ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

98,000 ಜನರಿಗೆ ಬೂಸ್ಟರ್‌ ಡೋಸ್‌

ಕೋವಿಡ್‌ ನಾಲ್ಕನೇ ಅಲೆಯ ಆತಂಕ, ಚುರುಕು ಪಡೆದ ಲಸಿಕೀಕರಣ
Last Updated 23 ಜೂನ್ 2022, 2:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕಿನ ನಾಲ್ಕನೇ ಅಲೆಯ ಆತಂಕ ಮೂಡುತ್ತಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಲಸಿಕೀಕರಣ ಚುರುಕು ಪಡೆಯುತ್ತಿದೆ. 98 ಸಾವಿರ ಜನರು ಮುನ್ನೆಚ್ಚರಿಕೆ ಲಸಿಕೆ (ಬೂಸ್ಟರ್‌ ಡೋಸ್‌) ಪಡೆದಿದ್ದು, ಶೇ 38ರಷ್ಟು ಪ್ರಗತಿ ಸಾಧಿಸಿದೆ.

ಕೋವಿಡ್‌ನಿಂದ ಪಾರಾಗಲು 12 ವರ್ಷ ಮೇಲಿನವರಿಗೆ ಲಸಿಕೆ ನೀಡಲಾಗುತ್ತಿದೆ. 12 ಹಾಗೂ 15 ವರ್ಷದೊಳಗಿನ ಮಕ್ಕಳಿಗೆ ಮೊದಲ ಹಾಗೂ ಎರಡನೇ ಡೋಸ್‌ ನೀಡುವತ್ತ ಗಮನ ಹರಿಸಲಾಗಿದೆ. 18 ವರ್ಷ ಮೇಲಿನ ಎಲ್ಲ ಅರ್ಹರಿಗೂ ಬೂಸ್ಟರ್‌ ಡೋಸ್‌ ನೀಡುವ ಕಾರ್ಯವನ್ನು ಆರೋಗ್ಯ ಇಲಾಖೆ ಮುಂದುವರಿಸಿದೆ. ಈವರೆಗೆ ಜಿಲ್ಲೆಯಲ್ಲಿ 28 ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ.

ಮೊದಲ, ಎರಡನೇ ಕೋವಿಡ್‌ ಅಲೆಯನ್ನು ಎದುರಿಸಿದ ಜಿಲ್ಲೆಯಲ್ಲಿ ಮೂರನೇ ಅಲೆಯ ಪ್ರಭಾವ ತೀರಾ ಕಡಿಮೆ ಇತ್ತು. ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ನಾಲ್ಕನೇ ಅಲೆಯ ಸಾಧ್ಯತೆಯ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಬೂಸ್ಟರ್‌ ಡೋಸ್‌ ಪಡೆದರೆ ಕೋವಿಡ್‌ ಸಂಕಷ್ಟದಿಂದ ಪಾರಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ನಾಲ್ಕನೇ ಅಲೆಯ ಬಗ್ಗೆ ತಜ್ಞರು ಸೂಚನೆ ನೀಡಿದ್ದಾರೆ. ಕೊರೊನಾ ಸೋಂಕಿನ ಹೊಸ ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ, ಜನರು ಆತಂಕಪಡುವ ಅಗತ್ಯವಿಲ್ಲ. ಬೂಸ್ಟರ್‌ ಡೋಸ್‌ ಲಸಿಕೆ ಪಡೆದರೆ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿದೆ. ಅರ್ಹರ ಮನವೊಲಿಸಿ ಲಸಿಕೆ ನೀಡಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ರಂಗನಾಥ್‌.

ಕೋವಿಡ್ ಲಸಿಕೆಯಲ್ಲಿ ಜಿಲ್ಲೆಯ ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕು ಪ್ರಗತಿ ತೃಪ್ತಿದಾಯಕವಾಗಿ ಇರಲಿಲ್ಲ. ಲಸಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ ಆರೋಗ್ಯ ಇಲಾಖೆ ಮನೆ ಬಾಗಿಲಿಗೆ ತೆರಳಿ ಮೊದಲ ಹಾಗೂ ಎರಡನೇ ಡೋಸ್‌ ಲಸಿಕೆ ನೀಡಿದೆ. ಬೂಸ್ಟರ್‌ ಡೋಸ್‌ ಲಸಿಕೆ ನೀಡಲು ಲಸಿಕಾ ಮಿತ್ರ ಸಿಬ್ಬಂದಿ ಮನೆ–ಮನೆಗೆ ಭೇಟಿ ನೀಡುತ್ತಿದ್ದಾರೆ. 60 ವರ್ಷ ಮೇಲಿನವರು ಸೇರಿದಂತೆ ಎಲ್ಲ ಅರ್ಹರಿಗೂ ಲಸಿಕೆ ನೀಡಲಾಗುತ್ತಿದೆ.

‘ಸಂಘ–ಸಂಸ್ಥೆಗಳ ನೆರವಿನಿಂದ ವಿಶೇಷ ಅಭಿಯಾನ ನಡೆಸಿ ಲಸಿಕೆಯಲ್ಲಿ ಪ್ರಗತಿ ಸಾಧಿಸಲಾಗಿದೆ. ರಾಜ್ಯದಲ್ಲಿ ಬೂಸ್ಟರ್‌ ಡೋಸ್‌ ಪಡೆದವರ ಸರಾಸರಿ ಪ್ರಮಾಣ ಶೇ 29 ಮಾತ್ರ. ರಾಜ್ಯದ ಸರಾಸರಿಗಿಂತ ಜಿಲ್ಲೆಯ ಪ್ರಗತಿ ಹೆಚ್ಚಿದೆ. ಎರಡನೇ ಲಸಿಕೆ ಪಡೆದ 9 ತಿಂಗಳ ಬಳಿಕ ಮುನ್ನೆಚ್ಚರಿಕೆ ಡೋಸ್‌ ನೀಡಲಾಗುತ್ತದೆ. ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಲಸಿಕೆಗಳು ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಆಗುತ್ತಿವೆ’ ಎಂದು ರಂಗನಾಥ್‌ ವಿವರಿಸಿದರು.

..............

ಕೊರೊನಾ ಸೋಂಕು ಏರಿಕೆ ಇಲ್ಲ

ಬೆಂಗಳೂರು ಸೇರಿ ಇತರ ಮಹಾನಗರಗಳಲ್ಲಿ ಕೊರೊನಾ ಸೋಂಕು ಏರುಗತಿಯಲ್ಲಿ ಸಾಗುತ್ತಿದೆ. ಪಾಸಿಟಿವಿಟಿ ಪ್ರಮಾಣವೂ ಹೆಚ್ಚುತ್ತಿದೆ. ಆದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹೊಸ ಪ್ರಕರಣಗಳು ಕಡಿಮೆ.

ನಿತ್ಯ ಸರಾಸರಿ 700 ಜನರನ್ನು ಪರೀಕ್ಷೆಗೆ ಒಳಪಡಿಸುವಂತೆ ಸರ್ಕಾರ ಗುರಿ ನಿಗದಿಪಡಿಸಿದೆ. ಇದಕ್ಕಿಂತ ಹೆಚ್ಚು ಜನರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಆದರೂ, ಪಾಸಿಟಿವಿಟಿ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಜೂನ್‌ 17ರನಂತರ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

..........

ಮಕ್ಕಳ ಲಸಿಕೆಯಲ್ಲಿಯೂ ಪ್ರಗತಿ

12ರಿಂದ 14 ವರ್ಷದ 53,342 ಮಕ್ಕಳಲ್ಲಿ ಎಲ್ಲರೂ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಶೇ 39ರಷ್ಟು ಮಕ್ಕಳಿಗೆ ಮಾತ್ರ ಎರಡನೇ ಡೋಸ್‌ ನೀಡಲಾಗಿದೆ.

15ರಿಂದ 17 ವರ್ಷದ 85,334 ಮಕ್ಕಳಲ್ಲಿ 75 ಸಾವಿರ ಮಕ್ಕಳು ಮೊದಲ ಹಾಗೂ 67 ಸಾವಿರ ಮಕ್ಕಳು ಎರಡನೇ ಡೋಸ್‌ ಪಡೆದಿದ್ದಾರೆ. 18 ವರ್ಷ ಮೇಲಿನ 12.5 ಲಕ್ಷ ಜನರಲ್ಲಿ ಎಲ್ಲರೂ ಮೊದಲ ಮತ್ತು ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ.

.................

- ಸಂಭಾವ್ಯ ಅಲೆಗೆ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಏಳು ಖಾಸಗಿ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗೆ ದಾಖಲು ಮಾಡಿಕೊಳ್ಳುವ ವ್ಯವಸ್ಥೆ ಇದೆ.

-ಡಾ.ಆರ್‌. ರಂಗನಾಥ್‌, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT