ಗುರುವಾರ , ಡಿಸೆಂಬರ್ 1, 2022
21 °C
ದೀನ ದಯಾಳ್ ಉಪಾಧ್ಯ ದಿನಾಚರಣೆಯಲ್ಲಿ ಕೆ.ಎಸ್‌.ನವೀನ್‌ ಹೇಳಿಕೆ

ಭಾರತಕ್ಕೆ ಮುನ್ನೋಟ ನೀಡಿದ ದಿಗ್ದರ್ಶಕ: ದೀನ ದಯಾಳ್ ಉಪಾಧ್ಯ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ದೀನ ದಯಾಳ್ ಉಪಾಧ್ಯ ಅವರು ಅಪ್ರತಿಮ ಸಂಘಟಕರಾಗಿದ್ದರು. ಪ್ರಬುದ್ಧ ಲೇಖಕರಾಗಿದ್ದ ಅವರು ಭಾರತಕ್ಕೆ ಮುನ್ನೋಟ ನೀಡಿದ ದಿಗ್ದರ್ಶಕರು ಎಂದು ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಅಭಿಪ್ರಾಯಪಟ್ಟರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯ ಅವರ 108ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರಿಗೂ ಸಂಸ್ಕಾರ ಹಾಗೂ ಶಿಕ್ಷಣ ಸಿಗಬೇಕು ಎಂಬುದು ಉಪಾಧ್ಯ ಅವರ ಕನಸು. ಆಗ ಮಾತ್ರ ಸಮಗ್ರ ಸ್ವರೂಪದ ಸಮಾಜ ಕಟ್ಟಬಹುದು ಎಂದು ಅವರು ನಂಬಿದ್ದರು. ಏಕಾತ್ಮ ಮಾನವತಾವಾದ ಭಾರತದ ಅಸ್ಮಿತೆ, ವಿಚಾರಧಾರೆಗೆ ಹೊಂದಿಕೊಂಡಿದೆ. ಸಮಾಜವಾದ ಈ ದೇಶಕ್ಕೆ ಪ್ರಸ್ತುತ ಅಲ್ಲ. ಏಕಾತ್ಮ ಮಾನವತಾವಾದದಿಂದ ಮಾತ್ರವೇ ಈ ದೇಶವನ್ನು ಅಖಂಡವಾಗಿ ಕಟ್ಟಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಬಿಜೆಪಿ ರಾಜಕೀಯ ಪಕ್ಷವಾಗಿ ಬೆಳೆಯಲು ಉಪಾಧ್ಯ ಕಾರಣ. ಅವರ ಸಾರ್ಥಕ ಜೀವನ ರಾಷ್ಟ್ರ ಭಕ್ತಿಯನ್ನು ಪ್ರೇರೇಪಿಸಿದೆ. ಬಡತನವನ್ನು ನೀಗಿಸು ಕುರಿತು ಅವರು ಅಲೋಚನೆ ಮಾಡಿದ್ದಾರೆ. ದೇಶವನ್ನು ಮುನ್ನಡೆಸುವ ತತ್ವ, ವಿಚಾರಗಳನ್ನು ಅವರು ಮಂಡಿಸಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಉಪಾಧ್ಯ ಅವರ ಆಲೋಚನೆಯನ್ನು ಮನವರಿಕೆ ಮಾಡಿಕೊಡಬೇಕಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕಿದೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರಳಿ ಮಾತನಾಡಿ, ‘ದೀನದಯಾಳ ಅವರ ಆದರ್ಶ ನಮ್ಮೆಲ್ಲರನ್ನೂ ಸ್ಫೂರ್ತಿಗೊಳಿಸಿದೆ. ಈ ದೇಶಕ್ಕೆ ಮುನ್ನೋಟದ ಅಡಿಪಾಯವನ್ನು ಹಾಕಿಕೊಟ್ಟಿದ್ದು ದೀನದಯಾಳರು. ಅವರು ಸ್ಥಾಪಿಸಿದ ಜನಸಂಘವು ಭಾರತೀಯ ಜನತಾ ಪಕ್ಷವಾಗಿ ಬದಲಾವಣೆ ಆಗಿದೆ. ಆದರೆ, ಜನಸಂಘ ಹುಟ್ಟಿದಾಗ ಇದ್ದ ವಿಚಾರಧಾರೆಗಳನ್ನೇ ಇಟ್ಟುಕೊಂಡು ಬಿಜೆಪಿ ಸಾಗುತ್ತಿದೆ’ ಎಂದರು.

‘ಹಿಂದುಳಿದ ವರ್ಗದ ಪಟ್ಟಿಯ ಪರಿಷ್ಕರಣೆಯ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿತ್ತು. ಸಂವಿಧಾನಕ್ಕೆ 127ನೇ ತಿದ್ದುಪಡಿ ತರುವ ಮೂಲಕ ಈ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡುವ ಐತಿಹಾಸಿಕ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದಾರೆ. ಕಾಂಗ್ರೆಸ್‌ ಸೇರಿ ಅನೇಕ ಪಕ್ಷಗಳು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳನ್ನು ರಾಜಕೀಯಕ್ಕೆ ಬಳಸಿಕೊಂಡಿವೆಯೇ ಹೊರತು ಅಭಿವೃದ್ಧಿ ಮಾಡಿಲ್ಲ’ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ನರೇಂದ್ರನಾಥ್, ಪ್ರಧಾನ ಕಾರ್ಯದರ್ಶಿ ನರೆಂದ್ರ, ಮುಖಂಡರಾದ ಡಾ.ಸಿದ್ಧಾರ್ಥ ಗುಡಾರ್ಪಿ, ನವೀನ್ ಚಾಲುಕ್ಯ, ಶಿವಣ್ಣಚಾರ್, ಚಂದ್ರಿಕಾ ಲೋಕನಾಥ್, ನಗರಸಭಾ ಸದಸ್ಯರಾದ ವೆಂಕಟೇಶ್, ಸ್ವಾಯಿ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್, ಉಪಾಧ್ಯಕ್ಷರಾದ ಶ್ರೀಮತಿ ಮಂಜುಳ ವೇದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು