ಮಂಗಳವಾರ, ನವೆಂಬರ್ 29, 2022
21 °C

ದೇಶ ವಿಭಜನೆ ಮಾಡಿದ್ದು ನೆಹರೂ; ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಅಖಂಡ ಭಾರತ ವಿಭಜನೆಯಾಗಲು ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಕಾರಣ. ಕಾಶ್ಮೀರಕ್ಕೆ ಅವರು ವಿಶೇಷ ಸ್ಥಾನ ಕಲ್ಪಿಸಿದ್ದರು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆರೋಪಿಸಿದರು.

ಕ್ರೀಡಾಭವನದಲ್ಲಿ ಅಂತ್ಯೋದಯ ವಿಕಾಸ ಟ್ರಸ್ಟ್‌ ಭಾನುವಾರ ಏರ್ಪಡಿಸಿದ್ದ ಪಂಡಿತ್‌ ದೀನದಯಾಳ್‌ ಉಪಾಧ್ಯಾ ಅವರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ಕಾಶ್ಮೀರದಲ್ಲಿ ನಾವೂ ಪರಕೀಯರಾಗಿದ್ದೆವು. ಕಾಶ್ಮೀರ ಪ್ರತ್ಯೇಕ ಧ್ವಜ ಹೊಂದಿತ್ತು. ಇಂತಹ ನೆಲದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದು ದೀನದಯಾಳ್‌ ಉಪಾಧ್ಯಾ’ ಎಂದು ಹೇಳಿದರು.

‘ಅಪ್ರತಿಮ ದೇಶಭಕ್ತರಾಗಿದ್ದ ಉಪಾಧ್ಯಾ ಅವರು ಪ್ರತಿಪಾದಿಸಿದ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ. ಅವರು ನಡೆದುಬಂದ ಹಾದಿ ಯುವಸಮೂಹಕ್ಕೆ ದಾರಿದೀಪವಾಗಿದೆ. ರಾಷ್ಟ್ರದ ಏಳಿಗೆಗೆ ಶ್ರಮಿಸಿದ ಶ್ಯಾಮ್‌ ಪ್ರಸಾದ್‌ ಮುಖರ್ಜಿ, ಅಟಲ್‌ ಬಿಹಾರಿ ವಾಜಪೇಯಿ ಸಾಲಿನಲ್ಲಿ ಉಪಾಧ್ಯ ಅವರೂ ಇದ್ದಾರೆ. ಅವರ ತತ್ವಗಳನ್ನು ಯುವಸಮೂಹ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಕೆ.ರಾಜೀವಲೋಚನ ಮಾತನಾಡಿ, ‘ಉಪಾಧ್ಯ ಅವರ ಜೀವನವು ಸಂಘಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದ ಬಳಿಕ ಅವರೊಬ್ಬ ಅತ್ಯುತ್ತಮ ಸಂಘಟಕರಾಗಿದ್ದರು. ದೇಶದ ಸುಧಾರಣೆಗೆ ಶ್ರಮಿಸಿದ ಮಹನೀಯರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಇಡೀ ಬದುಕನ್ನು ಅವರು ದೇಶಕ್ಕೆ ಮುಡಿಪಾಗಿಟ್ಟರು. ಉತ್ತಮ ರಾಷ್ಟ್ರ ನಿರ್ಮಾಣದ ಗುರಿಯೊಂದಿಗೆ ಹೆಜ್ಜೆಹಾಕಿದರು. ಕಾದಂಬರಿಕಾರರು, ಪತ್ರಕರ್ತರು ಆಗಿದ್ದ ಅವರ ಬಾಲ್ಯ ಕಡುಬಡತನದಿಂದ ಕೂಡಿತ್ತು. ವಾಜಪೇಯಿ ಅವರ ವ್ಯಕ್ತಿತ್ವ ರೂಪುಗೊಳ್ಳಲು ಉಪಾಧ್ಯ ಅವರೇ ಕಾರಣ’ ಎಂದು ಹೇಳಿದರು.

ಟ್ರಸ್ಟ್‌ ಅಧ್ಯಕ್ಷ ಎಸ್.ಸಿದ್ದೇಶ್‌ ಯಾದವ್‌, ವಿಧಾನಪರಿಷತ್‌ ಸದಸ್ಯ ಕೆ.ಎಸ್.ನವೀನ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರಳಿ, ಪಿ.ಆರ್.ದಾಸ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು