ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಪನ್ ಆಸ್ಪತ್ರೆ’ ಆರಂಭಕ್ಕೆ ಚಿಂತನೆ: ಸಚಿವ ಶ್ರೀರಾಮುಲು

Last Updated 23 ಮೇ 2020, 15:51 IST
ಅಕ್ಷರ ಗಾತ್ರ

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ರಾಜ್ಯದಲ್ಲಿ ಜೂನ್ ಮತ್ತು ಜುಲೈನಲ್ಲಿ ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಹರಡುವ ಮುನ್ಸೂಚನೆ ಇರುವುದರಿಂದ ಎಲ್ಲಾ ಜಿಲ್ಲೆಗಳಲ್ಲಿ ‘ಒಪನ್ ಆಸ್ಪತ್ರೆ’ಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ರೀಡಾಂಗಣದಂತಹ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ‘ಒಪನ್ ಆಸ್ಪತ್ರೆ’ಗಳನ್ನು ನಿರ್ಮಿಸಲಾಗುವುದು. ಹೊರದೇಶಗಳಲ್ಲಿ ಇಂತಹ ಆಸ್ಪತ್ರೆಗಳನ್ನು ಆರಂಭಿಸಲಾಗಿದೆ. ಇಲ್ಲಿ ಕೊರೊನ ಲಕ್ಷಣಗಳು ಇರಬಹುದಾದ ವ್ಯಕ್ತಿಗಳನ್ನು ಸಾಮೂಹಿಕವಾಗಿ ತಪಾಸಣೆ ಮಾಡಲಾಗುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಮಾಡಲು ಸಾಧ್ಯವಾಗಲಿದೆ. ಕಾರ್ಯಪಡೆ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಗ್ರಾಮೀಣ ಭಾಗಕ್ಕೆ ರೋಗ ಕಾಲಿಡುವ ಆತಂಕ ವ್ಯಕ್ತವಾಗಿದ್ದು, ಹರಡುವಿಕೆಯನ್ನು ಸಮರ್ಥವಾಗಿ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟಿರುವ ಮೂವರು ಆಶಾ ಕಾರ್ಯಕರ್ತೆಯರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿರುವ ರೀತಿಯಲ್ಲಿ ₹ 50 ಲಕ್ಷ ಪರಿಹಾರ ನೀಡಲಾಗುವುದು. ಮುಂದಿನ ದಿನಗಳಲ್ಲೂ ಯಾವುದೇ ಕೊರೊನಾ ವಾರಿಯರ್ಸ್‌ ಸೋಂಕಿನಿಂದ ಮೃತಪಟ್ಟರೂ ₹ 50 ಲಕ್ಷ ಪರಿಹಾರ ನೀಡಲಾಗುವುದು. ಕಂಟೈನ್‌ಮೆಂಟ್‌ ಮತ್ತು ಬಫರ್ ಝೋನ್‌ಗಳಲ್ಲಿ ಮನೆಮನೆ ಭೇಟಿಗೆ ಒತ್ತು ನೀಡಲಾಗುವುದು’ ಎಂದರು.

‘ಎಂಬಿಬಿಎಸ್ ವೈದ್ಯರಿಗೆ ವೇತನ ಹೆಚ್ಚಳ ಮಾಡಿರುವ ರೀತಿಯಲ್ಲಿ ಆಯುಷ್ ವೈದ್ಯರಿಗೂ ವೇತನ ಹೆಚ್ಚಿಸಬೇಕು ಎಂಬ ಬಗ್ಗೆ ಮನವಿ ಬಂದಿದ್ದು, ಇದು ನ್ಯಾಯಸಮ್ಮತವಾಗಿದೆ. ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದರು.

‘ಅನ್ನಪೂರ್ಣ ಯೋಜನೆ’ ಆರಂಭ

ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಕಾರ್ಮಿಕರು, ದಿನಗೂಲಿಗಳು, ಕಚೇರಿ ಕೆಲಸಗಳಿಗಾಗಿ ಬರುವ ಗ್ರಾಮಸ್ಥರಿಗೆ ದಿನವೂ ಮಧ್ಯಾಹ್ನದ ಊಟವನ್ನು ನೀಡುವ ‘ಅನ್ನಪೂರ್ಣ ಯೋಜನೆ’ಯನ್ನು ಸಚಿವ ಶ್ರೀರಾಮುಲು ಅವರು ಮೊಳಕಾಲ್ಮುರಿನಲ್ಲಿ ಸ್ವಂತ ಖರ್ಚಿನಲ್ಲಿ ಆರಂಭಿಸಿದ್ದಾರೆ. ಈ ಸೇವೆಗೆ ಸಚಿವರು ಶನಿವಾರ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT