ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕೋವಿಡ್ ಆಸ್ಪತ್ರೆ ಸುತ್ತಲೂ ಸೀಲ್‌ಡೌನ್

Last Updated 9 ಮೇ 2020, 14:57 IST
ಅಕ್ಷರ ಗಾತ್ರ

ಚಿತ್ರದುರ್ಗ: ಗುಜರಾತಿನ ಅಹಮದಾಬಾದ್‍ನಿಂದ ಜಿಲ್ಲೆಗೆ ಬಂದ 15 ತಬ್ಲಿಗಿಗಳ ಪೈಕಿ 6 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಅವರನ್ನು ಕೋವಿಡ್-19 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಕಾರಣದಿಂದಾಗಿ ಆಸ್ಪತ್ರೆಯ ಸುತ್ತಲೂ ಸೀಲ್‌ಡೌನ್ ಮಾಡಲಾಗಿದೆ.

ಜಿಲ್ಲಾ ಆಸ್ಪತ್ರೆಗೆ ಸಂಪರ್ಕ ಇರುವ ಜೋಗಿಮಟ್ಟಿ ರಸ್ತೆ, ರಂಗಯ್ಯನ ಬಾಗಿಲು, ಆಸ್ಪತ್ರೆ ರಸ್ತೆ ಮಾರ್ಗಗಳನ್ನು ಪೋಲ್ಸ್‌ ಹಾಗೂ ಬ್ಯಾರಿಕೇಡ್‌ಗಳಿಂದ ಸಂಪೂರ್ಣ ಬಂದ್‌ ಮಾಡಲಾಗಿದ್ದು, ಜಿಲ್ಲಾಡಳಿತ ಹೈ ಅಲರ್ಟ್‌ ಘೋಷಣೆ ಮಾಡಿದೆ. ಸೋಂಕು ಹರಡದಂತೆ ತಡೆಯಲು ಕಟ್ಟೆಚ್ಚರ ವಹಿಸಲಾಗಿದೆ. ಜನಸಂಚಾರ ನಿಷೇಧಿಸಲಾಗಿದೆ.

ಪೋಲ್ಸ್ ಹಾಗೂ ಬ್ಯಾರಿಕೇಡ್‌ ದಾಟಿ ಯಾರೂ ಒಳಗೆ ಪ್ರವೇಶಿಸದಂತೆ ಮೂರು ಸ್ಥಳಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ. ಸಿಬ್ಬಂದಿ ಈಗ ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದಾರೆ. ಆಸ್ಪತ್ರೆ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯನ್ನು ಹೈ ಅಲರ್ಟ್‌ ಪ್ರದೇಶವನ್ನಾಗಿ ಮಾಡಲಾಗಿದೆ.

ಆಸ್ಪತ್ರೆಯ ಹಿಂಭಾಗದಲ್ಲಿ ಸಾಕಷ್ಟು ಮನೆಗಳು ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಲಾಗಿದೆ. ಸಮೀಪದಲ್ಲೇ ಇದ್ದ ಅಂಗಡಿ-ಮುಂಗಟ್ಟು, ಐದಾರು ಔಷಧಿ ಅಂಗಡಿ, ಕ್ಲಿನಿಕ್‌ವೊಂದನ್ನು ಮುಚ್ಚಿಸಲಾಗಿದೆ. ಚಿತ್ರದುರ್ಗ ಹಸಿರು ವಲಯದಲ್ಲಿ ಇದ್ದ ವೇಳೆ ರಂಗಯ್ಯನ ಬಾಗಿಲಿನಿಂದ ಜೋಗಿಮಟ್ಟಿ ರಸ್ತೆಗೆ ತಿರುವು ಪಡೆಯುವವರೆಗೂ ತರಕಾರಿ ಮಾರಾಟಕ್ಕೂ ಇಲ್ಲಿ ಅವಕಾಶ ನೀಡಲಾಗಿತ್ತು. ನೂರಾರು ಜನ ನಿತ್ಯ ತರಕಾರಿ ಖರೀದಿಸಲು ಇಲ್ಲಿಗೆ ಬರುತ್ತಿದ್ದರು. ಈಗ ಅದು ಕೂಡ ಮೊದಲಿದ್ದ ತ್ಯಾಗರಾಜ ಬೀದಿಯ ಮಾರುಕಟ್ಟೆಗೆ ಸ್ಥಳಾಂತರವಾಗಲಿದೆ.

ಶುಕ್ರವಾರ ಮತ್ತು ಶನಿವಾರ ತಲಾ ಮೂವರು ತಬ್ಲಿಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ ನಂತರ ಜೋಗಿಮಟ್ಟಿ ರಸ್ತೆ, ದೊಡ್ಡಪೇಟೆ, ಕರುವಿನಕಟ್ಟೆ ವೃತ್ತ, ಕರುವಿನಕಟ್ಟೆ ಶಾಲೆ ಪಕ್ಕದ ಕೋಟೆ ರಸ್ತೆ ಮಾರ್ಗದಲ್ಲಿನ ಅನೇಕ ಜನರು ಆತಂಕಕ್ಕೆ ಒಳಗಾಗಿದ್ದರು. ಸೀಲ್‌ಡೌನ್ ಬಳಿಕ ಜನರಿಗೆ ಕೊಂಚ ನೆಮ್ಮದಿ ಸಿಕ್ಕಿದೆ.

ಜೋಗಿಮಟ್ಟಿ ರಸ್ತೆ ಮಾರ್ಗದಿಂದ ಕೋವಿಡ್-19 ಆಸ್ಪತ್ರೆ ಹಿಂಭಾಗವಿರುವ ಮನೆಗಳಿಗೆ ನಡೆದುಕೊಂಡು ಹೋಗಲು ಕೆಲವರು ಮುಂದಾದ ವೇಳೆ ಪೊಲೀಸರು ತಡೆದು ಎಲ್ಲಿಗೆ ಎಂದು ಪ್ರಶ್ನಿಸುತ್ತಿದ್ದರು. ಆಸ್ಪತ್ರೆ ಸಮೀಪ ಹೋಗದಂತೆ ಎಚ್ಚರಿಕೆ ನೀಡಿದರು. ಈ ಭಾಗದ ಜನರೀಗ ಅಗತ್ಯ ಸಾಮಗ್ರಿ ತರಲು ತಾರಾ ಇನ್ಸ್‌ಟಿಟ್ಯೂಟ್ ಪಕ್ಕದ ಕೋಟೆ ರಸ್ತೆ ಮಾರ್ಗ, ಉಜ್ಜಿನಮಠದ ರಸ್ತೆ ಮಾರ್ಗ ಅವಲಂಬಿಸಿದ್ದು, ಇಲ್ಲಿ ಸಂಚಾರ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT