ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಥಿಪಂಜರ ಪತ್ತೆ ಪ್ರಕರಣ: ಸಾಲುಸಾಲು ನೋವಿಗೆ ಔಷಧಿಯಾಯ್ತಾ ‘ಸಾವು’?

ತಲ್ಲಣ ಸೃಷ್ಟಿಸಿದ ಅಸ್ಥಿಪಂಜರ ಪತ್ತೆ ಪ್ರಕರಣ: ಪ್ರಶ್ನೆಗಳ ಸರಮಾಲೆ
ಕೆ.ಪಿ.ಓಂಕಾರಮೂರ್ತಿ
Published 30 ಡಿಸೆಂಬರ್ 2023, 7:02 IST
Last Updated 30 ಡಿಸೆಂಬರ್ 2023, 7:02 IST
ಅಕ್ಷರ ಗಾತ್ರ

ಚಿತ್ರದುರ್ಗ: ಮನೆಯಲ್ಲಿ ಶ್ರೀಮಂತಿಕೆಯಿದ್ದರೂ ನೆರವೇರದ ಮಕ್ಕಳ ಮದುವೆ, ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಮಗ, ಅಪಘಾತದಲ್ಲಿ ಮೃತಪಟ್ಟಿದ್ದ ಪುತ್ರ.. ಹೀಗೆ ಸಾಲು ಸಾಲು ನೋವುಗಳಿಂದ ನೊಂದಿದ್ದ ಕುಟುಂಬ ಸಾಮೂಹಿಕವಾಗಿ ಉಸಿರು ನಿಲ್ಲಿಸಿತು. ವರ್ಷಾಂತ್ಯದ ವೇಳೆಗೆ ಅಸ್ಥಿಪಂಜರ ಪತ್ತೆ ಪ್ರಕರಣ ನಗರದಲ್ಲಿ ತಲ್ಲಣ ಸೃಷ್ಟಿಸಿದೆ.

ದೊಡ್ಡ ಸಿದ್ದವ್ವನಹಳ್ಳಿ ಮೂಲದ ನಿವೃತ್ತ ಸಿವಿಲ್‌ ಎಂಜಿನಿಯರ್‌ ಜಗನ್ನಾಥ ರೆಡ್ಡಿ ಅವರ ಇಡೀ ಕುಟುಂಬ ಘೋರವಾದ ರೀತಿಯಲ್ಲಿ ಅಂತ್ಯ ಕಂಡಿರುವ ವಿಚಾರ, ಶೀತ ಗಾಳಿಯಲ್ಲೂ ಜನರ ಬೆವರಿಳಿಯುವಂತೆ ಮಾಡಿದೆ. ಪತ್ನಿ ಪ್ರೇಮಾವತಿ, ಮಗಳು ಎನ್‌.ಜೆ.ತ್ರಿವೇಣಿ, ಪುತ್ರರಾದ ಕೃಷ್ಣಾ ರೆಡ್ಡಿ ಹಾಗೂ ನರೇಂದ್ರ ರೆಡ್ಡಿ ವಾಸವಾಗಿದ್ದ ನಿವಾಸ ಇದೀಗ ಅಸ್ಥಿ ಪಂಜರಗಳ ಗೂಡಾಗಿದೆ.

2019 ಜನವರಿಯಲ್ಲೇ ಮನೆಯಲ್ಲಿ ದುರಂತ ನಡೆದಿದೆ ಎನ್ನುತ್ತಾರೆ ಪೊಲೀಸರು. ಕಳೆದ 5 ವರ್ಷದಿಂದ ಮನೆಯ ಅಕ್ಕಪಕ್ಕ, ಮುಂಭಾಗ ನೆಮ್ಮದಿಯಾಗಿ ವಾಸವಿದ್ದ ಜನರು ಗುರುವಾರ ರಾತ್ರಿಯಿಂದ ಭಯದ ವಾತಾವರಣದಲ್ಲಿ ಇದ್ದಾರೆ. ಈ ಮನೆಯಲ್ಲಿ ಅಸ್ಥಿ ಪಂಜರಗಳು ಇದ್ದವು ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ‘ನಾಯಿ ಸತ್ತಿದೆ, ಅದಕ್ಕೆ ವಾಸನೆ ಬರುತ್ತಿದೆ ಎಂದು ತಿಳಿದಿದ್ದೆವು. ಇದೀಗ ನಿಜಕ್ಕೂ ಮೈ ನಡುಗುತ್ತಿದೆ’ ಎನ್ನುತ್ತಾರೆ ಮನೆ ಪಕ್ಕದ ಮರಗೆಲಸದ ಕಾರ್ಮಿಕರು.

‘ರೆಡ್ಡಿ ಅವರ ಮಗಳಿಗೆ ಪದವಿ ಓದುವಾಗಲೇ ಬೆನ್ನು ಮೂಳೆ ಸಮಸ್ಯೆ ಪ್ರಾರಂಭವಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಎಂಟು ವರ್ಷದ ಹಿಂದೆ ನಾವು ಮನೆಗೆ ಬಂದು ಹೋಗುತ್ತಿದ್ದೆವು. ಆದರೆ, ಒಂದು ದಿನ ವಿವಾಹ ಆಮಂತ್ರಣ ಪತ್ರಿಕೆ ಕೊಡಲು ಬಂದಾಗ ಕಿಟಕಿಯಿಂದಲೇ ಪಡೆದು ಕಳುಹಿಸಿದ್ದರು. ಜತೆಗೆ ದೂರವಾಣಿ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಈ ಕಾರಣಕ್ಕೆ ಅಂದಿನಿಂದ ನಾವು ಬರುವುದನ್ನು ಕೈಬಿಟ್ಟಿದ್ದೆವು. ಮಗಳಿಗೆ ಮದುವೆ ಆಗಲಿಲ್ಲ ಎಂಬ ನೋವು ನನ್ನ ಮಾವ, ಅತ್ತೆಯನ್ನು ಬಹಳ ಕಾಡಿತ್ತು’ ಎಂದು ಬೇಸರಿಸಿದರು ಸೊಸೆ ಕೊಲ್ಲಿ ಲಕ್ಷ್ಮಿ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದ ಕಾರ್‌ ಮೆಕ್ಯಾನಿಕ್‌ ಚೋಟು, ‘ಜಗನ್ನಾಥ ರೆಡ್ಡಿ ಸುಮಾರು ವರ್ಷದಿಂದ ಅವರ ಟಾಟಾ ಕಾರನ್ನು ನನ್ನ ಗ್ಯಾರೇಜ್‌ಗೆ ತರುತ್ತಿದ್ದರು. ಅವರು ಬಂದರೆ ನಮಗೆ ಖುಷಿಯಾಗುತ್ತಿತ್ತು. ಕಾರು ಸ್ವಚ್ಛಗೊಳಿಸಿದರೆ ₹ 500ಕ್ಕೂ ಹೆಚ್ಚು ಹಣವನ್ನು ಖರ್ಚಿಗೆ ನೀಡುತ್ತಿದ್ದರು. ಅವರ ಕಾರಿನಲ್ಲಿ ಯಾವಾಗಲೂ ಔಷಧಿ, ಮಾತ್ರೆ, ಗ್ಲೂಕೋಸ್‌ ಬಾಟಲ್‌ಗಳು ಇರುತ್ತಿದ್ದವು. ಅವರು ಬಹಳ ಗೌರವದಿಂದ ಬಾಳಿದವರು’ ಎಂದು ಎನ್ನುತ್ತಾ ಮೌನಕ್ಕೆ ಜಾರಿದರು.

‘ಪದವಿ ಓದಿದ್ದ ಹಿರಿಯ ಮಗಳಿಗೆ ಮದುವೆ ಮಾಡಬೇಕೆಂದು ಸಿದ್ಧತೆ ನಡೆಸಿದ್ದ ಕುಟುಂಬಕ್ಕೆ ಬೆನ್ನಮೂಳೆ ಸಮಸ್ಯೆ ಅಘಾತ ತಂದಿತ್ತು. ಅಕ್ಕನಿಗೆ ವಿವಾಹ ಆಗಲಿಲ್ಲ ಎಂಬ ಕಾರಣಕ್ಕೆ ಸಹೋದರರೂ ಮದುವೆ ಆಲೋಚನೆಯಿಂದ ದೂರವಾಗಿದ್ದಾರೆ. ಈ ನಡುವೆ ಎರಡನೇ ಮಗ ಮಂಜುನಾಥ ರೆಡ್ಡಿ ಅಪಘಾತದಲ್ಲಿ ಮೃತಪಟ್ಟಿದ್ದು, ನಾಲ್ಕನೇ ಪುತ್ರ ನರೇಂದ್ರ ರೆಡ್ಡಿ ದರೋಡೆ ಪ್ರಕರಣದಲ್ಲಿ ಸಿಲುಕಿದ್ದು ಕುಟುಂಬವನ್ನು ಭರಿಸಲಾರದ ನೋವಿಗೆ ನೂಕಿದೆ. ಈ ಎಲ್ಲದರ ನಡುವೆ, ಮೂರನೇ ಮಗ ಕೃಷ್ಣ ರೆಡ್ಡಿ ತಂದೆ, ತಾಯಿ, ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ಮದುವೆ ವಿಚಾರವನ್ನು ಯಾರಾದರೂ ಹೇಳಿದರೆ ಅವರೊಂದಿಗೆ ದೂರವಾಗುತ್ತಿದ್ದ. ಈ ಎಲ್ಲ ವಿಚಾರವಾಗಿ ವರ್ಷದಿಂದ ವರ್ಷಕ್ಕೆ ಸಂಬಂಧಿಕರಿಂದ ದೂರವಾಗಿದ್ದರು. ಎಲ್ಲಿಗೋ ಹೋಗಿರಬೇಕು ಎಂದುಕೊಂಡು ನಾವು ಸುಮ್ಮವಾಗಿದ್ದೆವು’ ಎನ್ನುತ್ತಾರೆ ಜಗನ್ನಾಥ ರೆಡ್ಡಿ ಸಂಬಂಧಿಕರು.

ಪಾಳು ಮನೆಯಲ್ಲಿ ಪತ್ತೆಯಾಗಿರುವ ಅಸ್ಥಿಪಂಜರಗಳು ಈ ಐದು ಜನರದ್ದೇ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಖಚಿತವಾಗಲಿದೆ.

ಅಸ್ಥಿಪಂಜರ ಪತ್ತೆಯಾದ ಚಿತ್ರದುರ್ಗದ ಕಾರಾಗೃಹ ರಸ್ತೆಯಲ್ಲಿನ ಜಗನ್ನಾಥ ರೆಡ್ಡಿ ನಿವಾಸದ ಮುಂದೆ ಜಮಾಯಿಸಿದ ಜನ
ಅಸ್ಥಿಪಂಜರ ಪತ್ತೆಯಾದ ಚಿತ್ರದುರ್ಗದ ಕಾರಾಗೃಹ ರಸ್ತೆಯಲ್ಲಿನ ಜಗನ್ನಾಥ ರೆಡ್ಡಿ ನಿವಾಸದ ಮುಂದೆ ಜಮಾಯಿಸಿದ ಜನ
ಏಳೆಂಟು ವರ್ಷಗಳಿಂದ ಜಗನ್ನಾಥ ರೆಡ್ಡಿ ಕುಟುಂಬ ಜನರ ಸಂಪರ್ಕದಲ್ಲಿರಲಿಲ್ಲ. ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಡೆತ್‍ನೋಟ್ ಪತ್ತೆ ಆಗಿಲ್ಲ. ವಿಧಿ ವಿಜ್ಞಾನ ತಂಡ ಮತ್ತಷ್ಟು ದಾಖಲೆಗೆ ಹುಡುಕಾಟ ನಡೆಸುತ್ತಿದೆ
ಧರ್ಮೇಂದ್ರ ಕುಮಾರ್ ಮೀನಾಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕಾರ್‌ ಶೆಡ್‌ಗೆ ಎರಡು ಬೀಗ ಇಡೀ ಕುಟುಂಬ ಕಳೆದ ಐದಾರು ವರ್ಷದಿಂದ ಎಲ್ಲಿಯೂ ಹೊರಗಡೆ ಹೋಗಿಲ್ಲ ಎಂಬುದನ್ನು ಮನೆಯ ಎಡಭಾಗದ ಮುಖ್ಯದ್ವಾರಕ್ಕೆ ಹೊಂದಿಕೊಂಡಿರುವ ಕಾರ್‌ ಶೆಡ್‌ ಒಳಗಿನ ಕಾರಿನ ಸ್ಥಿತಿ ಹೇಳುತ್ತಿದೆ. ಸುಸುಜ್ಜಿತ ಶೆಡ್ಡಿನ ಒಳಗೆ ಕಾರು ನಿಂತಿದ್ದು ಗೇಟಿಗೆ ಎರಡು ಬೀಗ ಹಾಕಲಾಗಿದೆ. ಆದರೆ ಹೊಸದಾಗಿ ನಿರ್ಮಾಣವಾಗಿರುವ ರಸ್ತೆಯಿಂದಾಗಿ ಈಗ ಕಾರನ್ನು ಶೆಡ್‌ನಿಂದ ಹೊರ ತೆಗೆಯುವುದು ಸುಲಭವಲ್ಲ. ಮೊದಲು ರಸ್ತೆಗೆ ಸಮಾನಾಂತರವಾಗಿದ್ದ ಮನೆ ಈಗ ರಸ್ತೆ ನಿರ್ಮಾಣವಾದ ಬಳಿಕ ಮನೆ ತಗ್ಗಿನಲ್ಲಿದೆ. ಕಾರು ನಿಲ್ಲಿಸಿದಾಗ ಸರಾಗವಾಗಿ ಅದು ಶೆಡ್‌ನೊಳಗೆ ಹೋಗಿತ್ತು. ಆದರೆ ಈಗ ಹೊಸ ರಸ್ತೆಯು ಮನೆಯ ಮಟ್ಟಕ್ಕಿಂತ ಸುಮಾರು ಮೂರು ಅಡಿ ಎತ್ತರದಲ್ಲಿದೆ. ಕಾರಿನ ಶೆಡ್‌ ಪ್ರವೇಶ್ವಾರದ ಮುಂದೆ ಕಟ್ಟೆಯ ರೀತಿ ಸಿಮೆಂಟ್ ರಸ್ತೆ ನಿರ್ಮಾಣವಾಗಿದೆ.

ಚೆಲ್ಲಾಪಿಲ್ಲಿಯಾದ ಮನೆ ವಸ್ತುಗಳು ಅಸ್ಥಿಪಂಜರಗಳು ಪತ್ತೆಯಾದ ಮನೆಯೊಳಗೆ ಪ್ರವೇಶಿಸಿದ ಪೊಲೀಸರಿಗೆ ಮನೆ ಸಂಪೂರ್ಣ ಅಸ್ತವ್ಯಸ್ತವಾಗಿರುವುದು ಕಂಡುಬಂದಿದೆ. ಕೈಕಾಲು ಚಾಚಿ ನೇರವಾಗಿ ಮಲಗಿರುವ ಸ್ಥಿತಿಯಲ್ಲಿ ಅಸ್ಥಿ ಪಂಜರಗಳು ಪತ್ತೆಯಾಗಿವೆ. ಮನೆಯನ್ನು  ಪ್ರವೇಶಿಸುವಾಗ ಬಾಗಿಲ ಬಳಿಯಲ್ಲೇ ಒಂದು ತಲೆ ಬುರುಡೆ ಪತ್ತೆಯಾಗಿದೆ. ಇಡೀ ಮನೆ ಚೆಲ್ಲಾಡಿದಂತೆ ಇದೆ. ಕಳ್ಳತನದ ಪ್ರಯತ್ನ ನಡೆದಿತ್ತೇ ಅಥವಾ ಸಾಯುವ ಮೊದಲೇ ಮನೆಯಲ್ಲಿದ್ದವರೇ ಹೀಗೆ ಮಾಡಿಕೊಂಡಿದ್ದರಾ ಎನ್ನುವ ಅನುಮಾನ ಮೂಡಿದೆ. ಮನೆಯಲ್ಲಿ ಔಷಧಿ ಮಾತ್ರೆ ವ್ಹೀಲ್‌ಚೇರ್ ಆಕ್ಸಿಜನ್ ಸಿಲಿಂಡರ್ ಕೂಡಾ ಇರುವುದಾಗಿ ಮಾಹಿತಿ ಸಿಕ್ಕಿದೆ. ಮನೆಯ ಹಿಂದಿನ ಬಾಗಿಲು ತೆರೆದಿತ್ತು ಎನ್ನಲಾಗಿದೆ. ಮನೆಯ ಮುಂಭಾಗದ ವಿದ್ಯುತ್‌ ಕಂಬದಲ್ಲಿ ಮನೆಗೆ ಸಂಪರ್ಕಿಸಿದ್ದ ವಿದ್ಯುತ್‌ ತಂತಿಯನ್ನು ಕಡಿತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT