ಶುಕ್ರವಾರ, ಜೂನ್ 18, 2021
24 °C

ಗ್ರಾಮಗಳಲ್ಲಿ ಹೆಚ್ಚಿದ ಕೊರೊನಾ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ: ಬೆಂಗಳೂರಿನಿಂದ ಸಾಕಷ್ಟು ಜನರು ತಾಲ್ಲೂಕಿಗೆ ಆಗಮಿಸುತ್ತಿದ್ದು ಗ್ರಾಮಗಳ ಜನರಲ್ಲಿ ಕೊರೊನಾ ವೈರಸ್‌ ಸೋಂಕು ಹರಡುವ ಆತಂಕ ಹೆಚ್ಚಾಗಿದೆ.

ತಾಲ್ಲೂಕಿನ ಬಹುತೇಕ ಗ್ರಾಮಗಳ ಜನರು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದರು. ಕಳೆದ ವರ್ಷ ಲಾಕ್‌ಡೌನ್‌ ಆಗಿದ್ದಾಗ 10,000ಕ್ಕೂ ಹೆಚ್ಚು ಜನರು ಸ್ವಗ್ರಾಮಕ್ಕೆ ವಾಪಸ್‌ ಆಗಿದ್ದರು. ಲಾಕ್‌ಡೌನ್‌ ತೆರವಾದ ನಂತರದಲ್ಲಿ ಬಂದಿದ್ದವರಲ್ಲಿ ಮತ್ತೆ ಹಲವರು ಬೆಂಗಳೂರಿಗೆ ಹೋಗಿದ್ದರು.

‘ಈಗ ಮತ್ತೆ ಕೊರೊನಾ ಸೋಂಕಿನ 2ನೇ ಅಲೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಸೋಂಕಿತರು ಹಾಗೂ ಮೃತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೋವಿಡ್‌ ಪ್ರಕರಣಗಳನ್ನು ನಿಯಂತ್ರಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಮೇ 12ರ ವರೆಗೆ ಲಾಕ್‌ಡೌನ್‌ ಘೋಷಿಸಿದೆ. ಇದರಿಂದಾಗಿ ಬೆಂಗಳೂರಿನಲ್ಲಿ 14 ದಿನಗಳ ಕಾಲ ದುಡಿಯಲಿಕ್ಕೆ ಕೆಲಸ ಇಲ್ಲದಂತಾಗಿದೆ. ದುಡಿಮೆ ಇಲ್ಲದೆ ಜೀವನ ನಡೆಸುವುದು ಹಾಗೂ ಕಾಲ ಕಳೆಯುವುದು ಕಷ್ಟಸಾಧ್ಯ ಎಂದು ವಾಪಸ್‌ ಬಂದೆವು’ ಎನ್ನುತ್ತಾರೆ ಪಟ್ಟಣದ ಗಿರೀಶ್‌.

ಸೋಮವಾರ ಸಂಜೆ ಸರ್ಕಾರ ಲಾಕ್‌ಡೌನ್‌ ಮಾಡಲು ತೀರ್ಮಾನಿಸುತ್ತಿದ್ದಂತೆ ಹಲವರು ಸ್ವಗ್ರಾಮಗಳಿಗೆ ಬರಲು ಸಿದ್ಧರಾದರು. ಸೋಮವಾರ ರಾತ್ರಿಯಿಂದಲೂ ಹಲವರು ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌, ಕಾರು, ಟಾಟಾ ಏಸ್‌, ಟ್ರ್ಯಾಕ್ಸ್‌, ಬೈಕ್‌ಗಳಲ್ಲಿ ಬಂದರು. ಮತ್ತೆ ಕೆಲವರು ಗಂಟುಮೂಟೆ ಕಟ್ಟಿಕೊಂಡು ಬಾಡಿಗೆ ವಾಹನದಲ್ಲಿ ಆಗಮಿಸುತ್ತಿದ್ದರು. ಇದರಿಂದ ಪಟ್ಟಣದಲ್ಲಿ ಮಂಗಳವಾರ ವಾಹನ ದಟ್ಟಣೆ ಹೆಚ್ಚಾಯಿತು.

ಬೆಂಗಳೂರಿನಿಂದ ಬರುವವರನ್ನು ಹಳ್ಳಿಯ ಜನರು ಅನುಮಾನದಿಂದ ನೋಡುತ್ತಿದ್ದರು. ಆತ್ಮೀಯರು ಸಹಜವಾಗಿ ಮಾತನಾಡಿಸಲಿಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರಿನಿಂದ ಬಂದವರಿಗೆ ಊರೊಳಗೆ ಸುತ್ತಾಡಬೇಡಿ. ಬೇರೆ ಮನೆಗೆ ಹೋಗಬೇಡಿ ಎಂದು ಕೆಲವು ಹಳ್ಳಿ ಜನರು ಹೇಳುತ್ತಿದ್ದಾರೆ. ಹಳ್ಳಿಗಳಲ್ಲೀಗ ಕೊರೊನಾ ಭೀತಿ ಮನೆಮಾಡಿದೆ. ಜನರ ಹಿತಕಾಪಾಡಲು ತಾಲ್ಲೂಕು ಆಡಳಿತ ಸದಾ ಕಾಳಜಿ ವಹಿಸಬೇಕು ಎಂಬುದು ನಾಗರಿಕರ ಮನವಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು