ಚಿತ್ರದುರ್ಗ: ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳ ಕೊಳೆಗೇರಿ ನಿವಾಸಿಗಳು ತಾವು ಜೀವಿಸುತ್ತಿರುವ ಗುಡಿಸಲು, ಸಣ್ಣ ಮನೆಗಳ ಹಕ್ಕುಪತ್ರಕ್ಕಾಗಿ ದಶಕಗಳಿಂದಲೂ ಕಾಯುತ್ತಿದ್ದಾರೆ. ನಗರವೊಂದರಲ್ಲೇ 40 ಕೊಳೆಗೇರಿಗಳಿದ್ದು ಜಿಲ್ಲಾಡಳಿತದಿಂದ ಈವರೆಗೆ 31 ಕೊಳೆಗೇರಿಗಳು ಮಾತ್ರ ಘೋಷಣೆಯಾಗಿವೆ.
ಪರಿಶಿಷ್ಟ ಸಮುದಾಯಗಳು, ಎಲ್ಲಾ ವರ್ಗಗಳ ಬಡವರ ಸಂಖ್ಯೆ ಇತರ ಜಿಲ್ಲೆಗಳಿಗಿಂತಲೂ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಾಗಿ ಜೀವಿಸುತ್ತಿದ್ದಾರೆ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ದಾವಣಗೆರೆ ವಿಭಾಗ ವ್ಯಾಪ್ತಿಯಲ್ಲಿ ಬರುವ ನಗರದಲ್ಲಿ 5 ಸಾವಿರ ಕುಟುಂಬಗಳು ಕೊಳೆಗೇರಿಯಲ್ಲಿ ವಾಸ ಮಾಡುತ್ತಿವೆ. ಆದರೆ ಇಲ್ಲಿಯವರೆಗೆ 2,434 ಕುಟುಂಬಗಳಿಗೆ ಮಾತ್ರ ಹಕ್ಕು ಪತ್ರ ವಿತರಣೆ ಮಾಡಲಾಗಿದೆ.
ಕೊಳೆಗೇರಿಗಳ ಘೋಷಣೆ ಸಂಬಂಧ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸರ್ಕಾರ ಈಗ ಜಿಲ್ಲಾಧಿಕಾರಿಗಳಿಗೆ ನೀಡಿದೆ. ಈ ನಿಟ್ಟಿನಲ್ಲಿ ಸಾವಿರಾರು ಕೊಳೆಗೇರಿ ವಾಸಿಗಳು ತಾವು ವಾಸಿಸುವ ಜಾಗವನ್ನು ಕೊಳೆಗೇರಿ ಎಂದು ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ.
ಆದರೂ ಜಿಲ್ಲಾಧಿಕಾರಿಗಳು ಕೊಳೆಗೇರಿ ಘೋಷಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಈಗಾಗಲೇ ಘೋಷಣೆ ಮಾಡಿರುವ ಕೊಳೆಗೇರಿಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯನ್ನೂ ಮಾಡಿಲ್ಲ ಎಂದು ಅಲ್ಲಿಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ನಗರ ವ್ಯಾಪ್ತಿಯಲ್ಲಿರುವ ಚೋಳಗುಡ್ಡ ಕೊಳೆಗೇರಿ ನಗರದ ಅತೀದೊಡ್ಡ ಕೊಳೆಗೇರಿ ಎನಿಸಿಕೊಂಡಿದೆ. 12 ಎಕರೆ ವಿಶಾಲ ಪ್ರದೇಶದಲ್ಲಿರುವ ಇಲ್ಲಿ ಸಾವಿರಕ್ಕೂ ಹೆಚ್ಚು ನಿವಾಸಿಗಳು ವಾಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ 500 ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ವಿತರಣೆ ಮಾಡಲಾಗಿದ್ದು ಉಳಿದವರು ಅನಧಿಕೃತವಾಗಿಯೇ ವಾಸ ಮಾಡುತ್ತಿದ್ದಾರೆ.
‘ಹಕ್ಕುಪತ್ರ ಪಡೆದವರು ಮಾತ್ರ ಸುಸಜ್ಜಿತವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ನಮಗೆ ಹಕ್ಕುಪತ್ರ ವಿತರಣೆ ಮಾಡದ ಕಾರಣ ನಾವು ಇನ್ನೂ ಗುಡಿಸಲು, ತಗಡಿನ ಶೆಡ್‌ಗಳಲ್ಲೇ ವಾಸ ಮಾಡುತ್ತಿದ್ದೇವೆ. ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರೂ ನಮಗೆ ಹಕ್ಕುಪತ್ರ ಸಿಕ್ಕಿಲ್ಲ’ ಎಂದು ಚೋಳಗುಡ್ಡ ಬಡಾವಣೆಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.
ನೆಹರೂ ನಗರ ಕೊಳೆಗೇರಿಗಳಲ್ಲಿ 300 ಕುಟುಂಬಗಳು ವಾಸಿಸುತ್ತಿವೆ. ಆದರೆ 50 ಮನೆಗಳಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ. ಸಿಹಿನೀರು ಹೊಂಡ, ಛಲವಾದಿ ಕಾಲೊನಿ, ಜೋಗಿಮಟ್ಟಿ, ರಾಜೇಂದ್ರ ನಗರ ಸೇರಿದಂತೆ ಹಲವು ಕೊಳೆಗೇರಿಗಳ ನೂರಾರು ನಿವಾಸಿಗಳಿಗೆ ಇಲ್ಲಿಯವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಹಕ್ಕುಪತ್ರ ಸಿಗುತ್ತದೆ, ಜಾಗ ತಮ್ಮದಾಗುತ್ತದೆ ಎಂದು ಚಾತಕ ಪಕ್ಷಿಯಂತೆ ಜನರು ಕಾಯುತ್ತಿದ್ದಾರೆ.
ಸೌಲಭ್ಯಗಳೂ ಇಲ್ಲ: ನಗರ ವ್ಯಾಪ್ತಿಯ ಬಹುತೇಕ ಕೊಳೆಗೇರಿಗಳಿಗೆ ಮೂಲಸೌಲಭ್ಯವೂ ಇಲ್ಲ. ಪ್ರಮುಖವಾಗಿ ರಸ್ತೆಗಳಿಲ್ಲ. ತೆರೆದ ಚರಂಡಿಯ ನಡುವೆ ಬದುಕುತ್ತಿರುವ ಜನರು ರೋಗಭೀತಿ ಎದುರಿಸುತ್ತಿದ್ದಾರೆ. ಬಹುತೇಕ ಚರಂಡಿಗಳು ಮಧ್ಯದಲ್ಲೇ ಸ್ಥಗಿತಗೊಂಡಿದ್ದು, ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಚರಂಡಿ ದುರಸ್ತಿ ಮಾಡುವಂತೆ ಮಂಡಳಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇಲ್ಲಿಯವರೂ ದುರಸ್ತಿಯಾಗಿಲ್ಲ.
ಕೊಳೆಗೇರಿಗಳಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ. ವಾಣಿವಿಲಾಸ ಸಾಗರ, ಸೂಳೆಕೆರೆಯಿಂದ ನಗರದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಕೊಳೆಗೇರಿ ಜನರಿಗೆ ಶುದ್ಧ ಕುಡಿಯುವ ನೀರಿನ ಕೊರತೆಯಾಗಿದೆ.
ಕಾವಾಡಿಗರಹಟ್ಟಿ ಕಾಲೊನಿಯಲ್ಲಿ ಈಚೆಗೆ ಕಲುಷಿತ ನೀರು ಕುಡಿದು ಹಲವರು ಮೃತಪಟ್ಟ ಘಟನೆ ಜನರ ಮನಸ್ಸಿನಲ್ಲಿ ಈಗಲೂ ಹಸಿರಾಗಿದೆ. ಬಹುತೇಕ ಕೊಳೆಗೇರಿಗಳಿಗೆ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದ್ದು ಅಲ್ಲಿಯ ಜನರಿಗೆ ವಾಂತಿ– ಭೇದಿ ಸಮಸ್ಯೆಗಳು ಸಾಮಾನ್ಯ ಎಂಬಂತಾಗಿದೆ.
‘ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಘಟನೆ ನಡೆದ ನಂತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಗ ಕೊಳೆಗೇರಿಗಳ ಟ್ಯಾಂಕ್ ಸ್ವಚ್ಛತೆ ಮಾಡಲಾಯಿತು. ಈಗ ಹಿಂದಿನ ಪರಿಸ್ಥಿತಿಯೇ ಮುಂದುವರಿದಿದೆ. ಕಾವಾಡಿಗರಹಟ್ಟಿಯಂತಹ ಮತ್ತೊಂದು ಘಟನೆ ನಡೆಯುವ ದಿನ ದೂರವಿಲ್ಲ. ಅಲ್ಲಿಯವರೆಗೂ ಇವರು ಶುದ್ಧ ನೀರು ನೀಡುವುದಿಲ್ಲ. ಕೊನೇ ಪಕ್ಷ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಮಾಡಿದ ಮನವಿಗೂ ಸ್ಪಂದಿಸಿಲ್ಲ’ ಎಂದು ಸಿಹಿನೀರು ಹೊಂಡ ಬಡಾವಣೆಯ ನಿವಾಸಿಗಳು ಆರೋಪಿಸಿದರು.
ಹೆಚ್ಚುತ್ತಲೇ ಇವೆ ಕೊಳೆಗೇರಿಗಳ ಸಂಖ್ಯೆ
ಸುವರ್ಣಾ ಬಸವರಾಜ್ ಹಿರಿಯೂರು: ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ನಗರ ಮತ್ತು ಗ್ರಾಮೀಣ ಭಾಗದ ಬಡವರಿಗೆ ಹತ್ತಾರು ವಸತಿ ಯೋಜನೆಗಳನ್ನು ಜಾರಿಗೊಳಿಸಿವೆ. ಇಷ್ಟಾದರೂ ನಗರದಲ್ಲಿ ಕೊಳೆಗೇರಿಗಳ ಸಂಖ್ಯೆ ವಸತಿರಹಿತರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಮಿರ್ಜಾ ಬಡಾವಣೆ ಬಸವಕಟ್ಟೆ ಆಜಾದ್ ನಗರ ಸಿದ್ದನಾಯಕ ವೃತ್ತದ ಕೆಳಭಾಗ ಗೋಪಾಲಪುರ ಕಟುಗರಹಳ್ಳ ಆಶ್ರಯ ಕಾಲೊನಿ ಡಿ.ಸಿ ಕಾಲೋನಿ ಸುತ್ತಮುತ್ತ ಇಂದಿಗೂ ತಗ್ಗು ಪ್ರದೇಶಗಳಲ್ಲಿ ಬಡವರು ವಾಸಿಸುತ್ತಿದ್ದಾರೆ. ಜಿಲ್ಲೆಯ ಬೇರೆ ತಾಲ್ಲೂಕುಗಳಿಗೆ ಹೋಲಿಸಿದಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ಮಲೇರಿಯಾ ಟೈಫಾಯಿಡ್ ಡೆಂಗಿ ಚಿಕೂನ್ ಗುನ್ಯ ಪ್ರಕರಣಗಳು ಹೆಚ್ಚು. ಇದಕ್ಕೆ ಕಾರಣ ಮಲಿನಗೊಂಡಿರುವ ವೇದಾವತಿ ನದಿ ಹಾಗೂ ವಾಣಿ ವಿಲಾಸ ಜಲಾಶಯದ ಎರಡು ನಾಲೆಗಳು ಎನ್ನುತ್ತಾರೆ ಸಾರ್ವಜನಿಕರು. ಬಹುತೇಕ ಕೊಳೆಗೇರಿಗಳು ಮಲಿನಗೊಂಡ ನದಿ ತೀರದಲ್ಲೇ ವಾಸಿಸುತ್ತಿದ್ದಾರೆ. ಬೆಳೆಯುತ್ತಿರುವ ಹಿರಿಯೂರು ನಗರಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದವರು ಸೂಕ್ತ ಯೋಜನೆ ರೂಪಿಸದ ಕಾರಣ ಇಡೀ ನಗರ ಅವ್ಯವಸ್ಥೆಯ ಆಗರವಾಗಿದೆ. ಬಹುತೇಕ ಬಡಾವಣೆಗಳ ತ್ಯಾಜ್ಯವನ್ನು ನೇರವಾಗಿ ನದಿಗೆ ವಾಣಿ ವಿಲಾಸ ನಾಲೆಗಳಿಗೆ ಹರಿಸುತ್ತಿರುವುದು ಮಾಲಿನ್ಯಕ್ಕೆ ಪ್ರಮುಖ ಕಾರಣ ಎಂಬುದು ಸಾರ್ವಜನಿಕರ ಅನಿಸಿಕೆ. ನಗರದ ಬಡಾವಣೆಗಳ ತ್ಯಾಜ್ಯ ನದಿಗೆ ಸೇರದಂತೆ ತಡೆಯಬೇಕು. ನದಿಯಲ್ಲಿ ಬೆಳೆದಿರುವ ಮುಳ್ಳಿನ ಪೊದೆಗಳನ್ನು ಬೇರು ಸಮೇತ ತೆಗೆಸುವ ಜೊತೆಗೆ ನದಿ ಒತ್ತುವರಿ ತೆರವುಗೊಳಿಸಬೇಕು. ನದಿಯ ಎರಡೂ ದಂಡೆಯಲ್ಲಿ ಉದ್ಯಾನ ನಡಿಗೆ ಪಥ ಗಿಡ–ಮರ ಬೆಳೆಸಿದಲ್ಲಿ ಹಲವು ವಿಧದ ಪಕ್ಷಿಗಳಿಗೆ ಆಶ್ರಯ ನೀಡಬಹುದಾಗಿದೆ.
ಮೂಲ ಸೌಕರ್ಯಗಳದ್ದೇ ಸಮಸ್ಯೆ
ಮೊಳಕಾಲ್ಮುರು: ಆಂಧ್ರಪ್ರದೇಶ ಗಡಿಗೆ ಹೊಂಡಿಕೊಂಡಿರುವ ಪಟ್ಟಣ ಒಟ್ಟಾರೆಯಾಗಿ ಅಭಿವೃದ್ಧಿ ಆಗಿಲ್ಲ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಇನ್ನು ಕೊಳಗೇರಿಗಳ ಪರಿಸ್ಥಿತಿ ಕೇಳುವಂತಿಲ್ಲ. ಮೊದಲು ಬೋವಿ ಕಾಲೊನಿ ಮಾತ್ರ ಸರ್ಕಾರ ಗುರುತಿಸಿದ್ದ ಒಂದು ಕೊಳಗೇರಿಯಾಗಿತ್ತು. ಇತ್ತೀಚೆಗೆ ಶ್ರೀನಿವಾಸನಾಯಕ ಬಡಾವಣೆ ಪಿ.ಟಿ. ಹಟ್ಟಿ ಹುಲುಮರಣತಿಪ್ಪೆ ಕೆಎಚ್‌ಡಿಸಿ ಕಾಲೊನಿ ಅಂಬೇಡ್ಕರ್ ಬಡಾವಣೆ ಎದ್ದಲ ಬೊಮ್ಮಯ್ಯನ ಹಟ್ಟಿ ಸೇರಿದಂತೆ ಒಟ್ಟು 8 ಕೊಳಗೇರಿಗಳನ್ನು ಸರ್ಕಾರ ಗುರುತಿಸಿದೆ. ಕೊಳೆಗೇರಿಗಳ ಸಂಖ್ಯೆ ಹೆಚ್ಚುತ್ತಿದ್ದು ಇನ್ನೂ ಹಲವು ಘೋಷಣೆಯಾಗಿಲ್ಲ. ಕೇಂದ್ರ ಸರ್ಕಾರದಿಂದ 500 ಮನೆಗಳು ಮಂಜೂರಾಗಿದ್ದು ಇನ್ನೂ ಅನೇಕ ಮನೆಗಳು ಪೂರ್ಣವಾಗಬೇಕಿವೆ. ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಕೊಳೆಗೇರಿ ನಿವಾಸಿಗಳು ಆರೋಪಿಸುತ್ತಾರೆ. ಜೊತೆಗೆ ಅಧಿಕಾರಿಗಳು ತಮಗೆ ಬೇಕಾದವರಿಗೆ ಮಾತ್ರ ಮನೆ ಮಂಜೂರು ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ಯೋಜನೆ ಪೂರ್ಣಗೊಳಿಸುವಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಅನೇಕ ಕಡೆ ರಸ್ತೆ ಚರಂಡಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಅಂಬೇಡ್ಕರ್ ಬಡಾವಣೆಯಲ್ಲಿ ಹಂದಿಗಳ ಉಪಟಳ ವ್ಯಾಪಕವಾಗಿದೆ. ಜನಪ್ರತಿನಿಧಿಗಳು ಪಟ್ಟಣ ಪಂಚಾಯಿತಿ ವಿಶೇಷ ಅನುದಾನ ಮಂಜೂರಿಗೆ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.
ಘೋಷಣೆಯಾಗದ ಕೊಳೆಗೇರಿಗಳೇ ಹೆಚ್ಚು
ಹೊಸದುರ್ಗ: ಪಟ್ಟಣದಲ್ಲಿ ಹಲವಾರು ಕೊಳಗೇರಿಗಳಿದ್ದು ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಘೋಷಣೆಯಾಗದೇ ಇರುವ ಕೊಳೆಗೇರಿಗಳೇ ಹೆಚ್ಚಾಗಿವೆ. ಬೋರ್ಡ್‌ನಿಂದ ಅನುಮತಿ ಪಡೆದಿರುವ 5 ಕೊಳಗೇರಿಗಳಿವೆ. 9 10ನೇ ವಾರ್ಡ್ ಹಾಗೂ 5ನೇ ವಾರ್ಡ್‌ನ ಗಾಂಧಿನಗರ ಗೌಸಿಯಾನಗರ ಹಾಗೂ ಕಲ್ಲೇಶ್ವರ ಬಡಾವಣೆಗಳಲ್ಲಿ ಮನೆ ರಸ್ತೆ ಚರಂಡಿ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮಂಡಳಿಯಿಂದ ಘೋಷಣೆಯಾಗದ 15ಕ್ಕೂ ಹೆಚ್ಚು ಕೊಳೆಗೇರಿಗಳಿವೆ. ಇದರಲ್ಲಿ 6 ಕೊಳಗೇರಿಗಳನ್ನು ಪರಿಶೀಲಿಸಿ ಕೊಳೆಗೇರಿ ಎಂದು ಘೋಷಿಸುವಂತೆ ಸ್ಲಂ ಬೋರ್ಡ್‌ಗೆ ಅನುಮತಿ ಕೇಳಲಾಗಿದೆ. ಈ ಭಾಗದ ಅಭಿವೃದ್ಧಿಗೆ ಅನುದಾನ ದೊರೆಯುತ್ತಿಲ್ಲ ಹೇಗೋ ಇದ್ದುದ್ದರಲ್ಲಿ ಇಲ್ಲಿಯ ಜನ ಜೀವನ ಸಾಗಿಸುತ್ತಿದ್ದಾರೆ. ಪಟ್ಟಣ ಅಭಿವೃದ್ಧಿಯತ್ತ ಸಾಗುತ್ತಿದ್ದು ಕೊಳಗೇರಿಯವರ ಪರಿಸ್ಥಿತಿ ತುಂಬಾ ಹೀನಾಯವಾಗಿದೆ. ಆರ್ಥಿಕ ಸಾಮಾಜಿಕ ಹಾಗೂ ಆರೋಗ್ಯ ಪರಿಸ್ಥಿತಿಗಳು ಅಧೋಗತಿಗೆ ತಲುಪಿದೆ. ಪಟ್ಟಣದ ಎಲ್ಲಾ ಕೊಳಗೇರಿಗಳನ್ನು ಕೂಡಲೇ ಸ್ಲಂ ಬೋರ್ಡ್ ವ್ಯಾಪ್ತಿಗೆ ತಂದು ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯವಾಗಬೇಕು ಎಂಬುದು ಇಲ್ಲಿಯ ನಿವಾಸಿಗಳ ಒತ್ತಾಯವಾಗಿದೆ.
ಹಕ್ಕುಪತ್ರ ವಿತರಣೆಗಾಗಿ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಜಿಲ್ಲಾಡಳಿತ ಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಇಲ್ಲಿಯವರೆಗೂ ನಮ್ಮ ಬೇಡಿಕೆ ಈಡೇರಿಲ್ಲ. ಈಗಲಾದರೂ ನಮ್ಮ ಬೇಡಿಕೆಗೆ ಅಧಿಕಾರಿಗಳು ಸ್ಪಂದಿಸಬೇಕು-ಗಣೇಶ್ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ
ಫಲಾನುಭವಿಗಳ ವಂತಿಗೆ ಪಾವತಿ ಮಾಡಿದ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಸ್ಥಳೀಯ ಶಾಸಕರು ದಿನಾಂಕ ನಿಗದಿ ಮಾಡುತ್ತಿದ್ದು ಅದರ ಆಧಾರದ ಮೇಲೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ-ನಿಶಾಂತ್ ಸಹಾಯಕ ಎಂಜಿನಿಯರ್ ಕೊಳೆಗೇರಿ ಅಭಿವೃದ್ಧಿ ಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.