ಬುಧವಾರ, ನವೆಂಬರ್ 25, 2020
21 °C
ಸಣ್ಣ ಮಳೆ ಬಂದರೂ ಸೋರುವ ಶ್ರೀರಾಂಪುರ ನಾಡ ಕಚೇರಿ

ವರ್ಷವಾದರೂ ಮಗಿಯದ ಕಟ್ಟಡ ಕಾಮಗಾರಿ

ರವಿಕುಮಾರ್‌ ಸಿರಿಗೊಂಡನಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶ್ರೀರಾಂಪುರ: ಸಣ್ಣ ಮಳೆ ಬಂದರೂ ಕಚೇರಿಯ ಒಳಗೆ ತೊಟ್ಟಿಕ್ಕುವ ಮಳೆ ನೀರು. ಅದರಿಂದ ತಪ್ಪಿಸಿಕೊಳ್ಳಲು ಟೇಬಲ್ ಹಾಗೂ ಕುರ್ಚಿಗಳನ್ನು ಆಚೀಚೆ ಜರುಗಿಸಿ ಕುಳಿತು ಕೆಲಸ ಮಾಡುವ ಸಿಬ್ಬಂದಿ...

ತಾಲ್ಲೂಕಿನಲ್ಲೇ ದೊಡ್ಡ ಹೋಬಳಿ ಕೇಂದ್ರವಾದ ಶ್ರೀರಾಂಪುರ ನಾಡ ಕಚೇರಿಯ ಪರಿಸ್ಥಿತಿ ಇದು.

ಇದುವರೆಗೂ ಬಾಡಿಗೆ ಕಟ್ಟಡದಲ್ಲಿ ಕೆಲಸ ನಡೆಯುತ್ತಿದ್ದು, ಮಳೆ ಬಂದಾಗಲೆಲ್ಲಾ ಕಂಪ್ಯೂಟರ್ ಕೊಠಡಿ, ಉಪತಹಶೀಲ್ದಾರ್ ಕಚೇರಿಯಲ್ಲಿ ನೀರು ಸೋರುತ್ತದೆ. ಸಿಬ್ಬಂದಿ ಕೆಲವೊಮ್ಮೆ ಕಂಪ್ಯೂಟರ್ ಅನ್ನು ತಾಡಪಾಲ್‌ನಿಂದ ಮುಚ್ಚಿಡುತ್ತಾರೆ. ರಾತ್ರಿ ವೇಳೆ ಮಳೆ ಬಂದಾಗ ಕಂಪ್ಯೂಟರ್ ಹಾಳಾಗಿ ಕೆಲವು ಸಲ ನೆಮ್ಮದಿ ಕೇಂದ್ರ ಮುಚ್ಚಲಾಗಿದೆ. ಇದರಿಂದ ಸಾರ್ವಜನಿಕರು, ರೈತರಿಗೆ ಬಹಳಷ್ಟು ತೊಂದರೆಯೂ ಆಗಿದೆ.

ದಾಖಲೆಗಳ ಕೊಠಡಿ ಸುರಕ್ಷಿತವಾಗಿದ್ದು, ಅದರಲ್ಲಿ ನೀರು ತುಂಬಿದರೆ ಹೋಬಳಿಗೆ ಸೇರಿದ ದಾಖಲೆ ಪತ್ರಗಳು ಹಾಳಗಬಹುದು ಎಂಬ ಆತಂಕ ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಕಾಡುತ್ತಿದೆ.

ಇಲ್ಲಿನ ಗೂಳಿಹಳ್ಳಿ ರಸ್ತೆಯಲ್ಲಿನ ನಿವೇಶನದಲ್ಲಿ ನೂತನ ನಾಡಕಚೇರಿ ಕಟ್ಟಡ ನಿರ್ಮಾಣಕ್ಕೆ ಕಳೆದ ವರ್ಷ ಶಾಸಕ ಗೂಳಿಹಟ್ಟಿ ಶೇಖರ್ ಭೂಮಿ ಪೂಜೆ ನೆರವೇರಿಸಿದ್ದರು. ಅದಾದ ನಂತರ ಕೆಲಸ ಆರಂಭಿಸಿದ ನಿರ್ಮಿತಿ ಕೇಂದ್ರದವರು ಬೇಸ್‌ಮೆಂಟ್ ಪೂರ್ಣಗೊಳಿಸಿ ಕೆಲಸ ನಿಲ್ಲಿಸಿದ್ದಾರೆ.

‘ಶ್ರೀರಾಂಪುರ ನಾಡ ಕಚೇರಿಯ ಕಟ್ಟಡಕ್ಕೆ ₹18 ಲಕ್ಷ ಬಿಡುಗಡೆಯಾಗಿದ್ದು, ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿ ತಳಪಾಯದಲ್ಲಿ ಸಡಿಲವಾಗಿ ಮಣ್ಣು ಇದ್ದುದರಿಂದ ತಳಪಾಯಕ್ಕೆ ಹೆಚ್ಚು ಹಣ ಖರ್ಚಾಗಿದೆ. ಇರುವ ಹಣದಲ್ಲಿ ಗೋಡೆ ಕಟ್ಟಡ ನಿರ್ಮಾಣ ಮಾಡಬಹುದು. ಆರ್.ಸಿ.ಸಿ. ಇನ್ನಿತರೆ ಕೆಲಸಗಳಿಗೆ ಅನುದಾನದ ಕೊರತೆಯಾಗುತ್ತದೆ. ಇದನ್ನು ಶಾಸಕರ ಗಮನಕ್ಕೆ ತಂದಿದ್ದು, ಹೆಚ್ಚುವರಿಯಾಗಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ದೀಪಾವಳಿ ಹಬ್ಬದ ನಂತರ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ನಿರ್ಮಿತಿ ಕೇಂದ್ರದ ಎಂಜಿನಿಯರ್ ಕೃಷ್ಣೇಗೌಡ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಮಳೆ ಬಂದಾಗ ಕಚೇರಿ ಸಿಬ್ಬಂದಿ ಕಷ್ಟ ಹೇಳತೀರದು. ಸಂಬಂಧಪಟ್ಟವರು ನಾಡ ಕಚೇರಿಯ ಹೊಸ ಕಟ್ಟಡವನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂಬುದು ಗ್ರಾಮಸ್ಥರ ಆಗ್ರಹ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು