ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ ಕಾಮಗಾರಿ ಪರಿಶೀಲನೆ: ಸಂಚಾರಿ ಮೇವು ಬ್ಯಾಂಕ್‌ಗೆ ಸಿದ್ಧತೆ

Last Updated 6 ಮೇ 2019, 11:42 IST
ಅಕ್ಷರ ಗಾತ್ರ

ಚಿತ್ರದುರ್ಗ: ರೈತರ ಮನೆಬಾಗಿಲಿಗೆ ಮೇವು ಪೂರೈಕೆ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಸಂಚಾರಿ ಮೇವು ಬ್ಯಾಂಕ್‌ ಪ್ರಾರಂಭಿಸಿದೆ. ಸಹಾಯವಾಣಿಗೆ ಕರೆ ಮಾಡಿದ ಕೆಲವೇ ಗಂಟೆಗಳಲ್ಲಿ ರೈತರ ಕೊಟ್ಟಿಗೆಗೆ ಮೇವು ತಲುಪಲಿದೆ.

ಬರ ಪರಿಹಾರ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

‘ಜಿಲ್ಲೆಯಲ್ಲಿ ಈಗಾಗಲೇ 6 ಗೋಶಾಲೆ ಆರಂಭಿಸಲಾಗಿದ್ದು, 8 ಮೇವು ಬ್ಯಾಂಕ್‌ ಸ್ಥಾಪಿಸಲಾಗಿದೆ. ರೈತರ ಮನೆಬಾಗಿಲಿಗೆ ಮೇವು ಪೂರೈಕೆ ಮಾಡುವ ವ್ಯವಸ್ಥೆ ಪಕ್ಕದ ತುಮಕೂರು ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಇದೇ ವ್ಯವಸ್ಥೆಯನ್ನು ಚಿತ್ರದುರ್ಗ ಜಿಲ್ಲೆಯೂ ಅಳವಡಿಸಿಕೊಳ್ಳುತ್ತಿದೆ’ ಎಂದರು.

‘ಮೇವು ಪೂರೈಕೆಗೆ ಅಗತ್ಯವಿರುವ ವಾಹನಗಳಿಗೆ ಟೆಂಡರ್‌ ಕರೆಯಲಾಗಿದೆ. ಕೆಲವೇ ದಿನಗಳಲ್ಲಿ ಇದಕ್ಕೆ ಚಾಲನೆ ನೀಡಲಾಗುತ್ತದೆ. ಪ್ರತಿ ಕೆ.ಜಿ. ಮೇವಿಗೆ ರೈತರಿಂದ ₹ 2 ನಿರ್ವಹಣಾ ವೆಚ್ಚವನ್ನು ಪಡೆಯಲಾಗುತ್ತದೆ. ತಾಲ್ಲೂಕುವಾರು ವಾಹನ ವ್ಯವಸ್ಥೆ ಮಾಡಲಾಗುತ್ತಿದ್ದು, ಪ್ರತಿ ಹಳ್ಳಿಗೆ ವಾರಕ್ಕೆ ಒಮ್ಮೆಯಾದರೂ ಸಂಚಾರಿ ಮೇವು ಬ್ಯಾಂಕ್‌ ತೆರಳಲು ಸಾಧ್ಯವಾಗುವಂತೆ ಮಾರ್ಗಗಳನ್ನು ವಿನ್ಯಾಸ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

‘ಮೇವು ಲಭ್ಯತೆಗೆ ಸಂಬಂಧಿಸಿದಂತೆ ಪಶುಸಂಗೋಪನಾ ಇಲಾಖೆ ಈಗಾಗಲೇ ಸಮೀಕ್ಷೆ ನಡೆಸಿದೆ. ಬರ ಪರಿಹಾರಕ್ಕಾಗಿ ಪ್ರತಿ ತಾಲ್ಲೂಕಿನಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ. ಸಹಾಯವಾಣಿಗೆ ಕರೆ ಮಾಡಿದ ರೈತರ ಮನೆ ಬಾಗಿಲಿಗೆ ಮೇವು ಕಳುಹಿಸಲಾಗುತ್ತದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಾಹನದೊಂದಿಗೆ ಗ್ರಾಮ ಲೆಕ್ಕಿಗ ಹಾಗೂ ಪೊಲೀಸ್‌ ಸಿಬ್ಬಂದಿ ಇರುತ್ತಾರೆ’ ಎಂದು ಹೇಳಿದರು.

ಗ್ರಾಮಗಳಿಗೆ ಖುದ್ದು ಭೇಟಿ ನೀಡುವಂತೆ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ‘ಮೇವಿನ ಲಭ್ಯತೆ, ಜಾನುವಾರುಗಳ ಸ್ಥಿತಿಯ ಅವಲೋಕನ ಮಾಡಿ ವಾರದೊಳಗೆ ವರದಿ ಸಲ್ಲಿಸಬೇಕು. ಸಂಚಾರಿ ವಾಹನ ಭೇಟಿ ನೀಡುವ ಗ್ರಾಮ, ಪೂರೈಸಿದ ಮೇವಿನ ಪ್ರಮಾಣ, ರೈತರು ಹಾಗೂ ಜಾನುವಾರು ಸಂಖ್ಯೆಯ ವಿವರವುಳ್ಳ ದೈನಂದಿನ ವರದಿಯನ್ನು ಕಚೇರಿಗೆ ಸಲ್ಲಿಸಬೇಕು’ ಎಂದು ತಾಕೀತು ಮಾಡಿದರು.

ಗೋಕಟ್ಟೆಗೆ ನೀರು ತುಂಬಿಸಿ

ಜಾನುವಾರುಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಗೋಕಟ್ಟೆ ನಿರ್ಮಿಸಲಾಗಿದೆ. ಆಯಾ ಗ್ರಾಮ ಪಂಚಾಯತಿ ಪಿಡಿಒಗಳು ತಪ್ಪದೆ ಗೋಕಟ್ಟೆಗಳಿಗೆ ನೀರು ತುಂಬಿಸಬೇಕು. ಸ್ಥಳೀಯವಾಗಿ ನೀರು ಲಭ್ಯವಿಲ್ಲದಿದ್ದಲ್ಲಿ, ಟ್ಯಾಂಕರ್ ಮೂಲಕ ತುಂಬಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಹಿಂದಿನ ಸಭೆಯಲ್ಲಿಯೇ ಸೂಚನೆ ನೀಡಿದರೂ ಉದಾಸೀನ ತೋರಲಾಗುತ್ತಿದೆ. ಇಂತಹ ಕಾರ್ಯವೈಖರಿ ಇನ್ನು ಮುಂದೆ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಗೋಕಟ್ಟೆಯ ನೀರನ್ನು ಬಟ್ಟೆ ತೊಳೆಯಲು ಉಪಯೋಗಿಸುತ್ತಿರುವುದು ಕಂಡುಬಂದಿದೆ. ಸೋಪು ಮಿಶ್ರಣವಾದ ನೀರನ್ನು ಜಾನುವಾರು ಕುಡಿಯುವುದಿಲ್ಲ. ಗೋಕಟ್ಟೆಗಳಲ್ಲಿ ಬಟ್ಟೆ ತೊಳೆಯದಂತೆ ಮಹಿಳೆಯರಿಗೆ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT