ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಮೇಲೆ ಹಲ್ಲೆ; ಕ್ರಮಕ್ಕೆ ಆಗ್ರಹ

Last Updated 18 ಜೂನ್ 2021, 16:40 IST
ಅಕ್ಷರ ಗಾತ್ರ

ಚಿತ್ರದುರ್ಗ: ದೇಶದಲ್ಲಿ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಮುಂಚೂಣಿಯಲ್ಲಿದ್ದು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆದರೆ ತ್ವರಿತವಾಗಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕಠಿಣ ಕಾನೂನು ರೂಪಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಸದಸ್ಯರು ಶುಕ್ರವಾರ ರಾಷ್ಟ್ರೀಯ ಪ್ರತಿಭಟನೆ ದಿನವನ್ನಾಗಿ ಆಚರಿಸಿದರು.

ಆಸ್ಪತ್ರೆಯಲ್ಲಿ ಹಿಂಸೆ, ಹಾನಿ ಉಂಟು ಮಾಡಿದಲ್ಲಿ ಕೂಡಲೇ ಕ್ರಮ ಜರುಗಿಸಬೇಕು. ಸಮಾಜ ವಿರೋಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮೂಲಕ ಪ್ರಧಾನಿಗೆ ಮನವಿ ರವಾನಿಸಿದರು.

ಕೋವಿಡ್ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ವೈದ್ಯರನ್ನು ಕೋವಿಡ್ ಹುತಾತ್ಮರು ಎಂದು ಪರಿಗಣಿಸಬೇಕು. ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕುಟುಂಬಕ್ಕೆ ವಿಮಾ ಪ್ರಯೋಜನ ವಿಸ್ತರಿಸುತ್ತಿರುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಉತ್ತಮವಾಗಿದೆ. ಆದರೆ, ಮೊದಲ ಅಲೆಯಲ್ಲಿ ಪ್ರಾಣ ಕಳೆದುಕೊಂಡ 754 ವೈದ್ಯರ ಪೈಕಿ ಕೇವಲ 168 ವೈದ್ಯರ ಕುಟುಂಬ ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ. ಅರ್ಹರನ್ನು ಗುರುತಿಸಲು ವ್ಯವಸ್ಥೆ ಕಲ್ಪಿಸಿ, ಅವರ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಕೋವಿಡ್ ಲಸಿಕಾ ಕಾರ್ಯಕ್ರಮ ಅತ್ಯುತ್ತಮವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉಂಟಾಗಬೇಕಿದ್ದ ದೇಶವಾಸಿಗಳ ಜೀವಹಾನಿ ತಪ್ಪಿದಂತಾಗಿದೆ. ಈ ಹೋರಾಟದಲ್ಲಿ ಲಸಿಕೆ ಅತ್ಯಂತ ಪರಿಣಾಮಕಾರಿ ಎಂಬುದು ವಿಶ್ವಕ್ಕೆ ಗೊತ್ತಾಗಿದೆ. ಆದ್ದರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೇಕು ಎಂದು ಮನವಿ ಮಾಡಿದರು.

ಕೋವಿಡ್ ಸಾಂಕ್ರಾಮಿಕ ತೊಡಕನ್ನು ವಿವರವಾಗಿ ಅಧ್ಯಯನ ಮಾಡಲು, ಔಷಧದ ಎಲ್ಲಾ ವಿಭಾಗಗಳಲ್ಲಿ ಬಹುಮುಖಿ ಚಿಕಿತ್ಸಾ ಮಾರ್ಗಸೂಚಿಗಳನ್ನು ಹೊರತರಲು ಪ್ರತ್ಯೇಕ ಸಂಶೋಧನಾ ಕೋಶ ಸ್ಥಾಪಿಸಬೇಕು. ವೈದ್ಯರು ಮಾನಸಿಕ, ದೈಹಿಕ ಕಿರುಕುಳದ ಯಾವುದೇ ಭಯವಿಲ್ಲದೆ ಕೆಲಸ ಮಾಡುವ ವಾತಾವರಣ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಕೋರಿದ್ದಾರೆ.

ಚಿತ್ರದುರ್ಗದ ಐಎಂಎ ಅಧ್ಯಕ್ಷ ಡಾ.ಸಾಲಿಮಂಜುಪ್ಪ, ಕಾರ್ಯದರ್ಶಿ ಡಾ.ಬಿ.ಎನ್.ರವಿಕುಮಾರ್, ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧೀಕ್ಷಕ ಡಾ.ಫಾಲಾಕ್ಷ, ಡಾ.ರಾಜೇಶ್‌, ಡಾ.ವಿಜಯಕುಮಾರ್, ಡಾ.ಶ್ರೀಧರ್‌ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT