ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳೊಳಗೆ ಬಗರ್‌ಹುಕುಂ ಅರ್ಜಿ ವಿಲೇವಾರಿ ಮಾಡಿ: ಶಾಸಕ ಎಂ.ಚಂದ್ರಪ್ಪ ಸೂಚನೆ

Last Updated 28 ಮೇ 2022, 3:13 IST
ಅಕ್ಷರ ಗಾತ್ರ

ಹೊಳಲ್ಕೆರೆ: ಒಂದು ತಿಂಗಳ ಒಳಗೆ ಬಗರ್‌ಹುಕುಂ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಶಾಸಕ ಎಂ. ಚಂದ್ರಪ್ಪ ಗ್ರಾಮ ಅರಣ್ಯ ಹಕ್ಕು ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕಿನ ನೇರಲಕಟ್ಟೆಯಲ್ಲಿ ಶುಕ್ರವಾರ ನಡೆದ ‘ಅಧಿಕಾರಿಗಳ ಗ್ರಾಮ ವಾಸ್ತವ್ಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅನೇಕ ಹಳ್ಳಿಗಳಲ್ಲಿ ತಲೆ ತಲಾಂತರದಿಂದ ಜಮೀನು ಸಾಗುವಳಿ ಮಾಡಿದ್ದರೂ ಅವರ ಹೆಸರಿಗೆ ಪಹಣಿ ಬಂದಿಲ್ಲ. ಉಳುಮೆ ಮಾಡುವ ಭೂಮಿಯನ್ನು ನಂಬಿ ಬದುಕುವ ಬಡವರ ಹೆಸರಿಗೆ ಜಮೀನು ನೋಂದಣಿ ಆಗಬೇಕು. ಅಧಿಕಾರಿಗಳು ವಿಳಂಬ ಮಾಡದೆ ನಕ್ಷೆ ತಯಾರಿಸಿ ಕೊಡಬೇಕು. ನಂತರ ನಾನು ಹಾಗೂ ಬಗರ್‌ಹುಕುಂ ಸಮಿತಿಯ ಸದಸ್ಯರು ಪರಿಶೀಲನೆ ಮಾಡುತ್ತೇವೆ. ಒಂದು ತಿಂಗಳ ಒಳಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು. ಗ್ರಾಮದಲ್ಲಿ ಮನೆ ಕಟ್ಟಿಕೊಳ್ಳಲು ಜಾಗದ ಸಮಸ್ಯೆ ಇದೆ ಎಂದು ತಿಳಿಸಿದ್ದೀರಿ. ಯಾರಾದರೂ ಜಮೀನು ನೀಡಿದರೆ ಅದನ್ನು ಖರೀದಿಸಿ ನಿವೇಶನ ಮಾಡಿ ಹಂಚಲಾಗುವುದು. ಗ್ರಾಮಕ್ಕೆ ಅಗತ್ಯವಾದ ಶಾಲಾ ಕೊಠಡಿ, ಸಿಸಿ ರಸ್ತೆ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

‘ತಾಳ್ಯ ಹೋಬಳಿಯ 8 ಕೆರೆಗಳಿಗೆ ನೀರು ಹರಿಸಲು ಈಗಾಗಲೇ ಪೈಪ್‌ಲೈನ್ ಅಳವಡಿಸಲಾಗಿದೆ. ತಾಳ್ಯ ಸಮೀಪ ₹ 22 ಕೋಟಿ ವೆಚ್ಚದಲ್ಲಿ ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಿಸಲಾಗುವುದು. ಮುಂದಿನ 30 ವರ್ಷಗಳ ನಿರೀಕ್ಷೆಯಂತೆ ಕುಡಿಯುವ ನೀರು, ವಿದ್ಯುತ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅಧಿಕಾರಿಗಳು ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಕಚೇರಿಗಳಿಗೆ ಅಲೆದಾಡುವಂತೆ ಮಾಡದೆ ಅವರ ಮನೆಗೇ ಹೋಗಿ ಸೌಲಭ್ಯ ತಲುಪಿಸಬೇಕು’ ಎಂದರು.

15 ಜನರಿಗೆ ಪಿಂಚಣಿ ಪ್ರಮಾಣಪತ್ರ ವಿತರಿಸಲಾಯಿತು. ಗ್ರಾಮಸ್ಥರಿಂದ ಒಟ್ಟು 60 ಅರ್ಜಿಗಳನ್ನು ಸ್ವೀಕರಿಸಲಾಯಿತು. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಯಿತು. ಕೃಷಿ ಅಭಿಯಾನ ಜಾಗೃತಿ ಪ್ರಚಾರ ಆಂದೋಲನಕ್ಕೆ ಚಾಲನೆ ನೀಡಲಾಯಿತು.

ಉಪವಿಭಾಗಾಧಿಕಾರಿ ಚಂದ್ರಯ್ಯ, ತಹಶೀಲ್ದಾರ್ ರಮೇಶಾಚಾರಿ,‌ ಬಸವರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ರವಿ, ಮಮತಾ, ಬಿಜೆಪಿ ಮುಖಂಡ ದಾಸಯ್ಯನ ಹಟ್ಟಿ ರಮೇಶ್, ತಿಮ್ಮೇಶ್, ತಿಮಜ್ಜ, ಬಾಬು, ಬಿಸಿಎಂ ಕಲ್ಯಾಣಾಧಿಕಾರಿ ಪ್ರದೀಪ್ ಕುಮಾರ್, ಬಿಇಒ ತಿಪ್ಪೇಸ್ವಾಮಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕುಮಾರ್ ನಾಯ್ಕ್, ಸಹಾಯಕ ಕೃಷಿ ನಿರ್ದೇಶಕ ಎನ್.ವಿ.ಪ್ರಕಾಶ್, ಪಣಿಯಪ್ಪ ಹಾಗೂ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT