ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮತ ಹಾಕಲು ರಾಜ್ಯದ ಜನರು ಕಾಯುತ್ತಿದ್ದಾರೆ: ಡಿ.ಕೆ.ಶಿವಕುಮಾರ್‌

Last Updated 31 ಜುಲೈ 2022, 13:58 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಿಜೆಪಿ ದುರಾಡಳಿತಕ್ಕೆ ರಾಜ್ಯದ ಜನರು ಬೇಸತ್ತು ಹೋಗಿದ್ದು, ಕಾಂಗ್ರೆಸ್‌ಗೆ ಮತ ಹಾಕಲು ಕಾಯುತ್ತಿದ್ದಾರೆ. ಮತದಾರರ ಮನೆ ಬಾಗಿಲಿಗೆ ತೆರಳಿ ಅವರಿಗೆ ಧ್ವನಿಯಾಗಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪಕ್ಷದ ನಾಯಕರಿಗೆ ತಾಕೀತು ಮಾಡಿದರು.

ತಾಲ್ಲೂಕಿನ ಸೀಬಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಸ್ಮಾರಕದಲ್ಲಿ ಭಾನುವಾರ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದರು.

‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೊರೆ ಹೆಚ್ಚಾಗಿದೆ. ಮೊಸರು, ಮಜ್ಜಿಗೆ, ಆಹಾರ ಧಾನ್ಯಗಳಿಗೂ ತೆರಿಗೆ ವಿಧಿಸಲಾಗಿದೆ. ಬ್ಯಾಂಕ್‌ ವ್ಯವಹಾರಕ್ಕೆ ಬಳಸುವ ಚೆಕ್‌ಬುಕ್‌ಗೂ ಜಿಎಸ್‌ಟಿ ವಿಧಿಸಲಾಗಿದೆ. ತೆರಿಗೆ ಹೊರೆಗೆ ಜನರು ಹೈರಾಣಾಗಿದ್ದಾರೆ. ಮತದಾರರ ಮನೆಗೆ ಭೇಟಿ ನೀಡಿ ಬಿಜೆಪಿ ದುರಾಡಳಿತದ ಬಗ್ಗೆ ಮನವರಿಕೆ ಮಾಡಿಕೊಡಿ’ ಎಂದು ಹೇಳಿದರು.

‘ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಬೇಕು ಎಂಬ ಬಗ್ಗೆ ಜೈಪುರದಲ್ಲಿ ನಡೆದ ಕಾಂಗ್ರೆಸ್‌ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಇದರಿಂದ ಎಚ್ಚೆತ್ತ ಬಿಜೆಪಿ ‘ಹರ್‌ ಘರ್‌ ತಿರಂಗ’ ಘೋಷಣೆ ಮಾಡಿತು. ಇದಕ್ಕೆ ನಮ್ಮ ತಕರಾರು ಇಲ್ಲ. ಆದರೆ, ಇದರ ಮೇಲೆ ವಾರಸುದಾರಿಗೆ ಪ್ರತಿಪಾದಿಸುವುದು ತಪ್ಪು. ತ್ರಿವರ್ಣ ಧ್ವಜ, ರಾಷ್ಟ್ರಗೀತೆ ಕಾಂಗ್ರೆಸ್‌ ಕೊಡುಗೆ’ ಎಂದರು.

‘ಪಕ್ಷದ ಕಾರ್ಯಕರ್ತರನ್ನು ಹುರುಪುಗೊಳಿಸುವ ಹಾಗೂ ಕಾಂಗ್ರೆಸ್‌ ಸಾಧನೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಆ.5ರಿಂದ 10ರ ಒಳಗೆ ಈ ಪಾದಯಾತ್ರೆ ಪೂರ್ಣಗೊಳ್ಳಬೇಕು. ಪಕ್ಷದ ಪ್ರತಿಯೊಬ್ಬರು ಇದರಲ್ಲಿ ಪಾಲ್ಗೊಳ್ಳಬೇಕೆಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಪೇಕ್ಷೆಪಟ್ಟಿದ್ದಾರೆ. ದೇಶವೇ ತಿರುಗಿ ನೋಡುವಂತೆ ಪಾದಯಾತ್ರೆ ಯಶಸ್ವಿಗೊಳಿಸಬೇಕು’ ಎಂದು ಸೂಚಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ‘ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್. ಸೂಜಿಯಿಂದ ಹಿಡಿದು ನ್ಯೂಕ್ಲಿಯರ್ ಬಾಂಬ್‍ವರೆಗೆ ದೇಶ ಎಲ್ಲ ಕ್ಷೇತ್ರದಲ್ಲಿ ಸಾಧನೆ ತೋರಲು ಪಕ್ಷ ಕಾರಣವಾಗಿದೆ. ನಕಲಿ ರಾಷ್ಟ್ರೀಯವಾದಿಗಳು ಕಾಂಗ್ರೆಸ್ ನಾಯಕರುಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‍ ಇತಿಹಾಸವನ್ನು ಯುವ ಸಮೂಹಕ್ಕೆ ತಲುಪಿಸಬೇಕು’ ಎಂದು ಕರೆನೀಡಿದರು.

‘ಬಿಜೆಪಿಗೂ ಚಳವಳಿಗೂ ಸಂಬಂಧವಿಲ್ಲ’

ಆರ್‌ಎಸ್‌ಎಸ್‌, ಬಿಜೆಪಿ ಹಾಗೂ ಸ್ವಾತಂತ್ರ್ಯ ಚಳವಳಿಗೂ ಸಂಬಂಧವಿಲ್ಲ. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು ಎಂದು ಮಾಜಿ ಸಚಿವ ಎಚ್‌.ಆಂಜನೇಯ ಅಭಿಪ್ರಾಯಪಟ್ಟರು.

‘ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿ ದುರಾಡಳಿತ ನಡೆಸುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಎಲ್ಲ ರೀತಿಯ ಕೊಲೆಗಳನ್ನು ಕಾಂಗ್ರೆಸ್‌ ಖಂಡಿಸುತ್ತದೆ. ಹಿಂಸಾಚಾರವನ್ನು ವಿರೋಧಿಸುತ್ತದೆ. ಹತ್ಯೆಯಾದವರ ಕುಟುಂಬಕ್ಕೆ ನೀಡುವ ಪರಿಹಾರದಲ್ಲಿ ಸರ್ಕಾರ ತಾರತಮ್ಯ ಮಾಡಿದೆ. ಹಿಂದೂ ಮುಸ್ಲಿಂ ಸಾಮರಸ್ಯ ಕಾಪಾಡಬೇಕಿದೆ’ ಎಂದು ಹೇಳಿದರು.

ರಾಜ್ಯಸಭೆಯ ಮಾಜಿ ಸದಸ್ಯ ಎಚ್‌.ಹನುಮಂತಪ್ಪ, ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್‌.ಮಂಜುನಾಥ್‌, ವಕ್ತಾರ ಮುರಳಿಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಮುಖಂಡರಾದ ಬಿ.ಜಿ.ಗೋವಿಂದಪ್ಪ, ಹನುಮಲಿ ಷಣ್ಮುಖಪ್ಪ, ಎಂ.ಸಿ.ವೇಣುಗೋಪಾಲ್, ಕೆ.ಶಿವಮೂರ್ತಿನಾಯ್ಕ, ಡಿ.ಸುಧಾಕರ್, ಎ.ವಿ.ಉಮಾಪತಿ, ಎಸ್.ತಿಪ್ಪೇಸ್ವಾಮಿ, ಜಯಮ್ಮ ಬಾಲರಾಜ್ ಇದ್ದರು.

***

ಜಿಲ್ಲೆಯಲ್ಲಿ ಎಲ್ಲರೂ ಒಗ್ಗೂಡಿ, ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದೇವೆ. ಪಕ್ಷದ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷರ ಕಾರ್ಯವೈಖರಿ ಅನುಕರಣೀಯ.

- ಬಿ.ಎನ್.ಚಂದ್ರಪ್ಪ, ಮಾಜಿ ಸಂಸದ

***

ಸ್ವಾತಂತ್ರ್ಯ ಚಳವಳಿಯನ್ನು ಬೇರೆ ಪಕ್ಷದವರು ಹೈಜಾಕ್‌ ಮಾಡಲು ಹವಣಿಸುತ್ತಿದ್ದಾರೆ. ಪಾದಯಾತ್ರೆಯ ಮೂಲಕ ಇದಕ್ಕೆ ಉತ್ತರ ನೀಡಬೇಕು. ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 100 ಕಿ.ಮೀ ಪಾದಯಾತ್ರೆ ನಡೆಯಲಿದೆ.

-ಟಿ.ರಘುಮೂರ್ತಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT