತಿಯನ್ನು 20 ವರ್ಷಗಳಿಂದ ಮಾಡುತ್ತಿದ್ದೇನೆ. ಸಂತೆ ರದ್ದಾದ ಬಳಿಕ ಕಾಯಕ ನಡೆಸುವುದೇ ಕಷ್ಟವಾಗಿದೆ’ ಎಂದು ನೋವು ತೋಡಿಕೊಂಡರು ಮಲ್ಲಿಕಮ್ಮ.

ಅವಧಿಗೂ ಮುನ್ನವೇ ಮರಳಿದ ಕುರಿಗಾಹಿ

ಮೊಳಕಾಲ್ಮುರು: ‘ಒಂದೆಡೆ ಕೋವಿಡ್ ಹರಡುವಿಕೆ, ಇನ್ನೊಂದು ಕಡೆ ಮುಂಗಾರು ಆರಂಭದ ತವಕ. ನಮಗೆ ವಹಿವಾಟು ನಡೆಯುವುದು ಮುಂಗಾರು ಮುಂಚಿನಲ್ಲೇ. ಇಲ್ಲವಾದಲ್ಲಿ ಮತ್ತೆ ಒಂದು ವರ್ಷದ ತನಕ ಕಾಯಬೇಕು...’

- ಇದು ಸಂಚಾರಿ ಕುರಿತಂಡದ ತುರುವನೂರಿನ ನಾಗರಾಜ್ ಅಳಲು.

‘ಮುಂಗಾರು ಆರಂಭಕ್ಕೂ ಮುನ್ನ ಕುರಿಮಂದೆಯನ್ನು ಹೊಲಗಳಲ್ಲಿ ಮಲಗಿಸಿ ಕುರಿಗಳು ಅಲ್ಲಿ ಹಾಕುವ ಪಿಚ್ಚಿಗೆ (ಸಗಣಿ) ರೈತರು ಕೊಡುವ ಕಾಣಿಗೆ ನಮ್ಮ ಹೊಟ್ಟೆಪಾಡಾಗಿದೆ. ನಮ್ಮ ತಂಡದಲ್ಲಿ 5–6 ಜನರಿದ್ದೇವೆ. ಎಲ್ಲರೂ ಇದರಲ್ಲಿ ಹೊಟ್ಟೆ ತುಂಬಿಸಿಕೊಳ್ಳಬೇಕು. ನಮ್ಮ ಜಿಲ್ಲೆಯಲ್ಲದೇ ಸೀಮಾಂಧ್ರದ ಅನಂತಪುರ ಜಿಲ್ಲೆಯಲ್ಲೂ ಕುರಿಯೊಂದಿಗೆ ಜೀವನ ನಡೆಸುತ್ತಿದ್ದೇವೆ. ರೋಗದಿಂದ ರಕ್ಷಿಸಿಕೊಳ್ಳಲು ಲಸಿಕೆ ಹಾಕಿಸಿಕೊಂಡಿದ್ದೇವೆ’ ಎನ್ನುತ್ತಾರೆ ತಂಡದ ವೃದ್ಧ ರುದ್ರಪ್ಪ.

‘ಸಂಚಾರಕ್ಕೆ ಬಂದಾಗ ನಮ್ಮನ್ನು ಊರಿನಲ್ಲಿ ಮೊದಲಿನ ತರಹ ಬಿಡಿಸಿಕೊಳ್ಳುವುದಿಲ್ಲ. ಹೋಟೆಲ್, ಅಂಗಡಿ ಹೋದರೆ ಎಲ್ಲೆಲ್ಲಿ ಸುತ್ತಾಡಿ ಬಂದಿದ್ದೀರೋ ಮೊದಲು ಇಲ್ಲಿಂದ ಹೋಗಿ ಎನ್ನುತ್ತಾರೆ. ಅನೇಕ ಕಡೆ ಹೀಗೆ ಹೇಳುತ್ತಿರುವ ಕಾರಣ ನಾವೇ ಅಡುಗೆ ಮಾಡಿಕೊಳ್ಳುತ್ತಿದ್ದೇವೆ. ಮೊದಲಿನ ತರಹ ಜನರು ಹಣ ನೀಡುತ್ತಿಲ್ಲ. ಕೊಟ್ಟಷ್ಟು ಇಸ್ಕೊಂಡು ಬರುತ್ತಿದ್ದೇವೆ. ಇಂತಿಷ್ಟು ಎಂದು ಕೇಳುವ ಸ್ಥಿತಿಯಿಲ್ಲ’ ಎಂದರು.

‘ಮುಂಚೆ ಒಂದು ದಿನ ಕುರಿ ಮಂದೆ ಬಿಟ್ಟರೆ ಕಾಳು ಹಾಗೂ ₹ 1,000 ಹಣ ಕೊಡುತ್ತಿದ್ದರು. ಊಟ ನೀಡುತ್ತಿದ್ದರು. ಈಗ ಹಣ ಮಾತ್ರ ಕೊಡುತ್ತಾರೆ. ಇದರಲ್ಲೇ ಎಲ್ಲವನ್ನು ನಾವು ಸರಿದೂಗಿಸಿಕೊಳ್ಳಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT