ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಸರ್ಕಾರಿ ಸೌಲಭ್ಯ ತಲುಪಿಸಿ: ಶಾಸಕ ಎಂ.ಚಂದ್ರಪ್ಪ

‘ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ’ ಕಾರ್ಯಕ್ರಮದಲ್ಲಿ ಎಂ.ಚಂದ್ರಪ್ಪ
Last Updated 20 ಮಾರ್ಚ್ 2022, 6:23 IST
ಅಕ್ಷರ ಗಾತ್ರ

ಹೊಳಲ್ಕೆರೆ: ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸಬೇಕು ಎಂದು ಶಾಸಕ ಎಂ. ಚಂದ್ರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಚೌಡಗೊಂಡನಹಳ್ಳಿಯಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹಳ್ಳಿ ಜನ ಮುಗ್ದರಿರುತ್ತಾರೆ. ಅವರಿಗೆ ತಮ್ಮ ಜಮೀನಿನ ದಾಖಲೆಗಳೇ ಗೊತ್ತಿರುವುದಿಲ್ಲ. ಆಸ್ತಿ ದಾಖಲೆಗಳು ಸರಿಯಾಗಿಲ್ಲದಿದ್ದರೆ ಸರ್ಕಾರಿ ಸೌಲಭ್ಯ ಪಡೆಯಲು ಆಗುವುದಿಲ್ಲ. ತಾತ, ಮುತ್ತಾತರ ಕಾಲದಿಂದಲೂ ಪಹಣಿಯಲ್ಲಿ ಹೆಸರು ಬದಲಾಗದೆ ಇರುವ ರೈತರೂ ಇದ್ದಾರೆ. ಇಂತವರು ಗಂಗಾ ಕಲ್ಯಾಣ ಸೇರಿ ಸರ್ಕಾರದ ಯಾವುದೇ ಸೌಲಭ್ಯ ಪಡೆಯಲಾಗುವುದಿಲ್ಲ’ ಎಂದರು.

‘ಜಾತಿ, ಆದಾಯ ಪ್ರಮಾಣ ಪತ್ರ, ಪೌತಿ ಖಾತೆ, ಪಡಿತರ ಚೀಟಿ, ವೃದ್ಧಾಪ್ಯ ವೇತನ ಮಂಜೂರು ಮಾಡಿಸಿಕೊಳ್ಳಲು ನಿತ್ಯ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ಇದೆ. ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎಂದು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಅಧಿಕಾರಿಗಳು ಜನರ ಮನೆಬಾಗಿಲಿಗೆ ಹೋಗಿ ಕೆಲಸ ಮಾಡಿಕೊಡುವ ವಿನೂತನ ಕಾರ್ಯಕ್ರಮ
ಜಾರಿಗೊಳಿಸಿದ್ದಾರೆ. ಈ ಗ್ರಾಮಕ್ಕೆ 2 ತಿಂಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲಾಗುವುದು. ಶಾಲೆಗೆ 2 ಕೊಠಡಿ ಮಂಜೂರು ಮಾಡಿದ್ದೇನೆ’ ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ‘ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಇಲ್ಲಿ ಕಡಿಮೆ ಅಹವಾಲುಗಳು ಸಲ್ಲಿಕೆಯಾಗಿವೆ. ಸಾರ್ವಜನಿಕರು ಯಾವುದೇ ಇಲಾಖೆಗೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸಬಹುದು’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಕೆ. ಶಿವಮೂರ್ತಿ, ‘ಎಚ್.ಡಿ. ಪುರಕ್ಕೆ ಅಗ್ನಿಶಾಮಕ ಠಾಣೆ, ಚಿತ್ರದುರ್ಗ ಮತ್ತು ಹೊಳಲ್ಕೆರೆಯಿಂದ ಚಿತ್ರಹಳ್ಳಿ, ಎಚ್.ಡಿ.ಪುರ, ಕೊಳಾಳು, ಭರಂಪುರ, ಮೇಟಿಕುರ್ಕೆ ಮಾರ್ಗವಾಗಿ ಹಿರಿಯೂರಿಗೆ ಕೆಎಸ್ಆರ್‌ಟಿಸಿ ಬಸ್‌ಗಳನ್ನು ಬಿಡಬೇಕು’ ಎಂದು ಬೇಡಿಕೆ ಸಲ್ಲಿಸಿದರು.

ತಹಶೀಲ್ದಾರ್ ರಮೇಶಾಚಾರಿ, ಪ್ರಾಸ್ತಾವಿಕವಾಗಿ ಮಾತನಾಡಿ, ‘ಗ್ರಾಮದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಠಾಣಾ ಜಾಗದ ಇ-ಸ್ವತ್ತು ಮಾಡುವಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆ
ಸರಿಪಡಿಸಲಾಗುವುದು. ಸಾರ್ವಜನಿಕರು ತಮ್ಮ ಕೆಲಸಗಳಿಗೆ ತಾಲ್ಲೂಕು ಕಚೇರಿಗೆ ಅಲೆಯಬೇಕಿಲ್ಲ. ನೀವು ನೀಡಿದ ಅರ್ಜಿಯ ಸ್ವೀಕೃತಿ ಪ್ರತಿಯನ್ನು ನನ್ನ ವಾಟ್ಸ್‌ ಆ್ಯಪ್‌ ಮಾಡಿದರೆ ಸಾಕು ಪರಿಶೀಲಿಸಿ ತಿಳಿಸುತ್ತೇನೆ’ ಎಂದರು.

ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಕಂದಾಯ ಇಲಾಖೆಗೆ 31, ತಾಲ್ಲೂಕು ಪಂಚಾಯಿತಿಗೆ 18, ಇತರೆ ಇಲಾಖೆಗಳಿಗೆ 6 ಬೇಡಿಕೆ ಸೇರಿ ಒಟ್ಟು 63 ಅರ್ಜಿಗಳು ಸಲ್ಲಿಕೆಯಾದವು.

ತೇಕಲವಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷೆ ಸುಮಲತಾ, ಮಾಜಿ ಸದಸ್ಯ ಸಿ.ಇ. ನಾಗರಾಜ್, ಶ್ರೀನಿವಾಸ್, ಕೆ.ತಿಪ್ಪೇಸ್ವಾಮಿ, ಚಂದ್ರಪ್ಪ, ಸವಿತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್, ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ವೆಂಕಟೇಶಯ್ಯ, ತಾಲ್ಲೂಕು ಪಂಚಾಯಿತಿ ಇಒ ಗಂಗಣ್ಣ, ಬಿಇಒ ಸಿ.ಎಂ. ತಿಪ್ಪೇಸ್ವಾಮಿ, ಬಿಸಿಎಂ ಕಲ್ಯಾಣಾಧಿಕಾರಿ ಪ್ರದೀಪ್ ಮಾರ್, ವಲಯ ಅರಣ್ಯಾಧಿಕಾರಿ ಬಹುಗುಣ, ವಸಂತ ಕುಮಾರ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕುಮಾರ ನಾಯ್ಕ್, ಸಹಾಯಕ ಕೃಷಿ ಅಧಿಕಾರಿ ಎನ್.ವಿ.ಪ್ರಕಾಶ್, ಲೋಕೋಪಯೋಗಿ ಇಲಾಖೆಯ ಎಇಇ ಮಹಾಬಲೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಯಸಿಂಹ, ಪಿಆರ್ ಡಿ ಇಲಾಖೆಯ ಎಇಇ ನೀಲಕಂಠಪ್ಪ, ಸಣ್ಣ ನೀರಾವರಿ ಇಲಾಖೆಯ ಎಇಇ ವೆಂಕಟ ರಮಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT