ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಜಿಲ್ಲೆಯಲ್ಲಿ ಸದ್ಯ 771 ಹಾಸಿಗೆ ಲಭ್ಯ

ಕೇಂದ್ರೀಕೃತ ಆಸ್ಪತ್ರೆ ಹಾಸಿಗೆ ನಿರ್ವಹಣೆ ವಿಧಾನದ ಮೂಲಕ ಕಾಯ್ದಿರಿಸಿಕೊಳ್ಳುವ ಆರೋಗ್ಯ ಇಲಾಖೆ ಸಿಬ್ಬಂದಿ
Last Updated 6 ಜೂನ್ 2021, 7:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್ ಎರಡನೇ ಅಲೆಯೂ ಮೇ ತಿಂಗಳ ಮೂರನೇ ವಾರದ ನಂತರ ಜಿಲ್ಲೆಯ ನಗರ, ಪಟ್ಟಣ ಪ್ರದೇಶಕ್ಕಿಂತಲೂ ಗ್ರಾಮೀಣ ಭಾಗಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ನಿತ್ಯ ಇಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದಕ್ಕಾಗಿ ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇಲ್ಲದವರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಲ್ಲಿ ಈಚೆಗಷ್ಟೇ ‘ಕೇಂದ್ರೀಕೃತ ಆಸ್ಪತ್ರೆ ಹಾಸಿಗೆ ನಿರ್ವಹಣೆ ವಿಧಾನ’ದ ಮೂಲಕ ಹಾಸಿಗೆ ಕಾಯ್ದಿರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. 24 ಗಂಟೆ ಇದು ಕಾರ್ಯನಿರ್ವಹಿಸಲಿದೆ. ಒಂಬತ್ತು ಸಿಬ್ಬಂದಿ ಪಾಳಿವಾರು ಆರೋಗ್ಯಮಿತ್ರ ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಸೋಂಕಿತರ ಪತ್ತೆಗಾಗಿ ಟಾಸ್ಕ್‌ಫೋರ್ಸ್‌ ಸಮಿತಿ ರಚಿಸಲಾಗಿದೆ. ಆಯಾ ಗ್ರಾಮಗಳ ಪಿಡಿಒ, ಎಸ್‌ಐ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ನಿತ್ಯ ಸರ್ವೆ ನಡೆಸುತ್ತಿದ್ದಾರೆ. ಈ ವೇಳೆ ಮನೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯಲು ಕೊಠಡಿ ವ್ಯವಸ್ಥೆ ಇರುವ, ವ್ಯವಸ್ಥೆ ಇಲ್ಲದ, ತೀವ್ರ ಅನಾರೋಗ್ಯ ಸಮಸ್ಯೆ ಇರುವವರ ಮಾಹಿತಿ ಕಲೆ ಹಾಕುತ್ತಿದೆ. ಅಂದೇ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಗೆ ವರದಿ ಸಲ್ಲಿಸುತ್ತಿದೆ.

ಡಿಎಸ್‌ಒ ಕಚೇರಿಯ ‘ಸಿಎಚ್‌ಬಿಎಂಎಸ್‌’ನ ತಂಡವೂ ವರದಿಯನ್ನು ಗಣಕಯಂತ್ರ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುತ್ತಿದೆ. ನಂತರ ಮೊದಲ ಹಂತ, ಎರಡನೇ ಹಂತ, ಮೂರನೇ ಹಂತದ ಸೋಂಕಿತರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಸೋಂಕಿತರ ಮೊಬೈಲ್‌ಗೆ ಕರೆ ಮಾಡಿ ಆರೋಗ್ಯ ಸ್ಥಿತಿಗತಿ ವಿಚಾರಿಸುತ್ತಿದೆ. ತುರ್ತು ಹಾಸಿಗೆ ಬೇಕಾದವರಿಗೆ ಕಾಯ್ದಿರಿಸಲು ಮುಂದಾಗುತ್ತಿದೆ.

ಕೋವಿಡ್‌ ಆರೈಕೆ ಕೇಂದ್ರ, ತಾಲ್ಲೂಕು ಕೋವಿಡ್‌ ಆಸ್ಪತ್ರೆ, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಖಾಸಗಿ ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಾಗಲು ಹಾಸಿಗೆ ಕಾಯ್ದಿರಿಸುವ ಸಂಬಂಧ ತಂಡವೂ ಸೋಂಕಿತರನ್ನು ಪ್ರತ್ಯೇಕವಾಗಿ ವಿಂಗಡಿಸುತ್ತಿದೆ. ಯಾರು ಎಲ್ಲಿಗೆ ದಾಖಲಾಗಬೇಕು ಎಂಬುದನ್ನು ತಂಡವೇ ನಿರ್ಧರಿಸುತ್ತಿದೆ. ಹಾಸಿಗೆ ಕಾಯ್ದಿರಿಸುವ ಅವಶ್ಯಕತೆ ಇಲ್ಲದಿದ್ದರೆ, ಗೃಹ ಕ್ವಾರಂಟೈನ್‌ಗೆ ಸಲಹೆ ನೀಡುತ್ತಿದೆ.

4 ಗಂಟೆಯಷ್ಟೇ ಅವಕಾಶ: ‘ಸೋಂಕಿನ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಆಸ್ಪತ್ರೆಗೆ ಬರುವಂತೆ ಮನವೊಲಿಸುವ ತಂಡ ಪರಿಹಾರ ಪೋರ್ಟಲ್‌ ತೆರೆದು ನೋಂದಣಿ ಖಚಿತಪಡಿಸುತ್ತದೆ. ಒಬ್ಬರ ಹೆಸರಿನಲ್ಲಿ ಹಾಸಿಗೆ ಕಾಯ್ದಿರಿಸಲು 4 ಗಂಟೆ ಮಾತ್ರ ಅವಕಾಶ ನೀಡಲಾಗಿದೆ. ಅಷ್ಟರೊಳಗೆ ಬರದೇ ಇದ್ದರೆ, ಅದನ್ನು ಮತ್ತೊಬ್ಬರ ಹೆಸರಿಗೆ ಕಾಯ್ದಿರಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಂಗನಾಥ್.

‘ಈ ವ್ಯವಸ್ಥೆ ಗ್ರಾಮೀಣ ಭಾಗಕ್ಕೆ ಮಾತ್ರ ಸೀಮಿತವಲ್ಲ. ನಗರ, ಪಟ್ಟಣ ಪ್ರದೇಶದಲ್ಲಿ ವಾಸವಿರುವ ಸೋಂಕಿತರಿಗೂ ಕರೆ ಮಾಡಿ ಕಾಯ್ದಿರಿಸಲಾಗುವುದು. ಹಾಸಿಗೆ ಕೊರತೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರೀಕೃತ ಆಸ್ಪತ್ರೆ ಹಾಸಿಗೆ ನಿರ್ವಹಣೆ ವಿಧಾನ (ಸಿಎಚ್‌ಬಿಎಂಎಸ್‌) ಸಿದ್ಧಪಡಿಸಲಾಗಿದೆ. ಇದಕ್ಕೆ ಯಾರೂ ಕರೆ ಮಾಡುವಂತಿಲ್ಲ. ಸೋಂಕಿತರ ಮಾಹಿತಿ ಪಡೆದು ತಂಡವೇ ನೇರವಾಗಿ ಅವರಿಗೆ ಕರೆ ಮಾಡಲಿದೆ. ಅಂಕಿ–ಸಂಖ್ಯೆಯಲ್ಲಿ ನಿತ್ಯವೂ ವ್ಯತ್ಯಾಸ ಉಂಟಾಗಲಿದೆ’ ಎಂದು ಮಾಹಿತಿ
ನೀಡಿದ್ದಾರೆ.

ಎಲ್ಲೆಲ್ಲಿ ಹಾಸಿಗೆ ಲಭ್ಯ

ಚಿತ್ರದುರ್ಗದ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ 100 ಹಾಸಿಗೆ ಪೈಕಿ 88 ಹಾಸಿಗೆ ಲಭ್ಯವಿದೆ. ಬಿವಿಕೆಎಸ್‌ ವಸತಿನಿಲಯದಲ್ಲಿ 70ರ ಪೈಕಿ 9, ದೇವರಾಜು ಅರಸು ಬಾಲಕರ ಎರಡು ವಸತಿನಿಲಯಗಳಲ್ಲಿ 200ರ ಪೈಕಿ 101, ಚಳ್ಳಕೆರೆಯ ಪಾವಗಡ ರಸ್ತೆಯ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ 60ರ ಪೈಕಿ 48 ಹಾಸಿಗೆ ಲಭ್ಯವಿದೆ.

ಚಳ್ಳಕೆರೆಯ ಕಿತ್ತೂರುರಾಣಿ ಚನ್ನಮ್ಮ ವಸತಿಯುತ ಶಾಲೆಯಲ್ಲಿ 50ರ ಪೈಕಿ 47, ಎನ್.ಮಹದೇವಪುರದ ಇಂದಿರಾ ಗಾಂಧಿ ವಸತಿಯುತ ಶಾಲೆಯಲ್ಲಿ 48ರ ಪೈಕಿ 7, ಹಿರಿಯೂರಿನ ದೇವರಕೊಟ್ಟ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ 200ರ ಪೈಕಿ 73 ಹಾಸಿಗೆ ಕ್ರಮವಾಗಿ ಲಭ್ಯ ಇವೆ.

‘ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕೆಲ ವಸತಿನಿಲಯಗಳಲ್ಲಿ ಹಾಸಿಗೆ ಸೌಲಭ್ಯ ಕಲ್ಪಿಸಲಾಗಿದೆ. ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ ನಂತರ ಬೇರೆಯವರಿಗೆ ಕಾಯ್ದಿರಿಸುವ ಪ್ರಕ್ರಿಯೆ ನಡೆಯಲಿದೆ. ಈ ವ್ಯವಸ್ಥೆಯಲ್ಲಿನ ಎಲ್ಲಾ ಮಾಹಿತಿಯನ್ನು ನಿತ್ಯವೂ ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್‌ (ಎಸ್‌ಎಎಸ್‌ಟಿ) ಪೋರ್ಟಲ್‌ನಲ್ಲಿ ದಾಖಲಿಸಲಾಗುವುದು’ ಎಂದು ಡಾ.ರಂಗನಾಥ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT