ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಿ ಆದೇಶ ಪಾಲಿಸಿದೆ ಅಷ್ಟೇ..: ಮೂರು ವರ್ಷದ ಬಾಲಕಿಯ ಕೊಂದ ಪೂಜಾರಿ ಹೇಳಿಕೆ

ಮೂರು ವರ್ಷದ ಬಾಲಕಿ ಕೊಂದ ಪೂಜಾರಿ ಹೇಳಿಕೆ
Last Updated 28 ಸೆಪ್ಟೆಂಬರ್ 2020, 16:50 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ನಿಜಕ್ಕೂ ನನಗೆ ಏನೂ ಗೊತ್ತಿಲ್ಲ. ಮಗು ಹೇಗೆ ಮೃತಪಟ್ಟಿದೆ ಎಂಬುದು ಅರ್ಥವಾಗಿಲ್ಲ. ಎಲ್ಲಮ್ಮ ದೇವಿ ಆದೇಶದಂತೆ ನಡೆದುಕೊಂಡಿದ್ದೇನೆ...’

ದೆವ್ವ ಬಿಡಿಸುವ ನೆಪದಲ್ಲಿ ಮೂರು ವರ್ಷದ ಬಾಲಕಿ ಪೂರ್ವಿಕಾಳನ್ನು ಕೋಲಿನಿಂದ ಹೊಡೆದು ಕೊಲೆ ಮಾಡಿದ ಆರೋಪಿ ರಾಕೇಶ್‌, ಪೊಲೀಸರಿಗೆ ನೀಡಿದ ಹೇಳಿಕೆ ಇದು. ಆರೋಪಿಯನ್ನು ವಿಚಾರಣೆ ನಡೆಸಿದ ಪೊಲೀಸರು ಸೋಮವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಕೃತ್ಯಕ್ಕೆ ನೆರವಾದ ರಾಕೇಶ್‌ ಸಹೋದರ ಪರಶುರಾಂ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೈಮೇಲೆ ಎಲ್ಲಮ್ಮ ದೇವಿ ಬರುತ್ತಿದೆ ಎಂದು 19 ವರ್ಷದ ರಾಕೇಶ್‌, ಹೊಳಲ್ಕೆರೆ ತಾಲ್ಲೂಕಿನ ಅಜ್ಜಿ ಕ್ಯಾತನಹಳ್ಳಿ ಗ್ರಾಮಸ್ಥರನ್ನು ನಂಬಿಸಿದ್ದ. ಮನೆಯ ಸಮೀಪದ ಹುತ್ತದ ಬಳಿ ಗುಡಿಸಲು ನಿರ್ಮಿಸಿಕೊಂಡು ಕುಟೀರದ ಸ್ವರೂಪ ನೀಡಿದ್ದ. ಅಲ್ಲಿಯೇ ಪೂಜೆ, ಧ್ಯಾನದಲ್ಲಿ ಮಗ್ನನಾಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡಿದ್ದ ರಾಕೇಶ್‌, ಮೈ ಮೇಲೆ ದೇವರು ಬಂದಂತೆ ನಟಿಸುತ್ತಿದ್ದ. ಮೂರು ತಿಂಗಳಿಂದ ಈಚೆಗೆ ಇದನ್ನು ಗ್ರಾಮಸ್ಥರು ನಂಬಿದ್ದರು. ಮಳೆ ಸೇರಿದಂತೆ ಆಗು–ಹೋಗುಗಳ ಬಗ್ಗೆ ಭವಿಷ್ಯ ನುಡಿಯುತ್ತಿದ್ದ. ಕಾಕತಾಳೀಯ ಎಂಬಂತೆ ಇವುಗಳಲ್ಲಿ ಕೆಲವು ನಿಜವಾಗುತ್ತಿದ್ದವು. ದೇವಿ ಮೈಮೇಲೆ ಬಂದಾಗ ದೆವ್ವ, ಭೂತ ಬಿಡಿಸುವುದಾಗಿ ಹೇಳಿಕೊಂಡಿದ್ದ. ಇದು ಪೂರ್ವಿಕಾ ಪೋಷಕರಾದ ಪ್ರವೀಣ್‌ ಹಾಗೂ ಶಾಮಲಾ ದಂಪತಿಯನ್ನು ಪ್ರಭಾವಿಸಿತ್ತು ಎಂದು ಮೂಲಗಳು ವಿವರಿಸಿವೆ.

ರಾಕೇಶ್‌ ಸಹೋದರನ ಬಳಿ ಪ್ರವೀಣ್‌ ಪುತ್ರಿಯ ಸಮಸ್ಯೆಯನ್ನು ಹೇಳಿಕೊಂಡಿದ್ದ. ಆಗಾಗ ಭಯ ಬೀಳುವುದು, ಊಟ ಮಾಡದಿರುವ ಬಗ್ಗೆ ಆತಂಕ ತೋಡಿಕೊಂಡಿದ್ದ. ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಕುಟೀರಕ್ಕೆ ಕರೆದೊಯ್ದು ತಿಂಗಳ ಹಿಂದೆ ಪೂಜೆ ಮಾಡಿಸಿದ್ದರು. ಜ್ವರ ಕಡಿಮೆ ಆಗಿದ್ದರಿಂದ ರಾಕೇಶ್ ಮೇಲಿನ ಭರವಸೆ ಇಮ್ಮಡಿಗೊಂಡಿತ್ತು.

ಬೆಚ್ಚಿ ಬೀಳುತ್ತಿದ್ದ ಬಾಲಕಿಗೆ ವಾರದ ಹಿಂದೆ ಪೂಜೆ ಆರೋಪಿ ಮಾಡಿದ್ದ. ಆದರೂ, ಬಾಲಕಿಯಲ್ಲಿ ಭಯ ಕಡಿಮೆಯಾಗಿರಲಿಲ್ಲ. ಊಟ ಮಾಡುವುದನ್ನು ಕಡಿಮೆ ಮಾಡಿದ್ದಳು. ಬಾಲಕಿಗೆ ಹಿಡಿದ ದೆವ್ವವನ್ನು ಬಿಡಿಸಬೇಕು ಎಂದು ರಾಕೇಶ್ ಹೇಳಿದ್ದ. ಭಾನುವಾರ ಬೆಳಿಗ್ಗೆ ಕುಟೀರಕ್ಕೆ ಪ್ರವೀಣ್‌ ದಂಪತಿ ಮಗುವನ್ನು ಕರೆದೊಯ್ದಿದ್ದರು. ದೆವ್ವ ಬಿಡಿಸುವ ನೆಪದಲ್ಲಿ ಮಗುವಿಗೆ ಬೆತ್ತದಿಂದ ಏಟು ನೀಡಿದ್ದನು. ಬಾಲಕಿ ಕಿರುಚಿಕೊಂಡರೂ ಪೂಜಾರಿ ಹೊಡೆಯುವುದು ನಿಲ್ಲಿಸಿರಲಿಲ್ಲ. ಮಗುವಿನ ಆಕ್ರಂದನ ಕೇಳಿಸಿದರೂ ಕುಟೀರದ ಹೊರಗಿದ್ದ ಪೋಷಕರು ದೆವ್ವ ಬಿಡುತ್ತಿದೆ ಎಂದೇ ನಂಬಿದ್ದರು ಎನ್ನುತ್ತಾರೆ ಪೊಲೀಸರು.

ಜಿಲ್ಲೆಯ ಮೊದಲ ಪ್ರಕರಣ

ಮೌಢ್ಯ ನಿಷೇಧ ಕಾಯ್ದೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ ಎಂದು ಪೊಲೀಸ್‌ ಇಲಾಖೆ ಮಾಹಿತಿ ನೀಡಿದೆ.

ಕಾಯ್ದೆಯು ಇದೇ ಜನವರಿ 23ರಿಂದ ರಾಜ್ಯದಲ್ಲಿ ಜಾರಿಯಾಗಿದೆ. ಮಾಟ–ಮಂತ್ರ ಮಾಡುವುದು, ದೆವ್ವ ಬಿಡಿಸುವುದು ಸೇರಿದಂತೆ ಹಲವು ಆಚರಣೆಗಳನ್ನು ನಿಷೇಧಿಸಲಾಗಿದೆ. ದೆವ್ವ ಬಿಡಿಸುವ ನೆಪದಲ್ಲಿ ಹಿಂಸೆ ನೀಡುವುದನ್ನು ಅಪರಾಧ ಎಂದು ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT