ಸೋಮವಾರ, ಸೆಪ್ಟೆಂಬರ್ 20, 2021
26 °C
ಗ್ರಾಮ ವಾಸ್ತವ್ಯದ ನಂತರದ ಸ್ಥಿತಿ–ಗತಿ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ

ಮಗುವಿಗೆ ಜಿಲ್ಲಾಧಿಕಾರಿ ಹೆಸರಿಡಲು ಪೋಷಕರ ನಿರ್ಧಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಹೂಡಿದ್ದ ಗಡಿಗ್ರಾಮ ಕಣಕುಪ್ಪೆಗೆ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಮನ್ನೀಕೇರಿ ಭೇಟಿ ನೀಡಿ ಮಾಹಿತಿ ಪಡೆದರು.

ಗ್ರಾಮವಾಸ್ತವ್ಯ ಸಮಯದಲ್ಲಿ ಗ್ರಾಮದ ನಾಗವೇಣಿ ಎಂಬ ಗರ್ಭಿಣಿ ಅಪರೂಪದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದಕ್ಕೆ ನೆರವು ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿ ಆಲಿಸಿದ ಜಿಲ್ಲಾಧಿಕಾರಿ ರಾಜ್ಯಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಔಷಧ ವ್ಯವಸ್ಥೆ ಮಾಡಿದ್ದರು.

ಗರ್ಭಿಣಿಗೆ ತೀವ್ರ ರಕ್ತದೊತ್ತಡದ ಸಮಸ್ಯೆ ಇತ್ತು. 6 ತಿಂಗಳ ಕಾಲ ಜಿಲ್ಲಾಧಿಕಾರಿ ಸೂಚನೆಯಂತೆ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಸಾವಿರಾರು ರೂಪಾಯಿ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗಿದೆ. 12 ದಿನಗಳ ಹಿಂದೆ ಹೆರಿಗೆಯಾಗಿದ್ದು, ಹೆಣ್ಣುಮಗು ಜನಿಸಿದೆ. ಮಗುವಿಗೆ ಜಿಲ್ಲಾಧಿಕಾರಿಯ ಕವಿತಾ ಹೆಸರಿಡಲು ನಾಗವೇಣಿ–ಓಬಳೇಶ್ ದಂಪತಿ ತೀರ್ಮಾನಿಸಿದ್ದಾರೆ ಎಂದು ರಾಂಪುರ ಸಮುದಾಯ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮಧುಕುಮಾರ್ ಮಾಹಿತಿ ನೀಡಿದರು.

ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ, ಗ್ರಾಮವಾಸ್ತವ್ಯ ನಂತರ ಆಗಿರುವ ಬದಲಾವಣೆ ಬಗ್ಗೆ ಮತ್ತು ಅಗತ್ಯವಿರುವ ಸೌಲಭ್ಯಗಳ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದರು. ಇದಕ್ಕೂ ಮೊದಲು ದೇವಸಮುದ್ರ ಹೋಬಳಿಯ ವೆಂಕಟಾಪುರ ಸಮೀಪ ಮರಳು ಗುತ್ತಿಗೆ ನೀಡುವ ಸಲುವಾಗಿ ಗ್ರಾಮಸ್ಥರ ಅಹವಾಲು ಆಲಿಸಲು ಜನಸಂಪರ್ಕ ಸಭೆ ನಡೆಸಿದರು. ತಹಶೀಲ್ದಾರ್ ಸುರೇಶ್ ಕುಮಾರ್, ಶೀರಸ್ತೇದಾರ್ ಗೋಪಾಲ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು