ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಸಚಿವ ಡಿ. ಸುಧಾಕರ್ ಸಲಹೆ

Published 25 ನವೆಂಬರ್ 2023, 14:14 IST
Last Updated 25 ನವೆಂಬರ್ 2023, 14:14 IST
ಅಕ್ಷರ ಗಾತ್ರ

ಹಿರಿಯೂರು: ಉದ್ಯೋಗ ಪಡೆಯಲು ಸಾಮಾನ್ಯ ಜ್ಞಾನದ ಅರಿವು ಅಗತ್ಯ. ಇದನ್ನು ವೃದ್ಧಿಸಿಕೊಳ್ಳಲು ನಿತ್ಯ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸಲಹೆ ನೀಡಿದರು.

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಐಕ್ಯೂಎಸಿ, ಕ್ರೀಡೆ ಸಾಂಸ್ಕೃತಿಕ, ಎನ್‌ಎಸ್ಎಸ್, ಯೂತ್ ರೆಡ್‌ಕ್ರಾಸ್ ಹಾಗೂ ರೋವರ್ಸ್ ಅಂಡ್ ರೇಂಜರ್ಸ್ ಘಟಕಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಸೂಕ್ತ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಲ್ಲಿ ಉತ್ತಮ ಉದ್ಯೋಗ ಪಡೆಯಬಹುದು. ಪ್ರತಿಭೆ ಇದ್ದವರಿಗೆ ಅವಕಾಶಗಳ ಬಾಗಿಲು ಸದಾ ತೆರೆದಿರುತ್ತದೆ’ ಎಂದರು.

‘ಮೊಬೈಲ್‌ ಅತಿಯಾದ ಬಳಕೆಯಿಂದ ಮಾನವ ಸಂಬಂಧಗಳು ಹಾಳಾಗುತ್ತಿವೆ. ನೈತಿಕ ಮೌಲ್ಯಗಳು, ಮಾನವೀಯ ಸಂಬಂಧಗಳನ್ನು ಹೊರತುಪಡಿಸಿದ ಬದುಕಿಗೆ ಅರ್ಥವೇ ಇರದು. ವಿದ್ಯಾರ್ಥಿಗಳು ಸಮಾಜದ ವಿವಿಧ ಮಜಲುಗಳ ಕಡೆಗೂ ಗಮನ ಹರಿಸಬೇಕು’ ಎಂದು ಚಿತ್ರಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಶಿವಲಿಂಗಪ್ಪ ಸಲಹೆ ನೀಡಿದರು.

‘ಸಚಿವ ಸುಧಾಕರ್ ಅವರು ಶಿಕ್ಷಣ ಪ್ರೇಮಿ. 2008ರಿಂದ 2018ರವರೆಗೆ ಶಾಸಕರಾಗಿದ್ದ ಸಮಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹಲವು ಕೊಡುಗೆ ನೀಡಿದ್ದಾರೆ. ವಾಣಿ ಕಾಲೇಜಿನ ಪ್ರವೇಶ ದ್ವಾರದ ಸಮಸ್ಯೆ ಸಂಬಂಧ ಜಾಗ ಬಿಟ್ಟುಕೊಟ್ಟವರ ಮನೆಗೆ ಹೋಗಿ ಅಭಿನಂದನೆ ಹೇಳುವಷ್ಟು ಸರಳತೆ ಅವರಲ್ಲಿದೆ’ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜಿ. ಪ್ರೇಮ್ ಕುಮಾರ್ ಹೇಳಿದರು.

ಪ್ರಾಂಶುಪಾಲ ಆರ್. ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಗಿಡ್ಡೋಬನಹಳ್ಳಿ ಅಶೋಕ್, ಖಾದಿ ರಮೇಶ್, ಲೋಕೇಶ್, ಚಿನ್ನರಾಜು, ರಮ್ಯ, ಮಹಮದ್ ಫಕೃದ್ದೀನ್, ಡಿ. ಧರಣೇಂದ್ರಯ್ಯ, ಜಗನ್ನಾಥ್, ಬಸವರಾಜು ಬೆಳಗಟ್ಟ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT