ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚದ ಬೇಡಿಕೆ: ಅಧಿಕಾರಿಗಳಿಗೆ ಗ್ರಾಮಸ್ಥರ ತರಾಟೆ

ಜಾಲತಾಣಗಳಲ್ಲಿ ಹರಿದಾಡಿದ ದೇವಸಮುದ್ರದ ಮಾತಿನ ಚಕಮಕಿ ವಿಡಿಯೊ
Last Updated 8 ಮಾರ್ಚ್ 2021, 5:20 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ದೇವಸಮುದ್ರದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ಮಂಜೂರು ಮಾಡಲು ಅಧಿಕಾರಿಗಳಿಗೆ ಲಂಚವನ್ನು ಕೊಡಬೇಕು ಎಂದು ಆರೋಪಿಸಿ ಕಾರ್ಮಿಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್ ಹಾಗೂ ಕಾರ್ಮಿಕರು ತಾಲ್ಲೂಕು ಪಂಚಾಯಿತಿ ಇಒ ಎಚ್. ಪ್ರಕಾಶ್ ಮತ್ತು ಸಿಬ್ಬಂದಿಯನ್ನು ಈ ಕುರಿತು ತರಾಟೆಗೆ ತೆಗೆದುಕೊಂಡವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗ್ರಾಮದಲ್ಲಿ ಖಾತ್ರಿ ಯೋಜನೆಯಲ್ಲಿ ಮಾಡಿರುವ ಕಾಮಗಾರಿಯೊಂದಕ್ಕೆ ಬಿಲ್ ನೀಡಲು ಸತಾಯಿಸಲಾಗುತ್ತಿದೆ ಎಂದು ಸದಸ್ಯ ಕುಮಾರ್ ಪ್ರಶ್ನೆ ಮಾಡಿದಾಗ, ಅಧಿಕಾರಿಯು ಪಿಡಿಒಗೆ ಇವರ ಸದಸ್ಯತ್ವ ರದ್ದು ಮಾಡಲು ಪತ್ರ ಬರೆಯುವಂತೆ ಹೇಳುತ್ತಾರೆ. ಆಗ ಸದಸ್ಯ ಕುಮಾರ್ ಏರುಧ್ವನಿಯಲ್ಲಿ ‘ರದ್ದು ಮಾಡಲು ನೀವ್ಯಾರು’ ಎಂದು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಳ್ಳುವುದು ವಿಡಿಯೊದಲ್ಲಿದೆ.

ನಂತರ ದೇವಸಮುದ್ರ ಪರಮೇಶ್ವರ ಸ್ವಾಮಿ ಚೌಕಿಮಠ ಆವರಣದಲ್ಲಿ ಅಧಿಕಾರಿಗಳ ವಾಹನ ತಡೆದು ಕಾರ್ಮಿಕರು ಧರಣಿ ನಡೆಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಮಿಕರು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ
ನಡೆದಿದೆ.

‘ಖಾತ್ರಿ ಕಾಮಗಾರಿಗಳಿಗೆ ಲಂಚ ನೀಡಿದಲ್ಲಿ ಮಾತ್ರ ಮಂಜೂರು ಮಾಡಲಾಗುತ್ತಿದೆ. ಇಲ್ಲವಾದಲ್ಲಿ ಕಾರಣ ನೀಡಿ ತಡೆ ಹಿಡಿಯುತ್ತೀರಾ’ ಎಂದು ಆರೋಪಿಸುವುದೂ ವಿಡಿಯೊದಲ್ಲಿ ದಾಖಲಾಗಿದೆ.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರು, ‘ಲಂಚ ಒಬ್ಬ ಅಧಿಕಾರಿಗೆ ಹೋಗುವುದಿಲ್ಲ. ಬಹಳಷ್ಟು ಜನರು ಇದರ ಹಿಂದೆ ಇರುತ್ತಾರೆ; ಹೋಗಲಿ ಬಿಡಿ ಪಾಪ’ ಎಂದು ಪದೇ, ಪದೇ ಹೇಳುವುದು
ವಿಡಿಯೊದಲ್ಲಿದೆ.

ರಾಂಪುರ ಪೊಲೀಸ್ ಠಾಣೆ ಎಸ್‌ಐ ಗುಡ್ಡಪ್ಪ ಸ್ಥಳಕ್ಕೆ ಬಂದು ಪ್ರಕರಣ ತಿಳಿಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT